ತುಮಕೂರು:
ರಾಜ್ಯದ ಇತಿಹಾಸ ಪ್ರಸಿದ್ದ ಶ್ರವಣಬೆಳಗೊಳದ ಶ್ರೀ ಗೋಮಟೇಶ್ವರನಿಗೆ ಶ್ರವಣಬೆಳಗೊಳದ ಸ್ಥಳೀಯ ಜೈನ ಬಂಧುಗಳಿಂದ ನಡೆದ ವಿವಿಧತೆ ವಿಶೇಷತೆಗಳಿಂದ ಕೂಡಿದ ವೈಶಿಷ್ಟಪೂರ್ಣ ಮಹಾಮಸ್ತಕಾಭಿಷೇಕ ಯಶಸ್ವಯಾಗಿ ನಡೆಯಿತು.
ಇಂದು ಬೆಳಿಗ್ಗೆ ಇಂದಲೇ ಆರಂಭವಾದ ಶ್ರವಣಬೆಳಗೊಳದ ಜೈನ್ ಬಂಧುಗಳಿಂದ ಪೂಜಾ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ಹಾಗೂ ಹೊರರಾಜ್ಯದ ಸಮಾಜದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಪೂಜಾ-ಕಳಶ-ಅಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ವಿಶೇಷವೇನೆಂದರೆ ಈ ಭಾರಿ ಸುಮಾರು 31 ವಿವಿಧ ಮಾಧರಿಯ ವಿವಿಧತೆ ಹಾಗೂ ವಿಶೇಷತೆಯಿಂದ ಕೂಡಿದ ಅಭಿಷೇಕಗಳನ್ನು ಗೋಮಟೇಶ್ವರ ಮೂರ್ತಿಗೆ ನೆರವೇರಿಸಿದ್ದು ವಿಶೇಷವಾಗಿತ್ತು. ಪ್ರತಿಸಲ ಸಾಮಾನ್ಯವಾಗಿ ನಡೆಯುವ ಅಭಿಷೇಕದ ಜೊತೆಗೆ ವಿವಿಧ ಹಣ್ಣುಗಳು, ಮಾಹಿನ ಹಣ್ಣಿನ ರಸ, ಒಣ ಹಣ್ಣುಗಳು, ಕಡ್ಲೆಬೇಳೆ, ಹೆಸರು ಬೇಳೆ, ಅರಿಶಿಣದ ಹಿಟ್ಟು, ಬೆಲ್ಲದ ಪುಡಿ, ತುಪ್ಪ, ಮೊಸರು, ವಿವಿಧ ಹೂಗಳ ಪುಷ್ಪವೃಷ್ಟಿ, ಪತ್ತ ಹರಳುಗಳ ಅಭಿಷೇಕಗಳನ್ನು ಈ ಬಾರಿ ವಿಶೇಷವಾಗಿ ನಡೆಸಲಾಯಿತು. ಇಂತಹ ಅಭಿಷೇಕಗಳನ್ನ 1949ರಲ್ಲಿ ನಡಸಲಾಗಿತ್ತು. ಮೂರ್ತಿಗೆ ಯಾವಾಗಲೂ ಕ್ಷೀರಾಭಿಷೇಕ ವಿಶೇಷವಾಗಿತ್ತು ಕ್ಷೀರವನ್ನು ಮೂರ್ತಿಗೆ ಸುರಿದಾಗ ಹಾಲು ಅಲೆ ಅಲೆಯಾಗಿ ಹರಿಯುವ ನೋಟ ವಿಶೇಷವಾಗಿತ್ತು ಆದರೆ ಈ ಭಾರಿ ಮೊಸರಿನ ಅಭಿಷೇಕದಿಂದ ಹಾಗೂ ಅರಿಶಿಣ ಅಭಿಷೇಕದಿಂದ ಮೂರ್ತಿಯ ಚಿತ್ರಣವೇ ಬದಲಾಗಿತ್ತು ಈ ನಡುವೆ ಭಕ್ತರ ಜೈಗೋಷಗಳು ಮುಗಿಲು ಮುಟ್ಟುತ್ತಿದ್ದರೆ ಒಮ್ಮೊಮ್ಮೆ-ವಾಯು-ವರುಣರ ಕೃಪೆಯೂ ಆಗಾಗ ನಡೆಯುತ್ತಿತ್ತು. ತುಮಕುರು ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಲ್ಲಿ ಭಾಗವಹಿಸಿದ್ದ ಜಿನ ಬಂಧುಗಳು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾದರು.
ಕಾರ್ಯಕ್ರಮದಲ್ಲಿ ರಾಜ್ಯ ಹೈ ಕೋರ್ಟ್‍ನ ನ್ಯಾಯಮೂರ್ತಿಗಳು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು. ಶ್ರವಣಬೆಳಗೊಳದ ಪೀಠಾಧ್ಯಕ್ಷರಾದ ಸ್ವಸ್ತೀಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಗಳು ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪಚ್ಚೇಶ್ ಜೈನ್, ಪೇಪರ್ ಪ್ರಸಾದ್ ಜೈನ್, ಟಿ.ಕೆ.ರಂಗನಾಥ್, ಕೆ.ಬಿ.ಸುರೇಂದ್ರ, ಸುಮತಿಕುಮಾರ್, ವೈ.ಡಿ.ಶ್ಯಾಮಲಾಧರಣೇಂದ್ರಯ್ಯ, ಪದ್ಮಾಸುರೇಂದ್ರ, ಜ್ವಾಲಮಾಲಿನಿ, ನಾಗರತ್ನ, ಮಂಜುಳಾ ವೀರೇಂದ್ರ, ದಿವ್ಯಾ, ನಿಸರ್ಗ, ಪದ್ಮಶ್ರೀ, ಸುಜಾತ ಸುಮತಿಕುಮಾರ್ ಭಾಗವಹಿಸಿದ್ದರು.
