ನಾಗಾಲೋಟದಲ್ಲಿ ತೈಲಬೆಲೆ-ಅಗತ್ಯ ವಸ್ತುಗಳ ಬೆಲೆ ಏರಿಕೆ!!

 ತುಮಕೂರು :

       ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುತ್ತಲೆ ಇದ್ದು, ಈ ದರ ಹೆಚ್ಚಳ ಜನ ಜೀವನವದ ವ್ಯವಸ್ಥೆಯನ್ನೆ ಅಲುಗಾಡಿಸುತ್ತಿದೆ. ಕೊರೊನಾ ಲಾಕ್‍ಡೌನ್ ಸಂಕಷ್ಟದಲ್ಲಿ ಸಿಲುಕಿರುವ ಜನತೆಗೆ ಮತ್ತೊಂದು ಬರೆ ಎಂಬಂತೆ ತೈಲ ದರ ತತ್ತರಿಸುವಂತೆ ಮಾಡಿದೆ.

      ಈಗಾಗಲೆ ಪ್ರತಿ ಲೀಟರ್‍ಗೆ ಶತಕ ಬಾರಿಸಿರುವ ಪೆಟ್ರೋಲ್ ದರ ಸದ್ಯಕ್ಕಂತೂ ಇಳಿಕೆಯ ಸೂಚನೆಗಳು ಕಂಡುಬರುತ್ತಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದ ಬಿಸಿ ಈಗ ಇನ್ನಷ್ಟೆ ಜನಸಾಮಾನ್ಯರಿಗೆ ತಟ್ಟಲಿದೆ. ಇಷ್ಟು ದಿನಗಳ ಕಾಲ ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ದ್ವಿಚಕ್ರ ವಾಹನ ಸೇರಿದಂತೆ ವಿವಿಧ ರೀತಿಯ ವಾಹನಗಳು ಈಗ ರಸ್ತೆಗೆ ಇಳಿಯುತ್ತಿವೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳದೊಂದಿಗೆ ಜನರು ಬದುಕು ಸವೆಸಬೇಕಾದ ಅನಿವಾರ್ಯತೆಗೆ ಸಿಲುಕುವಂತಾಗಿದೆ.

      ಇದು ಕೇವಲ ವಾಹನಗಳನ್ನು ಬಳಸುವವರಿಗೆ ಮಾತ್ರವೆ ಬಿಸಿ ತಟ್ಟುವಂತಹದ್ದಲ್ಲ. ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸುತ್ತಿದ್ದು, ಒಂದಕ್ಕೊಂದು ಪೂರಕ ಎನ್ನುವಂತೆ ಎಲ್ಲ ವಸ್ತುಗಳ ಮೇಲೆಯೂ ಪರೋಕ್ಷ ಪರಿಣಾಮ ಬೀರುತ್ತಿದೆ. ಸಾರಿಗೆ ಸಂಚಾರ ವ್ಯವಸ್ಥೆಯಿಂದ ಹಿಡಿದು ಮನೆಗೆ ಬರುವ ದಿನಬಳಕೆ ವಸ್ತುಗಳ ತನಕ ಎಲ್ಲವೂ ಏರುಪೇರಾಗುತ್ತಿದೆ. ಅಗತ್ಯ ವಸ್ತುಗಳೆಲ್ಲವೂ ಗಗನಕ್ಕೆ ಹೋಗುತ್ತಿದ್ದು, ಸಾಮಾನ್ಯ ಜನರ ಬದುಕು ಅತ್ಯಂತ ದುಸ್ತರವಾಗುತ್ತಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ. 30ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ದರ ಹೆಚ್ಚಳ ಅಗತ್ಯ ವಸ್ತುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ವಸ್ತುಗಳ ದರ ಏರಿಕೆಯಾಗುವಂತೆ ಮಾಡುತ್ತದೆ. ದರ ಹೆಚ್ಚಳ ಅಂತಾರಾಷ್ಟ್ರೀಯ ಮಾರುಕಟ್ಟೆಯ ನಿರ್ಧಾರ ಎಂದು ಸರ್ಕಾರಗಳು ಹೇಳುತ್ತಿವೆಯಾದರೂ ತೆರಿಗೆ ಪ್ರಮಾಣದಲ್ಲಿ ಕಡಿತಗೊಳಿಸಬಹುದಾದ ಅವಕಾಶಗಳು ಸರ್ಕಾರಕ್ಕೆ ಇದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ತ ಗಮನ ಹರಿಸುತ್ತಿಲ್ಲ.

      ಲಾಕ್‍ಡೌನ್ ಸಂದರ್ಭದಲ್ಲಿ ಜನ ಮನೆಯಿಂದ ಹೊರಬರಲು ಸಾಧ್ಯವಾಗಿಲ್ಲ. ದುಡಿಮೆ ಎಂಬುದು ಬಹಳಷ್ಟು ಜನರಿಗೆ ಇಲ್ಲ. ಮುಂದಿನ ದಿನಗಳನ್ನೆ ಎದುರು ನೋಡುತ್ತಿರುವ ಬಹಳಷ್ಟು ಮಂದಿ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತೈಲ ಬೆಲೆ ಹೆಚ್ಚುತ್ತಿರುವುದು, ಅದರ ಹಿಂದೆಯೆ ಇತರೆ ವಸ್ತುಗಳ ಬೆಲೆ ಗಗನಕ್ಕೇರುವುದು ಆತಂಕ ಸೃಷ್ಟಿ ಮಾಡಿದೆ.

      ತೈಲೋತ್ಪನ್ನದಿಂದ ಸರ್ಕಾರಗಳಿಗೆ ಉತ್ತಮ ಆದಾಯ ಸಿಗುತ್ತಿದೆ. ಸರ್ಕಾರದ ಬೊಕ್ಕಸ ಭರ್ತಿಯಾಗುತ್ತಿದೆ. ಕಳೆದ ಆರು ವರ್ಷಗಳಲ್ಲಿ ದೇಶದ ಚಿತ್ರಣ ಅವಲೋಕಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹ ಶೇ.30 ರಷ್ಟು ಏರಿಕೆಯಾಗಿದೆ. 2020-21ರ ಹಣಕಾಸು ವರ್ಷದ ಮೊದಲ 10 ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‍ನಿಂದ 2.94 ಲಕ್ಷ ಕೋಟಿ ರೂ. ಹಣ ಸಂಗ್ರಹಿಸಿದೆ.

      2014 ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಶೇ. 9.48 ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಪ್ರಸ್ತುತ ಅದು ಶೇ. 32.90 ಗೆ ಏರಿಕೆಯಾಗಿದೆ. ಡೀಸೆಲ್ ಸಹ 3.56 ರಿಂದ 31.80 ರವರೆಗೆ ಏರಿಕೆ ಕಂಡಿದೆ. ದೇಶದಲ್ಲಿ ಕೆಲವೇ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ಬಹುತೇಕ ರಾಜ್ಯಗಳು ಕೇಂದ್ರದ ಮಾದರಿಯನ್ನೇ ಅನುಸರಿಸುತ್ತಿದ್ದು, ಅಷ್ಟೇ ತೆರಿಗೆಯನ್ನು ರಾಜ್ಯ ಸರ್ಕಾರಗಳು ವಿಧಿಸುತ್ತಿವೆ. ಹೀಗೆ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ವಿಧಿಸುವ ತೆರಿಗೆಯಿಂದಾಗಿ ತೈಲ ಬೆಲೆ ದುಪ್ಪಟ್ಟಾಗುತ್ತಿದ್ದು, ಇದರ ಹೊರೆ ವಾಹನ ಸವಾರರು ಹೊರಬೇಕಾಗಿದೆ.

     ಕೋವಿಡ್ ಸಂಕಷ್ಟದಲ್ಲಿ ಜನತೆ ಇರುವಾಗ ಕೇಂದ್ರ ಸರ್ಕಾರವು ತೈಲದ ಮೇಲಿನ ಸುಂಕ ಇಳಿಸಲು ನಿರಾಕರಿಸಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರವೆ ತೈಲ ಬೆಲೆ ಸುಂಕ ಏರಿಸದೆ ಸ್ಥಿರತೆ ಕಾಯ್ದುಕೊಳ್ಳುವ ಜಾಣತನವನ್ನು ನಾವು ಈ ಹಿಂದಿನ ಸಂದರ್ಭಗಳಲ್ಲಿ ಗಮನಿಸಬಹುದು. 2020ರ ಸೆಪ್ಟೆಂಬರ್ ತಿಂಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಾಯಿತು. ಅಕ್ಟೋಬರ್‍ನಿಂದ ನವೆಂಬರ್‍ವರೆಗೆ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಯಾವುದೆ ಬದಲಾವಣೆಯಾಗಲಿಲ್ಲ. 2021ರ ಫೆಬ್ರ್ರುವರಿಯಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಅಂದಿನಿಂದಲೆ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಬದಲಾವಣೆ ನಿಲ್ಲಿಸಲಾಯಿತು. ಮೇ 2 ರಂದು ಚುನಾವಣಾ ಫಲಿತಾಂಶ ಪ್ರಕಟವಾಯಿತು. ಈ ಅವಧಿಯಲ್ಲಿ ಎರಡು ಬಾರಿ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬದಲಾವಣೆ ಮಾಡಲಾಗಿತ್ತು.

      ತೈಲದರ ಏರಿಕೆ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ ಎಂದು ಹೇಳಲಾಗುತ್ತದೆ. ಆದರೆ ಸುಂಕ ಹೇರಿಕೆ ಸರ್ಕಾರಗಳದ್ದೆ ಆಗಿರುವಾಗ ಇದರ ನಿಯಂತ್ರಣ ಸರ್ಕಾರದ್ದೆ ಅಲ್ಲವೆ?

      ತೈಲ ದುಬಾರಿಯಾಗುತ್ತಿದ್ದರೂ ಕೇಂದ್ರ ಸರ್ಕಾರ ಸುಂಕ ಇಳಿಸಲು ನಿರಾಕರಿಸಿದೆ. ಸರ್ಕಾರದ ಬೊಕ್ಕಸಕ್ಕೆ ಉತ್ತಮ ಆದಾಯ ತಂದು ಕೊಡುತ್ತಿರುವಾಗ ಸರ್ಕಾರ ಈ ನಿರ್ಧಾರವನ್ನು ಬದಲಿಸಲು ಹೇಗೆ ಸಾಧ್ಯ? ಯಾವುದೇ ಒಂದು ಸರ್ಕಾರ ಜನರ ಹಿತ ಬಯಸಬೇಕಾದರೆ ಆ ಕ್ಷಣದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರವೆ ಜನರ ಹಿತ ಕಾಯಬೇಕು. ಆದರೆ ಸರ್ಕಾರಕ್ಕೆ ಬರುವ ಆದಾಯ ತಪ್ಪದಂತೆ ನೋಡಿಕೊಳ್ಳುವ ಜಾಣ ನಡೆ ಸರ್ಕಾರಗಳಿಗೆ ಇರುವಾಗ ಸುಂಕ ಕಡಿಮೆ ಮಾಡುವ ಮನಸ್ಸಾದರೂ ಎಲ್ಲಿ ಬರಬೇಕು? ಕೆಲವು ರಾಜ್ಯಗಳು ವ್ಯಾಟ್ ತೆರಿಗೆಯನ್ನು ಸ್ವಲ್ಪ ಮಟ್ಟಿಗೆ ಇಳಿಸಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇಡೀ ವ್ಯವಸ್ಥೆಯ ಮೇಲೆ ಪರಿಣಾಮ : 

     ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಕೇವಲ ವಾಹನಗಳ ಮೇಲೆ ಪರಿಣಾಮ ಬೀರುತ್ತಿಲ್ಲ. ಇಡೀ ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹಿಂದೆ ತೈಲ ಬೆಲೆಯ ಹೆಚ್ಚಳ ಇರುವುದು ಸ್ಪಷ್ಟ. ಯಾವುದೇ ಸರಕು ಸಾಮಾನು ಖರೀದಿಸಿದರೂ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇದ್ದ ದರಕ್ಕೂ, ಈಗಿನ ದರಕ್ಕೂ ಸಾಕಷ್ಟು ವ್ಯತ್ಯಾಸವಾಗಿದೆ. ಗಗನಕ್ಕೇರುತ್ತಿರುವ ಬೆಲೆಯಿಂದಾಗಿ ಜನತೆ ಹೈರಾಣಾಗಿ ಹೋಗಿದ್ದಾರೆ. ಈಗಾಗಲೆ ಕೊರೊನಾ ಸಂಕಷ್ಟದಲ್ಲಿ ನಲುಗಿರುವ ಜನತೆಯ ಮೇಲೆ ತೈಲ ಬೆಲೆ ಏರಿಕೆ ಮತ್ತೊಂದು ಹೊಡೆತ. ಪರೋಕ್ಷವಾಗಿ ಇತರೆ ವಸ್ತುಗಳ ಬೆಲೆ ಏರಿಕೆಯ ಬಿಸಿಯನ್ನು ಜನತೆ ಅನುಭವಿಸಲೇಬೇಕಾದ ದುರಂತ ಸ್ಥಿತಿ.

 

Recent Articles

spot_img

Related Stories

Share via
Copy link
Powered by Social Snap