ನೀರಿನ ಕರ ಕಡಿತಕ್ಕಾಗಿ ನಿವಾಸಿಗಳ ಒತ್ತಾಯ

0
14
  • ದಾವಣಗೆರೆ:

       ಕುಡಿಯುವ ನೀರಿನ ಕಂದಾಯ ಕಡಿಮೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಕರ್ನಾಟಕ ಮಾನವ ಹಕ್ಕುಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ಎಸ್‍ಓಜಿ ಕಾಲೋನಿ ನಿವಾಸಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು

       ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್‍ಓಜಿ ಕಾಲನಿ ನಿವಾಸಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ತೆರಳಿ ಪ್ರೌಢಶಾಲೆ ಮಂಜೂರು ಮಾಡುವಂತೆ ಒತ್ತಾಯಿಸಿ ಹಾಗೂ ಮಹಾನಗರ ಪಾಲಿಕೆಗೆ ತೆರಳಿ ನೀರಿನ ಕಂದಾಯ ಇಳಿಸುವಂತೆ ಆಗ್ರಹಿಸಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಕಲ್ಲೇಶಪ್ಪ, ಪಾಲಿಕೆಯು ನೀರಿನ ಕಂದಾಯವನ್ನು ವರ್ಷಕ್ಕೆ 2400 ರೂ. ನಿಗದಿಪಡಿಸಿದ್ದು, ಇದು 41ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಎಸ್‍ಓಜಿ ಕಾಲೋನಿ ನಿವಾಸಿಗಳಿಗೆ ತೀವ್ರ ಹೊರೆಯಾಗಲಿದೆ. ನೀರಿನ ತೆರಿಗೆ ಪಾವತಿಸದಿದ್ದರೆ, ನಲ್ಲಿಗಳ ಸಂಪರ್ಕ ಕಡಿತ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ವರ್ಷಕ್ಕೆ 2400 ರೂ. ನೀರಿನ ತೆರಿಗೆ ಭಾರವಾಗಲಿದೆ. ನೀರಿನ ಕಂದಾಯ ಬಾಕಿ ಕಟ್ಟುವಂತೆ ಒತ್ತಡ ಹೇರಲಾಗುತ್ತಿದೆ. ಕಡು ಬಡವರಾದ ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ರಂಗ ಕಲಾವಿದರು, ತರಕಾರಿ ವ್ಯಾಪಾರಿಗಳು, ಹಮಾಲಿಗಳು, ಅಂಗನವಾಡಿ ನೌಕರರು, ಚಿತ್ರ ಮಂದಿರಗಳ ಕೂಲಿ ಕಾರ್ಮಿಕರು ಸೇರಿದಂತೆ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡ ಜನರಿಗೆ ಇದು ಹೊರೆಯಾಗಲಿದೆ ಎಂದು ಆರೋಪಿಸಿದರು.

         ಕಳೆದ 2014ರಿಂದಲೂ 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ನೀರು ಬಿಡುವ ಪಾಲಿಕೆ 2400 ರು. ನೀರಿನ ಕಂದಾಯ ಹೇರಲು ಹೊರಟಿದ್ದು ಸರಿಯಲ್ಲ. ನೀರಿನ ಸಮಸ್ಯೆ ಎದುರಾದಾಗ ಭೈರವ ಎಲೆಕ್ಟ್ರಿಕಲ್ಸ್ ಮಾಲೀಕ ಎ.ಆನಂದಪ್ಪ ಇಡೀ ಕಾಲೋನಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಮೂಲಕ ಮಾನವೀಯತೆ ಮೆರೆದಿದಾರೆ. ಈ ಸಲ ಪಾಲಿಕೆ ವಾರಕ್ಕೊಮ್ಮೆ 15-20 ನಿಮಿಷ ಮಾತ್ರ ನೀರು ನೀಡುತ್ತಿದೆ. ಉಳಿದ ಬಡಾವಣೆಯಲ್ಲಿ ವಾರಕ್ಕೆ 3 ಸಲ ನೀರು ಬಿಡಲಾಗುತ್ತಿದೆ ಎಂದು ದೂರಿದರು.

       ತಕ್ಷಣವೇ ನೀರಿನ ಕಂದಾಯವನ್ನು ಕಡಿತಗೊಳಿಸಬೇಕು. ಆಶ್ರಯ ಮನೆಗಳ ಖುಲಾಸೆ ಮತ್ತು ಹಕ್ಕುಪತ್ರ ನೀಡಬೇಕು. ಎಲ್ಲಾ 1460 ಆಶ್ರಯ ಮನೆಗಳನ್ನು ಪಾಲಿಕೆಯಿಂದ ಖಾತೆ ಮಾಡಬೇಕು. ಎಸ್‍ಓಜಿ ಕಾಲನಿಯಲ್ಲಿ ಪಾರ್ಕ್ ನಿರ್ಮಿಸಬೇಕು. ಚರಂಡಿ, ಮೂಲ ಸೌಕರ್ಯ ಕಲ್ಪಿಸಬೇಕು. ರಸ್ತೆಗಳ ನಿರ್ಮಾಣ ಮಾಡಬೇಕು. ಬಡ ವಿದ್ಯಾರ್ಥಿಗಳು ಗ್ರಂಥಾಲಯ ತೆರೆಯಬೇಕು. ಪ್ರೌಢಶಾಲೆಯನ್ನು ಆ ಭಾಗಕ್ಕೆ ಮಂಜೂರು ಮಾಡಬೇಕು. ಬಿ, ಸಿ ಬ್ಲಾಕ್ ಕೊನೆಯಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡಬೇಕು. ಹಿಂದು, ಮುಸ್ಲಿಂ, ಕ್ರೈಸ್ತರ ಸ್ಮಶಾನ ಜಾಗದಲ್ಲಿ ಕೊಳವೆ ಬಾವಿ ವ್ಯವಸ್ಥೆ ಮಾಡಬೇಕೆಂದು ಪ್ರತಿಭಟನಾನಿತರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕೆಟಿಜೆ ನಗರದ ದುಗ್ಗಪ್ಪ, ಅಶೋಕ, ಜಯಮ್ಮ, ನಾಗವೇಣಿ, ನಾಗಮ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here