ಬ್ಯಾಡಗಿ:
ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದರೇ ಅದಕ್ಕೆ ನೇರವಾದ ಹೊಣೆ ಸುತ್ತಲಿನ ಪಾಲಕರೇ ವಿನಃ ಸರ್ಕಾರವಲ್ಲ ಗ್ರಾಮದಲ್ಲಿಯೇ ಸಿಗುವಂತಹ ಉಚಿತವಾದ ಗುಣಮಟ್ಟದ ಶಿಕ್ಷಣವನ್ನು ತ್ಯಜಿಸಿ ಲಕ್ಷಗಟ್ಟಲೇ ಹಣವ್ಯಯಿಸಿ ಯಾವ ಪುರುಷಾರ್ಥಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಯೋಗೇಶ ಕತ್ಲೇರ ದಿಗ್ಭ್ರಮೆ ವ್ಯಕ್ತಪಡಿಸಿದರು.
ತಾಲೂಕಿನ ಹಿರೇಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಶಿಕ್ಷಣವೆಂದರೆ ಹಣಕೊಟ್ಟು ವಿದ್ಯೆಯನ್ನು ಖರೀದಿಸುವುದಲ್ಲ ಹೀಗಿದ್ದರೂ ಲಕ್ಷಗಟ್ಟಲೇ ಹಣವ್ಯಯಿಸಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವ ಪಾಲಕರಿಗೆ ಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳ ಮಹತ್ವ ಅರಿವಿಗೆ ಬರಲಿದೆ ಎಂದು ಎಚ್ಚರಿಸಿದರು.
ಸರ್ಕಾರಿ ಬಡವರ ಬ್ರಾಂಡ್ ಆಗುತ್ತಿದೆ: ಸರ್ಕಾರಿ ಶಾಲೆಗೆ ಹೋಗುವ ಮಕ್ಕಳೆಂದರೆ ಬಡವರ ಮಕ್ಕಳೆಂಬ ಬ್ರಾಂಡ್ ಆಗಿ ಹೋಗಿದೆ, ಇಲ್ಲಿ ಸಿಗುವ ಯಾವುದೇ ಸೌಲಭ್ಯವನ್ನು ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಕೊಡಲು ಯಾರಿಂದಲೂ ಸಾಧ್ಯವಿಲ್ಲ, ಸರ್ಕಾರಿ ಶಾಲೆಗಳ ಬಗ್ಗೆ ಮಕ್ಕಳಲ್ಲಿ ಇನ್ನಿಲ್ಲದ ಭಾವನೆಯನ್ನು ತುಂಬುವಂತಹ ಕೆಲಸ ಪಾಲಕರಿಂದಾಗುತ್ತಿದೆ ಮೊದಲು ಶಾಲೆಗಳ ಬಗ್ಗೆ ಮೂಗು ಮುರಿಯುವುದನ್ನು ನಿಲ್ಲಿಸಬೇಕು ಎಂದರು.
ಯಾವ ಪುರಷಾರ್ಥಕ್ಕೆ ಖಾಸಗಿ ಶಾಲೆ: ಗ್ರಾಮದಲ್ಲಿಯೇ ಸಿಗುವಂತಹ ಉಚಿತವಾದ ಗುಣಮಟ್ಟದ ಶಿಕ್ಷಣವನ್ನು ತ್ಯಜಿಸಿ ಅಥವಾ ಶಾಲೆಯನ್ನು ಮುಚ್ಚುವ ಹಂತಕ್ಕೆ ತಲುಪುವಂತೆ ಮಾಡಿ ಯಾವ ಪುರುಷಾರ್ಥಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ, ಅಲ್ಲಿ ವ್ಯಯಿಸುವ ಅರ್ಧದಷ್ಟು ನಿಮ್ಮೂರಿನ ಖಾಸಗಿ ಶಾಲೆಗಳಿಗೆ ವ್ಯಯಿಸಿದರಾಗುವುದಿಲ್ಲವೇ..? ಎಂದು ಪ್ರಶ್ನಿಸಿದ ಅವರು, ಖಾಸಗಿ ಶಾಲೆಗಳಿಂದ ಉಪವಾಸ ಮತ್ತು ವನವಾಸ ಎರಡರ ಅನುಭವ ಇಂದಿನ ಮಕ್ಕಳಿಗೆ ಸಿಗುತ್ತಿದ್ದು ಶೈಕ್ಷಣಿಕ ವ್ಯವಸ್ಥೆ ಯಾವ ಹಂತಕ್ಕೆ ತಲುಪುತ್ತಿದೆ ಎಂದು ಅರ್ಥವಾಗುತ್ತಿಲ್ಲ ಎಂದರು.
ಅಮೂಲ್ಯ ಸಂಪತ್ತು: ಮುಖ್ಯ ಶಿಕ್ಷಕ ಎಂ.ಎನ್.ಚಳಗೇರಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಅಮೂಲ್ಯ ಸಂಪತ್ತು, ಮಕ್ಕಳ ಭವಿಷ್ಯ ಪ್ರಜ್ವಲಿಸಲು ಶಿಕ್ಷಣವೆಂಬ ಬೆಳಕಿನ ಅವಶ್ಯವಿದೆ, ಅಲ್ಲದೇ ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಎರ್ಪಟ್ಟಿದ್ದು ದಿನಕ್ಕೊಂದು ನೂತನ ಅವಿ ಷ್ಕಾರಗಳಾಗುತ್ತಿವೆ, ಹೀಗಾಗಿ ಮಕ್ಕಳಲ್ಲಿ ಸಂಶೋಧನಾ ಮನೋಭಾವನೆ ಬೆಳಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾದೇವಪ್ಪ ಚಿಕ್ಕಳ್ಳಿ, ಗಣೇಶ ಬಣಕಾರ, ರಾಮಪ್ಪ ಕಾಸಂಬಿ, ವೀರಣ್ಣ ವಾಸನದ, ಶಿವನಗೌಡ ಬಸನಗೌಡ್ರ, ಗಣೇಶ ಚಿಕ್ಕಳ್ಳಿ, ಅಶೋಕ. ಶಿವಯೋಗಿ ಗಂಗಪ್ಪ, ಗಂಗಾಧರ, ಪರಮೇಶ್ವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
