ಜಾಗತಿಕ ಭ್ರಷ್ಟಾಚಾರ ಗ್ರಹಿಕೆ: 85ನೇ ಸ್ಥಾನದಲ್ಲಿ ಭಾರತ, 140ನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

ಜಾಗತಿಕ ಭ್ರಷ್ಟಾಚಾರ ಗ್ರಹಿಕೆ: 85ನೇ ಸ್ಥಾನದಲ್ಲಿ ಭಾರತ, 140ನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

   ಜಗತ್ತಿನಾದ್ಯಂತ ದೇಶಗಳಲ್ಲಿರುವ ಭ್ರಷ್ಟಾಚಾರದ ಮಟ್ಟಗಳ ಕುರಿತು ದಿ ಟ್ರಾನ್ಸ್‌ಪರೆನ್ಸಿ ಇಂಟರ್ನ್ಯಾಷನಲ್‌ನ ವರದಿಯು ಮಂಗಳವಾರ ಬಿಡುಗಡೆಯಾಗಿದೆ. ಈ ವರದಿಯ ರ‍್ಯಾಂಕಿಂಗ್‌ನಲ್ಲಿ ಭಾರತ 85ನೇ ಸ್ಥಾನದಲ್ಲಿದ್ದು, ನೆರೆಯ ಪಾಕಿಸ್ತಾನ 140 ನೇ ಸ್ಥಾನದಲ್ಲಿದೆ.

     2021 ರ ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಉಲ್ಲೇಖಿಸಲಾದ ಒಟ್ಟು 180 ದೇಶಗಳ ಪೈಕಿ ಭಾರತವು 85 ನೇ ಸ್ಥಾನದಲ್ಲಿದೆ.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ 2020ರಲ್ಲಿದ್ದ ಸೂಚ್ಯಂಕಕ್ಕಿಂತ ಮತ್ತಷ್ಟು ಕೆಳಕ್ಕೆ ಜಾರಿವೆ. ಪಾಕಿಸ್ತಾನವು ಸೂಚ್ಯಂಕದಲ್ಲಿ 140 ನೇ ಸ್ಥಾನದಲ್ಲಿದ್ದರೆ, ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) 26ರೊಂದಿಗೆ ಬಾಂಗ್ಲಾದೇಶವು 147 ನೇ ಸ್ಥಾನದಲ್ಲಿದೆ.

2020ರ ಸಿಪಿಐ ವರದಿಗೆ ಹೋಲಿಸಿದರೆ, 2021ರಲ್ಲಿ ಪಾಕಿಸ್ತಾನವು 16 ಸ್ಥಾನಗಳನ್ನು ಕಳೆದುಕೊಂಡಿದೆ, ಇದು ಕೋವಿಡ್ -19 ಸಾಂಕ್ರಾಮಿಕದ ಅವಧಿಯಲ್ಲಿ ಆ ದೇಶದಲ್ಲಿ ಭ್ರಷ್ಟಾಚಾರದ ಮಟ್ಟವು ಯಾವ ಮಟ್ಟ ತಲುಪಿದೆ ಎಂದು ತೋರುತ್ತಿದೆ.

ಇದೇ ಸಿಪಿಐ ವರದಿಯಲ್ಲಿ ಪ್ರಪಂಚದ ಅತಿಹೆಚ್ಚಿನ ಜನಸಂಖ್ಯೆಯುಳ್ಳ ದೇಶಗಳಾದ ಚೀನಾ (45) ಮತ್ತು ಭಾರತ (40), ಮತ್ತು ಇತರ ದೊಡ್ಡ ಅರ್ಥಶಕ್ತಿಗಳಾದ ಇಂಡೋನೇಷ್ಯಾ (38), ಪಾಕಿಸ್ತಾನ (28), ಮತ್ತು ಬಾಂಗ್ಲಾದೇಶ (26) ಬಹಳ ಕಳಪೆ ಸಾಧನೆಗೈದಿವೆ ಎಂದು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ವರದಿ ಹೇಳಿದೆ.

2020ರಲ್ಲಿ 86 ನೇ ಸ್ಥಾನದಲ್ಲಿದ್ದ ಭಾರತವು 2021 ರಲ್ಲಿ ತನ್ನ ಸೂಚ್ಯಂಕದಲ್ಲಿ ಅಲ್ಪ ಸುಧಾರಣೆಯನ್ನು ಕಂಡಿದೆ. ಭೂತಾನ್ ಹೊರತುಪಡಿಸಿ, ಭಾರತದ ಎಲ್ಲಾ ನೆರೆಹೊರೆಯ ದೇಶಗಳ ಭಾರತಕ್ಕಿಂತ ಈ ಸೂಚ್ಯಂಕದಲ್ಲಿ ಕೆಳಗಿನ ಸ್ಥಾನದಲ್ಲಿರುವುದನ್ನು ವರದಿ ತೋರಿಸುತ್ತದೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ವರದಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಜಗತ್ತಿನಲ್ಲಿ ಭ್ರಷ್ಟಾಚಾರದ ಮಟ್ಟದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ ಎಂದು ತೋರಿಸಿದೆ.

“ದುರ್ಬಲ ಸೂಚ್ಯಂಕ ಪಡೆದಿರುವ ಕೆಲ ದೇಶಗಳಲ್ಲಿ ಭ್ರಷ್ಟಾಚಾರ-ವಿರೋಧಿ ಸಂಸ್ಥೆಗಳ ದುರ್ಬಲಗೊಳಿಸುವಿಕೆ ಅಥವಾ ಕೆಲವು ಸಂದರ್ಭಗಳಲ್ಲಿ, ಭ್ರಷ್ಟಾಚಾರದ ವಿರುದ್ಧ ಕ್ರಮವನ್ನು ಸಂಘಟಿಸಲು ಪ್ರಬಲ ಸಂಸ್ಥೆಗಳ ಅನುಪಸ್ಥಿತಿ ಇರುವುದು ಆತಂಕದ ವಿಚಾರವಾಗಿದೆ,” ಎಂದು ವರದಿಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಏಷ್ಯಾದ ದೇಶಗಳು ಭ್ರಷ್ಟಾಚಾರ ಸೂಚ್ಯಂಕದಲ್ಲಿ ತುಲನಾತ್ಮಕವಾಗಿ ಕಡಿಮೆ ಉಳಿದರೆ, ಡೆನ್ಮಾರ್ಕ್, ಫಿನ್ಲ್ಯಾಂಡ್, ನ್ಯೂಜಿಲೆಂಡ್ ಮತ್ತು ನಾರ್ವೆಯಂತಹ ದೇಶಗಳು ಅತ್ಯಧಿಕ ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಈ ಎಲ್ಲಾ ರಾಷ್ಟ್ರಗಳು ಭ್ರಷ್ಟಾಚಾರದ ಗ್ರಹಿಕೆಯ ಸೂಚ್ಯಂಕವನ್ನು 88ರಷ್ಟು ಹೊಂದಿದ್ದವು.

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) ವಿಶ್ವ ಬ್ಯಾಂಕ್, ವಿಶ್ವ ಆರ್ಥಿಕ ವೇದಿಕೆ, ಖಾಸಗಿ ರಿಸ್ಕ್‌ ಸಲಹಾ ಕಂಪನಿಗಳು, ಚಿಂತಕರ ಚಾವಡಿಗಳು ಮತ್ತು ಇತರ ಮೂಲಗಳು ಸೇರಿದಂತೆ 13 ಬಾಹ್ಯ ಮೂಲಗಳಿಂದ ದತ್ತಾಂಶ ಸಂಗ್ರಹಿಸಿ, ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಆಧರಿಸಿ 180 ದೇಶಗಳ ಸೂಚ್ಯಂಕಗಳನ್ನು ಲೆಕ್ಕಾಚಾರ ಮಾಡುತ್ತದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link