ದಾವಣಗೆರೆ :
ಗೈರು ಹಾಜರಾದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ನಗರದ ಹೊರಭಾಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಗೆ ಕೆಲ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದು ಹಾಗೂ ಸಭೆಗೆ ಕೆಲ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದ ಕಾರಣ ಜಿ.ಪಂ. ಅಧ್ಯಕ್ಷರಾದಿಯಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಜೆ.ಸವಿತಾ ಮಾತನಾಡಿ, ಇಂದಿನ ಸಭೆಗೆ ಬಹಳಷ್ಟು ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಹಾಜರಿಯಾಗಿದ್ದಾರೆ. ಸಭೆಗೆ ಅಧಿಕಾರಿಗಳು ಬಾರದಿದ್ದರೆ, ಸಭೆ ಯಾವ ಪುರುಷಾರ್ಥಕ್ಕೆ ನಡೆಸಬೇಕೆಂದು ಏರು ದನಿಯಲ್ಲಿ ಪ್ರಶ್ನಿಸಿದರು.
ಇದಕ್ಕೆ ದನಿ ಗೂಡಿಸಿದ ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲ, ಸಭೆಗೆ ಗೈರು ಹಾಜರಾಗುವ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಧಿಕಾರಿಗಳಿಗೆ ಯಾವದೇ ಕಾರಣಕ್ಕೂ ಸಭೆಯನ್ನು ತಪ್ಪಿಸಬಾರದು ಎಂಬುದಾಗಿ ಸೂಚನೆ ನೀಡಲಾಗಿತ್ತು. ಅಕಸ್ಮಾತ್ ಬೇರೆ ಸಭೆ, ಸಮಾರಂಭಗಳಿಗೆ ಹೋಗಲೇಬೇಕಾದ ಪರಿಸ್ಥಿತಿ ಇದ್ದರೆ, ದಾಖಲೆ ಸಮೇತ ಸಕಾರಣ ನೀಡಿ ಹೋಗುವಂತೆ ಮಾರ್ಗದರ್ಶನ ನೀಡಲಾಗಿತ್ತು. ಆದರೆ, ನಮ್ಮ ಗಮನಕ್ಕೆ ಬಾರದೇ, ಹೀಗೆ ಗೈರು ಹಾಜರಿಯಾಗುತ್ತಿರುವುದು ಮತ್ತೆ ಮರುಕುಳಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಪರವಾಗಿ ಸಭೆಗೆ ಆಗಮಿಸಿದ್ದ ಅಧಿಕಾರಿಯೊಬ್ಬರು ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ವಾಗೇಶ್ ಸ್ವಾಮಿ ಮಾತನಾಡಿ, ಸಾಮಾನ್ಯ ಜ್ಞಾನ ಇಲ್ಲದೆ ಅಧಿಕಾರಿಗಳು ಇಲ್ಲಿಗೆ ಬಂದು ಬೇಜವಾಬ್ದಾರಿಯಿಂದ ಉತ್ತರ ನೀಡುತ್ತಾರೆ. ಈ ರೀತಿ ಆದಲ್ಲಿ ಸಭೆಯಲ್ಲಿ ಪ್ರಶ್ನೇ ಕೇಳುವವರಿಗೂ ಅರ್ಥ ಇಲ್ಲ, ಉತ್ತರ ಹೇಳುವವರಿಗೆ ಅರ್ಥ ಇಲ್ಲ. ಹೀಗಾಗಿ, ಈ ಸಭೆಯಲ್ಲಿ ಇಲ್ಲಿಗೆ ನಿಲ್ಲಿಸುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಅನುಪಾಲ ವರದಿಯೂ ತಾರದೇ ಹಾಗೂ ಸರಿಯಾದ ಮಾಹಿತಿ ನೀಡದ ಆ ಶಿಕ್ಷಣ ಇಲಾಖೆ ಅಧಿಕಾರಿಯನ್ನು ಸಭೆಯಲ್ಲಿ ನಿಂತಿರುವಂತೆ ಸೂಚಿಸಿದ ಅಧ್ಯಕ್ಷರು, ನಂತರ ಅನುಪಾಲನ ವರದಿ ತರುವಂತೆ ಸಭೆಯಿಂದ ಹೊರ ಕಳಿಸಿದರು.
ಕೋಳಿ ಬೇಡ, ಕುರಿ ಕೊಡಿ:
ಪಶು ಸಂಗೋಪನಾ ಇಲಾಖೆ ಅಧಿಕಾರಿ ಮಾತನಾಡಿ, ರೈತ ಮಹಿಳೆಯರಿಗೆ ಅನುಕೂಲ ಆಗಲೆಂದು ಸರ್ಕಾರ ಗಿರಿರಾಜ ಕೋಳಿಗಳನ್ನು ಕೊಡುತ್ತದೆ. ಎಸ್ಸಿ ಜನಾಂಗಕ್ಕೆ ಉಚಿತ, ಬೇರೆ ಜನಾಂಗಕ್ಕೆ ರೂ. 21.25ಗೆ ಕೊಡಲಾಗುವುದು ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿ.ಪಂ.ನ ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್, ಹಿಂದಿನ ಸಭೆಯಲ್ಲಿ ಗಿರಿರಾಜ ಕೋಳಿ ಕೊಡಬೇಡಿ, ಕುರಿ ಕೊಡಿ ಎಂಬುದಾಗಿ ಸೂಚನೆ ನೀಡಿದ್ದರೂ, ಈಗ ಮತ್ತೆ ಗಿರಿರಾಜ ಕೋಳಿ ಕೊಡ್ತಿವಿ ಅಂತಿರಲ್ಲಾ ಯಾಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿ, ಇದು ನಾನು ಮಾಡಿದ ನಿರ್ಣಯವಲ್ಲ ಸರ್ಕಾರವೇ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. ಹೀಗಾಗಿ ನಾವು ವಿತರಿಸುತ್ತಿದ್ದೇವೆ ಎಂದರಯ. ಮಹೇಶ್ ಈಗ ಗಿರಿರಾಜ ಕೋಳಿ ಕೊಡಬೇಡಿ, ಅದರ ಬದಲಿಗೆ ಕುರಿ ಕೊಡುವಂತೆ ಅಧ್ಯಕ್ಷರೊಂದಿಗೆ ಸಂಬಂಧಪಟ್ಟ ಇಲಾಖೆ ಮಂತ್ರಿಗಳಿಗೆ ಮನವಿ ಮಾಡುತ್ತೇವೆ. ಅಲ್ಲಿಯವರೆಗೆ ಗಿರಿರಾಜ ಕೋಳಿ ಕೊಡಬೇಡಿ ಎಂದು ತಾಕಿತು ಮಾಡಿದರು.
ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಇದ್ದು, ಈಗ ಮೆಕ್ಕೆಜೋಳ ಕಾಯಿ ಕಟ್ಟುವ ಸಮಯವಾಗಿದೆ. ಈ ಹಂತದಲ್ಲಿ ಮಳೆಯ ಅವಶ್ಯಕತೆ ಇದೆ. ಇನ್ನೂ ಕೆಲವು ದಿನಗಳಲ್ಲಿ ಮಳೆ ಬಂದರೆ ಮೆಕ್ಕೆಜೋಳದ ಫಸಲು ಉತ್ತಮವಾಗಿ ಬರಲಿದೆ. ಇಲ್ಲದಿದ್ದರೆ, ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಗಿರಿರಾಜ ಕೋಳಿ ಮತ್ತು ಕುರಿ ವಿಚಾರವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಅಧಿಕಾರಿ ನಡುವೆ ಬಿಸಿ ಬಿಸಿ ಚರ್ಚೆ ನಡೆದ ಪ್ರಸಂಗ ನಡೆಯಿತು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಾತನಾಡಿ, ಜಿಲ್ಲೆಯ ತೋಟಗಾರಿಕೆ ಬೆಳೆಗಳು ಉತ್ತಮವಾಗಿವೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಹರಿಹರಗಳಲ್ಲಿ ಬೆಳೆಗಳು ಚನ್ನಾಗಿವೆ. ಆದರೆ, ಹರಪನಹಳ್ಳಿ ಮತ್ತು ಜಗಳೂರು ಭಾಗದಲ್ಲಿ ಸ್ವಲ್ಪ ನೀರಿನ ಅಭಾವ ಇರುವುದರಿಂದ ಬೆಳೆಗಳಿಗೆ ಸ್ವಲ್ಪ ತೊಂದರೆಯಾಗಿದೆ ಎಂದರು. ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಜಿ. ರಶ್ಮಿ ರಾಜಪ್ಪ, ಉಪ ಕಾರ್ಯದರ್ಶಿ ಜಿ.ಎಸ್. ಷಡಾಕ್ಷರಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
