ಹುಳಿಯಾರು:
ಈ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಲಿಲ್ಲವೆಂದು ತುಮಕೂರು ಕ್ಷೇತ್ರ ಮತ್ತು ಕಾರ್ಯಕರ್ತರಿಂದ ದೂರಾಗದೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದು ನನ್ನನ್ನು ನಂಬಿರುವ ನಿಷ್ಟಾವಂತ ಕಾರ್ಯಕರ್ತರ ಕಷ್ಟ ಸ್ಪಂಧಿಸುವುದಾಗಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭರವಸೆ ನೀಡಿದರು.
ಹುಳಿಯಾರಿನಲ್ಲಿನ ಕಾಂಗ್ರೆಸ್ ಮುಖಂಡ ಎಚ್.ಅಶೋಕ್ ಮನೆಗೆ ಬೇಟಿ ನೀಡಿದ್ದ ಸಂದರ್ಭದಲ್ಲಿ ನೆರೆದಿದ್ದ ಕಾರ್ಯಕರ್ತರಿಗೆ ಈ ಮೇಲಿನಂತೆ ಅಭಯ ನೀಡಿದರು.ಟಿಕೆಟ್ ಸಿಕ್ಕಿಲ್ಲವೆಂದ ಮಾತ್ರಕ್ಕೆ ರಾಜಕೀಯವಾಗಿ ನನ್ನ ಶಕ್ತಿ ಕುಂದಿಲ್ಲ. ಇಂದು, ಮುಂದು, ಎಂದೆಂದೂ ನಾನು ಪ್ರಭಾವಿ ರಾಜಕಾರಣಿಯೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಈಗಲೂ ಕಾರ್ಯಕರ್ತರ ಕೆಲಸ ಮಾಡಿಕೊಡುವಷ್ಟು ಶಕ್ತಿ ಉಳಿಸಿಕೊಂಡಿದ್ದೇನೆ. ಮೊದಲಿನಂತೆ ಇನ್ನು ಮುಂದೆಯೂ ಸಹ ಜಿಲ್ಲೆಯಲ್ಲಿ ಓಡಾಡಿಕೊಂಡು ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.
ದೇಶದಲ್ಲಿ ಎಷ್ಟೋ ಮಂದಿ ರಾಜಕಾರಣಿಗಳು ಬಂದೋಗಿದ್ದಾರೆ. ಆದರೆ ಗೆದ್ದು ಅಧಿಕಾರ ಅನುಭವಿಸಿದವರೆಲ್ಲರೂ ಜನಮಾನಸದಲ್ಲಿ ಉಳಿಯುವುದಿಲ್ಲ. ಜನಪ್ರತಿನಿಧಿಗಳು ಜನರು ಕೊಟ್ಟ ಅಧಿಕಾರವನ್ನು ಜನರ ಕಲ್ಯಾಣದಕ್ಕೆ ಬಳಕೆ ಮಾಡಿದ ಆಧಾರದ ಮೇಲೆ ಉಳಿಯುತ್ತಾರೆ. ಹಾಗಾಗಿ ಕ್ಷೇತ್ರದಲ್ಲಿ 5 ವರ್ಷ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು, ಜನರಿಗೆ ಸ್ಪಂಧಿಸಿದನ್ನು ಜನ ಮರೆಯುವುದಿಲ್ಲ. ಈಗಲೂ ನಿಮಗೆ ಟಿಕೆಟ್ ಸಿಕ್ಕಿದ್ದರೆ ಅನಾಯಾಸವಾಗಿ ಕಾಂಗ್ರೆಸ್ ಗೆಲ್ಲುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನರ ಈ ಪ್ರೀತಿಯನ್ನು ಮುಂದೆಯೂ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಡಾ.ಸಾಸಲು ಸತೀಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಮಾಜಿ ಅಧ್ಯಕ್ಷ ಎಚ್.ಅಶೋಕ್, ಓಬಿಸಿ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಉಮೇಶ್, ತಾಪಂ ಮಾಜಿ ಸದಸ್ಯ ವೈ.ಆರ್.ಮಲ್ಲಿಕಾರ್ಜುನ್, ತಿಮ್ಲಾಪುರ ಗ್ರಾಪಂ ಉಪಾಧ್ಯಕ್ಷ ಮೋಹನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
