ಗೆಲುವು ಸಾಧಿಸಬೇಕಾದರೆ ಮೈತ್ರಿ ಸರ್ಕಾರವನ್ನು ಪತನಗೊಳಿಸುವುದು ಅನಿವಾರ್ಯ: ಬಿ.ಎಸ್.ವೈ

ಬೆಂಗಳೂರು:

             ಮುಂಬರುವ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಾದರೆ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಸೂಕ್ತ ಕಾರ್ಯತಂತ್ರ ರೂಪಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿರ್ದೇಶನ ನೀಡಿದ್ದಾರೆ.

              ಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮುರಿಯಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಶಾಸಕರನ್ನು ಸೆಳೆದು ಬಿಜೆಪಿ ಸರ್ಕಾರ ಪ್ರತಿಷ್ಠಾಪನೆ ಮಾಡಬೇಕು. ಈ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡುವಂತೆ ನಿರ್ದೇಶನ ನೀಡಿದ್ದಾರೆ.

             ಕಳೆದೊಂದು ವಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮಿತ್ ಶಾ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಅತ್ಯಂತ ಯಶಸ್ವಿಯಾಗಿ ನಡೆಯಬೇಕು. ಹಾಗೊಂದು ವೇಳೆ ವಿಫಲವಾದರೆ ದೇಶದ ಜನರ ಮುಂದೆ ನಗೆಪಾಟಿಲಿಗೀಡಾಗುತ್ತೇವೆ ಎಂದು ಕಿವಿ ಮಾತು ಹೇಳಿದ್ದಾರೆ.

             ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ನೀವು ಆಪ್ರಯತ್ನಕ್ಕೆ ಕೈ ಹಾಕಲೇಬಾರದು. ಶಾಸರಕನ್ನು ರೆಸಾರ್ಟ್‍ಗೆ ಕರೆದೊಯ್ಯುವುದು, ಇಲ್ಲವೇ ಬೇರೊಬ್ಬ ಶಾಸಕರನ್ನು ಪಕ್ಷಕ್ಕೆ ಕರೆತರುವುದು ನಮಗೆ ಸರಿ ಎನಿಸುತ್ತಿಲ್ಲ. ಇದಕ್ಕೆ ಇತ್ಯರ್ಥ ಹಾಡಲೇಬೇಕೆಂದು ಸೂಚಿಸಲಾಗಿದೆ. ಹೈಕಮಾಂಡ್‍ನಿಂದ ಹಸಿರು ನಿಶಾನೆ ಸಿಕ್ಕ ಬಳಿಕವೇ ಯಡಿಯೂರಪ್ಪ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ. ಇನ್ನು ಒಂದು ತಿಂಗಳ ಅವಧಿಯಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಿ ಬಿಜೆಪಿ ಅಧಿಕಾರ ಹಿಡಿಯಬೇಕು. ಈ ಪ್ರಯತ್ನದಲ್ಲಿ ಹಿನ್ನಡೆಯಾದರೆ ಲೋಕಸಭೆ ಚುನಾವಣೆವರೆಗೂ ಎಲ್ಲವನ್ನು ಕಾದುನೋಡುವ ತಂತ್ರಕ್ಕೆ ಶರಣಾಗಬೇಕೆಂಬ ತೀರ್ಮಾನಕ್ಕೂ ಬರಲಾಗಿದೆ.

             ಈ ಮಧ್ಯೆ ಸುದ್ದಿಗಾರರ ಜತೆ ಮಾತನಡಿದ ಯಡಿಯೂರಪ್ಪ, ಎರಡು ಮೂರು ದಿನ ಎಲ್ಲ ಶಾಸಕರು ಕಾಯಿರಿ. ಚೌತಿ ಹಬ್ಬ ಮುಗಿದ ಬಳಿಕ ಶುಭ ಸುದ್ದಿ ಸಿಗಲಿದೆ. ಯಾರೊಬ್ಬರು ಆತುರ ಪಡಬಾರದು ಎಂದಿದ್ದಾರೆ.

          ಚೌತಿ ಹಬ್ಬ ಮುಗಿಯುತ್ತಿದ್ದಂತೆ ಬಿಜೆಪಿಗೆ ಶುಭ ಸುದ್ದಿ ಸಿಗಲಿದೆ. ಹೆಚ್ಚೆಂದರೆ ಎರಡು ಮೂರು ದಿನ ಮಾತ್ರ ಕಾದರೆ ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಬೇರೆ ಪಕ್ಷಗಳ ಆಮಿಷಕ್ಕೆ ಬಲಿಯಾಗಬೇಡಿ ಎಂದು ಸಲಹೆ ಮಾಡಿದರು.

              ಸರ್ಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್-ಜೆಡಿಎಸ್‍ನವರು ನಿಮಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡಬಹುದು. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಇನ್ನು ಒಂದು ತಿಂಗಳು ಇರುವುದಿಲ್ಲ. ನಾವು ಏನು ಮಾಡುತ್ತಿದ್ದೇವೆ ಎಂಬುದು ಬೇರೆಯವರಿಗೆ ತಿಳಿಯಬಾರದು. ಎಚ್ಚರಿಕೆಯಿಂದ ಪ್ರತಿಯೊಬ್ಬರು ಇರಬೇಕೆಂದು ಸೂಚಿಸಿದ್ದಾರೆ. ಕಾಂಗ್ರೆಸ್‍ನಲ್ಲಿ ಅನೇಕ ಶಾಸಕರಿಗೆ ಸರ್ಕಾರ ಮುಂದುವರೆಯಲು ಇಷ್ಟವಿಲ್ಲ. ಪ್ರತಿಯೊಂದು ವಿಷಯದಲ್ಲೂ ಕೆಲವರು ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ಅನೇಕರು ಅಸಮಾಧಾನಗೊಂಡಿದ್ದಾರೆ.