ಬನ್ನಿಕಲ್ಲು ಗ್ರಾ.ಪಂ.ಗೆ ಮುತ್ತಿಗೆ : ಪಿ.ಡಿ.ಓಗೆ ಮನವಿ

ಹಗರಿಬೊಮ್ಮನಹಳ್ಳಿ:

                ನರೇಗಾ ಕೂಲಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಕೂಲಿ ವಿತರಣೆಮಾಡುವಂತೆ ಹಾಗೂ ಗ್ರಾಮದ ನಾನಾ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಬನ್ನಿಕಲ್ಲು ಗ್ರಾ.ಪಂ.ಗೆ ಮಂಗಳವಾರ ನರೇಗಾ ಕೂಲಿಕಾರ್ಮಿಕರು ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಜರುಗಿತು.
                ಗ್ರಾ.ಪಂ.ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕರಾದ ಮಲ್ಲೇಶ್ ಮಾತನಾಡಿ, ಕೂಲಿಕಾರ್ಮಿಕರು ಬೆಳಗಿನಿಂದ ಕೆಲಸಮಾಡಿದರೆ ಮಧ್ಯಾಹ್ನ ಗ್ರಾ.ಪಂ.ಅಧಿಕಾರಿಗಳು ಪರಿಶೀಲನೆಗೆ ತೆರಳುತ್ತಾರೆ. ಇವರು ಸ್ಥಳಕ್ಕೆ ಬರುವ ವೇಳೆಗೆ ಉರಿಬಿಸಿಲಿನಲ್ಲಿ ಕೆಲಸಮಾಡಿರುವ ಕೂಲಿ ಕಾರ್ಮಿಕರು ಕಂಗಲಾಗಿ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ವಿಲವಿಲ ಎನ್ನುವಂತ ಪರಿಸ್ಥಿತಿಗೆ ಬಂದಿರುತ್ತಾರೆ ಎಂದು ಆರೋಪಿಸಿದರಲ್ಲದೆ, ಮಾಡಿದ ಕೆಲಸಕ್ಕೆ ಎನ್.ಎಂ.ಆರ್ ವಿಳಂಬಮಾಡಿ ಕೂಲಿ ನೀಡುವಲ್ಲಿ ಸತಾಯಿಸುತ್ತಿದ್ದಾರೆ ಎಂದು ದೂರಿದರು.
                   ಇನ್ನು ಗ್ರಾಮದ ಕೂಲಿ ಕಾರ್ಮಿಕರು ವಾಸಮಾಡುವ ವಾರ್ಡ್‍ಗಳಲ್ಲಿ ಸ್ವಚ್ಛತೆ ಎನ್ನುವುದು ಮರಿಚಿಕೆಯಾಗಿದೆ, ವಿದ್ಯುತ್ ಬೀದಿ ದೀಪಗಳಿಲ್ಲದೆ ಕತ್ತಲೆಯಲ್ಲಿ ವಾಸುವಂತ ಪರಿಸ್ಥಿತಿ ಬಂದೊದಗಿದೆ. ವೈಯಕ್ತಿಕ ಶೌಚಗಳನ್ನು ಕಟ್ಟಿಸಿಕೊಂಡರೂ ಸರ್ಕಾರದ ಸಹಾಯಧನ ನೀಡುತ್ತಿಲ್ಲ, ಇದಲ್ಲದೆ, ಗುಡಿಸಲಿನಲ್ಲಿ ವಾಸಮಾಡುವವರಿಗೆ ಮನೆಗಳನ್ನು ಹಾಕದೆ ಹಣ ನೀಡಿದವರಿಗೆ ಮನೆಗಳ ಹಂಚಿಕೆಯಾಗುತ್ತಿವೆ ಎಂದು ಆರೋಪಿಸಿದರು.
                    ಪ್ರತಿಭಟನೆಯಲ್ಲಿ 150ಕ್ಕೂ ಹೆಚ್ಚು ಕೂಲಿಕಾರ್ಮಿಕರು ಪಾಲ್ಗೊಂಡಿದ್ದು, ಪಿ.ಡಿ.ಓ. ವಿಜಯಕುಮಾರ್‍ಗೆ ಹಾಗೂ ಗ್ರಾ.ಪಂ.ಅಧ್ಯಕ್ಷ  ಕೆ.ಪ್ರಹ್ಲಾದ್‍ರವರಿಗೆ ಮನವಿಪತ್ರ ಸಲ್ಲಿಸಿದರು. ಮನವಿಪತ್ರ ಸ್ವೀಕರಿಸಿದ ಪಿ.ಡಿ.ಓ ವಿಜಯಕುಮಾರ್ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
                   ತಾಲೂಕು ಸಂಚಾಲಕಿ ಎಂ.ಬಿ.ಕೊಟ್ರಮ್ಮ, ಅಕ್ಕಮಹಾದೇವಿ, ಹನುಮಂತಪ್ಪ, ಅಶೋಕ, ಜಂಬಣ್ಣ, ಲೋಕಪ್ಪ, ಅಂಬಣ್ಣ, ಸಂಗಣ್ಣ, ಮಂಜಾಬೀ, ಕಸ್ತೂರಮ್ಮ ಮತ್ತು ಶಶಿಕಲಾ ಮುಂತಾದವರು ಇದ್ದರು.