ಬೆಂಗಳೂರು
ಜನರ ಜೀವ ಉಳಿಸಅಬೇಕಾದ ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯನೊಬ್ಬ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ರಸ್ತೆ ದಾಟುತ್ತಿದ್ದ ಯುವಕನ ಸಾವಿಗೆ ಕಾರಣನಾಗಿರುವ ದುರ್ಘಟನೆ ಭಾನುವಾರ ಮಧ್ಯರಾತ್ರಿ ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದಿರಾನಗರ ದೊಮ್ಮಲೂರು ಮೇಲು ಸೇತುವೆಯ ಕೆಳರಸ್ತೆಯಲ್ಲಿ ನಡೆದ ಈ ದುರ್ಘಟನೆಯಲ್ಲಿ ದೊಮ್ಮಲೂರು ಲೇಔಟ್‍ನ ಕೆವಿನ್(18)ಮೃತಪಟ್ಟಿದ್ದಾನೆ.
ಹೂವಿನ ಅಲಂಕಾರದ ಕೆಲಸ ಮಾಡುತ್ತಿದ್ದ ಕೆವಿನ್ ರಾತ್ರಿ 12.30ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಇಬ್ಬರು ಸ್ನೇಹಿತರ ಜೊತೆ ನಡೆದುಕೊಂಡು ಬರುತ್ತಿದ್ದರು.ಮನೆಗೆ ಹೋಗುವ ಅತುರದಲ್ಲಿ ದೊಮ್ಮಲೂರು ಮೇಲು ಸೇತುವೆಯ ಕೆಳರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಡಲೇ ಕೆವಿನ್‍ನನ್ನು ಬಿಎಂಡ್ಲ್ಯೂ ಕಾರು ಚಲಾಯಿಸುತ್ತಿದ್ದ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ರವಿತೇಜ ಅವರು ತಮ್ಮದೇ ಕಾರಿನಲ್ಲಿ ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಡಾ. ರವಿತೇಜ ಅವರು ರಾತ್ರಿ ಸ್ನೇಹಿತರ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.ಪ್ರಕರಣ ದಾಖಲಿಸಿರುವ ಹಲಸೂರು ಸಂಚಾರ ಪೊಲೀಸರು ಡಾ.ರವಿತೇಜ ಅವರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
