ಚೆನ್ನೈ:
ಚೆನ್ನೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಮಲಗಿಯೇ ಇರಲು ಶ್ರೀಗಳು ಬೇಸರ ಎನ್ನುತ್ತಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಮಲಗಿಯೇ ಇರಲು ಬೇಸರ ಎನ್ನುತ್ತಿರುವ ಶ್ರೀಗಳು, ತಮ್ಮನ್ನು ಎತ್ತಿ ಬೆಡ್ ಮೇಲೆ ಕೂರಿಸುವಂತೆ ವೈದ್ಯರನ್ನು ಕೋರಿದ್ದರು. ಆದರೆ ಮೇಜರ್ ಸರ್ಜರಿಯಾಗಿರುವುದರಿಂದ ಕೆಲ ದಿನ ಮಲಗಿಯೇ ಇರುವಂತೆ ವೈದ್ಯರು ತಿಳಿಸಿದರು. ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈನ ರೇಲಾ ಇನ್ ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ನ ಪ್ರಖ್ಯಾತ ವೈದ್ಯರಾದ ಮಹಮ್ಮದ್ ರೇಲಾ ಅವರ ನೇತೃತ್ವದಲ್ಲಿ ಶನಿವಾರ ಮೂರು ಗಂಟೆಗಳ ಕಾಲ ಬಿಜಿಎಸ್ ನ ಡಾ. ರವೀಂದ್ರ ಅವರ ಉಪಸ್ಥಿತಿಯಲ್ಲೇ ಹೃದಯದ ಯಶಸ್ವೀ ಶಸ್ತ್ರಚಿಕಿತ್ಸೆ ನಡೆದಿದ್ದು, ಶ್ರೀಗಳು 8 ರಿಂದ 10 ವಾರಗಳ ವಿಶ್ರಾಂತಿ ಪಡೆಯಬೇಕಾಗುತ್ತದೆಂದು ವೈದ್ಯರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಶ್ರೀಗಳು ಭಾನುವಾರ ಹೆಚ್ಚು ಲವಲವಿಕೆಯಿಂದ ಕಂಡುಬಂದರು. ಭಾನುವಾರ ಇಷ್ಟಲಿಂಗ ಪೂಜೆಗೆ ಅನುವು ಮಾಡಿಕೊಡುವಂತೆ ಶ್ರೀಗಳು ಹಠ ಹಿಡಿದಿದ್ದರಿಂದ ಡಾ.ಮೊಹಮ್ಮದ್ ರೇಲಾ ಮನವೊಲಿಸಿದರು.
ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳನ್ನು ಹೊರತುಪಡಿಸಿ ಭಾನುವಾರ ಬೇರೆ ಯಾರಿಗೂ ದರ್ಶನಕ್ಕೆ ವೈದ್ಯರ ತಂಡ ಅವಕಾಶ ನೀಡಿಲ್ಲ. ಸಿದ್ದಲಿಂಗ ಶ್ರೀಗಳು ಭಾನುವಾರ ರಾತ್ರಿ ಮಠಕ್ಕೆ ಮರಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ