ಗುಬ್ಬಿ
ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕೊಡಗು ಹಾಗೂ ಮಡಿಕೇರಿ ಜಿಲ್ಲೆಗಳ ಜನ ಜೀವನ ಅಸ್ತವ್ಯಸ್ತವಾಗಿದ್ದು ಮಳೆ ನೀರಿನಿಂದ ಸಂತ್ರಸ್ಥರಾದವರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಗಂಜಿ ಕೇಂದ್ರಗಳಿಗೆ ತಲುಪಿಸಲು ತಾಲ್ಲೂಕಿನ ನಿಟ್ಟೂರಿನ ವಿವಿಧ ಸಂಘಗಳು ಮತ್ತು ಸಾರ್ವಜನಿಕರು ಮಾನವೀಯತೆ ಮೆರೆದಿದ್ದಾರೆ.
ತಾಲ್ಲೂಕಿನ ನಿಟ್ಟೂರಿನ ವರ್ತಕರ ಸಂಘ, ರೋಟರಿ ಸಂಸ್ಥೆ, ವಿವೇಕ ಚಿಂತನ ಸಂಸ್ಥೆ, ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಇಡೀ ದಿನ ನಿಟ್ಟೂರು ಗ್ರಾಮದ ಅಂಗಡಿ, ಹೋಟೆಲ್ ಸೇರಿದಂತೆ ವಿವಿಧ ಕಡೆಗಳಿಗೆ ತೆರಳಿ ಉದಾರವಾಗಿ ನೀಡಿದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ್ದು ಇವುಗಳನ್ನು ಸಂತ್ರಸ್ಥರಾದವರಿಗೆ ತಲುಪಿಸುವಂತಹ ಕಾರ್ಯದಲ್ಲಿ ತೊಡಗಿದ್ದರು.
ದಾನಿಗಳಿಂದ ಅಕ್ಕಿ, ಗೋದಿ, ಬಟ್ಟೆ, ಬಿಸ್ಕೇಟ್, ಚಪ್ಪಲಿ, ಔಷಧಿ, ಪೇಸ್ಟ್, ಬ್ರಶ್, ಹಣ್ಣುಗಳು ಸೇರಿದಂತೆ ಸಾಕಷ್ಟು ಅಗತ್ಯವಾದಂತಹ ವಸ್ತುಗಳನ್ನು ಉದಾರವಾಗಿ ನೀಡಿದರು. ಇನ್ನೂ ಅಲ್ಲಿನ ಕೆಲ ಮಹಿಳೆಯರು ಇದನ್ನು ಗಮನಿಸಿ ನÀಮ್ಮ ಕೊಡುಗೆಯನ್ನು ನೀಡುವುದಾಗಿ ಸುಮಾರು ಎರಡು ಸಾವಿಕ್ಕೂ ಹೆಚ್ಚು ಚಪಾತಿಗಳನ್ನು ತಯಾರಿಸಿ ಸಂತ್ರಸ್ಥರ ಗಂಜಿ ಕೇಂದ್ರಕ್ಕೆ ಕಳುಹಿಸಲು ಮಾನವೀಯತೆ ತೋರಿದರು.
ಸಂತ್ರಸ್ಥರ ಗಂಜಿ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿರುವ ಮಾಹಿತಿ ತಿಳಿದ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಸ್ ನಿಲ್ದಾಣದ ಬಳಿ ಬಂದು ಸುಮಾರು 20 ಸಾವಿರ ರೂಗಳಷ್ಟು ಹಣವನ್ನು ನೀಡಿದರು. ಸಂಗ್ರಹಿಸಿದ ಅಗತ್ಯ ವಸ್ತುಗಳ ಜೊತೆಗೆ ಸಾರ್ವಜನಿಕರು ನೀಡಿದ ಇಪ್ಪತ್ತು ಸಾವಿರ ಹಣದಲ್ಲಿ ಸಂತ್ರಸ್ಥರಿಗೆ ಬೇಕಾಗಿರುವ ಬೆಡ್‍ಶೀಟ್, ಪೇಸ್ಟ್, ಬ್ರೆಡ್ ಇತರೆ ಸಾಮಾನುಗಳನ್ನು ಖರೀದಿಸಿ ವಾಹನದ ಮೂಲಕ ಮಡಿಕೇರಿ ಸಂತ್ರಸ್ಥರ ಗಂಜಿ ಕೇಂದ್ರಗಳಿಗೆ ಕಳುಹಿಸಿಕೊಡಲಾಯಿತು.
ಕೊಡಗು ಮತ್ತು ಮಡಿಕೇರಿ ಜಿಲ್ಲೆಗಳ ನಿರಾಶ್ರಿತರ ಸಮಸ್ಯೆಗಳಿಗೆ ಸ್ಪಂದಿಸುವುದು ಮಾನವೀಯತೆಯಾಗಿದ್ದು ಪ್ರತಿಯೊಬ್ಬರೂ ಇಂತಹ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಸಹಾಯ ಮತ್ತು ಸಹಕಾರ ನೀಡುವುದು ಅನಿವಾರ್ಯವಾಗಿದ್ದು ನಿಟ್ಟೂರು ಗ್ರಾಮದ ಅಂಗಡಿ ಮತ್ತು ಹೋಟೆಲ್‍ನವರು ಮತ್ತು ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕಾರ ನೀಡಿರುವುದಕ್ಕೆ ಸಂಗ್ರಹಣೆ ಕಾರ್ಯದಲ್ಲಿ ತೊಡಗಿದ್ದವರು ಕೃತಜ್ಞತೆ ಸಲ್ಲಿಸಿದರು.
