ಹಾಲು, ವಿದ್ಯುತ್ ಬೆಲೆ ಏರಿಕೆ ತೀರ್ಮಾನ ಸದ್ಯಕ್ಕಿಲ್ಲ: ಬಸವರಾಜ ಬೊಮ್ಮಾಯಿ

ಬೆಂಗಳೂರು:

ಜ.22: ಹಾಲು, ವಿದ್ಯುತ್ ದರ ಏರಕೆಯ ಬಗ್ಗೆ ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಆಡಳಿತದಲ್ಲಿ ದರ ಏರಿಕೆಯ ಪ್ರಸ್ತಾಪಗಳು ಇದ್ದೇ ಇರುತ್ತವೆ. ಎಲ್ಲ ಆಯಾಮಗಳಿಂದಲೂ ಚರ್ಚಿಸಿ ತೀರ್ಮಾನ ಮಾಡುತ್ತೇವೆ.

ಯಾವುದರ ಬಗ್ಗೆಯೂ ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ವಿದ್ಯುತ್ ದರ ಹೆಚ್ಚಳಕ್ಕಾಗಿ ಸದ್ಯ ಎಲ್ಲ ಎಸ್ಕಾಂಗಳು, ನೀರಿನ ದರ ಹೆಚ್ಚಳಕ್ಕಾಗಿ ಬೆಂಗಳೂರು ಜಲಮಂಡಳಿ, ಹಾಲಿನ ದರ ಹೆಚ್ಚಳಕ್ಕಾಗಿ ಕರ್ನಾಟಕ ಹಾಲು ಮಹಾಮಂಡಳಿ ದರ ಹೆಚ್ಚಳ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿವೆ. ಈ ಕುರಿತು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದಾಗ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.

ವೀಕಡೆಂಡ್ ಕರ್ಫ್ಯೂ ರದ್ದು ಒತ್ತಡದ ನಿರ್ಧಾರ ಅಲ್ಲ. ಮೂರನೇ ಅಲೆಯಲ್ಲಿ ಪಾಸಿಟಿವ್ ಹೆಚ್ಚಿದ್ದರೂ ತೀವ್ರತೆ ಕಡಿಮೆ ಇದೆ, ಬೇಕಾದ ಔಷಧಗಳು ಲಭ್ಯ ಇವೆ. ಅಲ್ಲದೆ, ಗುಣಮುಖ ಆಗುವವರ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ತಜ್ಞರು ಇದನ್ನು ಹೇಗೆ ನಿರ್ವಹಣೆ ಮಾಡಬಹುದು ಎಂಬ ಭರವಸೆ ನೀಡಿದ್ದಾರೆ.

ಅಲ್ಲದೆ, ದಿನನಿತ್ಯ ದುಡಿಯುವ ವರ್ಗಕ್ಕೆ ಆಗುತ್ತಿರುವ ತೊಂದರೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು ಎಂಬುದಷ್ಟೇ ಸರ್ಕಾರದ ಉದ್ದೇಶ ಎಂದು ಹೇಳಿದರು.

ದೇವೇಗೌಡರ ಆರೋಗ್ಯದ ಬಗ್ಗೆ ವಿಚಾರಿಸುತ್ತೇನೆ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಿರಿಯ ನಾಯಕರು. ಅವರಿಗೂ ಕೋವಿಡ್ ಪಾಸಿಟಿವ್ ಆಗಿದೆ ಎಂದು ತಿಳಿದಿದೆ. ಈ ವಯಸ್ಸಿನಲ್ಲೂ ಅವರು ಸಾಕಷ್ಟು ಆರೋಗ್ಯವಾಗಿದ್ದಾರೆ. ಆದರೆ ಕೋವಿಡ್ ಯಾರನ್ನೂ ಬಿಟ್ಟಿಲ್ಲ.

ದೇವೇಗೌಡರ ಕುಟುಂಬದವರು ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆಗೂ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಂತಾರಾಜ್ಯ ಜಲವಿವಾದ ಕುರಿತು ಸಭೆ:

ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಸಮಸ್ಯೆಗಳು ಹಾಗೂ ನ್ಯಾಯಾಲಯದ ವಿಚಾರಗಳಿಗೆ ಸಂಬಂಧಿಸಿದ ಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದು, ರಾಜ್ಯ ಸ್ಪಷ್ಟ ನಿಲುವು ತಳೆಯಲು ಸಭೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದೆಹಲಿಯಿಂದ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ನ್ಯಾಯವಾದಿಗಳು, ಎ. ಜಿ ಹಾಗೂ ನೀರಾವರಿ ತಾಂತ್ರಿಕ ತಜ್ಞರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ನೀರಾವರಿ ವಿಚಾರದಲ್ಲಿ ಮಧ್ಯಸ್ಥರದ ರಾಜ್ಯವಾಗಿದೆ. ನಮ್ಮ ಮೇಲೆ ಹಾಗೂ ಕೆಳಗಿರುವ ರಾಜ್ಯಗಳು ಆಗಾಗ್ಗೆ ವ್ಯಾಜ್ಯಗಳನ್ನು ಹೂಡುತ್ತಾರೆ. ಟ್ರಿಬ್ಯುನಲ್ ಆದೇಶಗಳು ಈಗಾಗಲೇ ಬಂದಿದೆ.

ಕೃಷ್ಣ ನದಿಗೆ ಸಂಬಂಧಿಸಿದ ಬಚಾವತ್ ಆದೇಶ ಹಾಗೂ ಬ್ರಿಜೇಶ್ ಮಿಶ್ರಾ ಆದೇಶವೂ ಬಂದಿದ್ದು, ಅಧಿಸೂಚನೆ    ಹೊರಡಿಸಬೇಕಿದೆ.

ಮಹದಾಯಿ ಟ್ರಿಬ್ಯುನಲ್ ಆದೇಶ ಬಂದರೂ ಸಹ ಪುನಃ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವಿದೆ. ಕರ್ನಾಟಕವೂ ಸೇರಿದಂತೆ ಮೂರೂ ರಾಜ್ಯಗಳು ಹಂಚಿಕೆಯಾಗಿರುವ ನೀರಿನ ಬಗ್ಗೆ ತಮ್ಮ ತಕರಾರುಗಳನ್ನು ಸರ್ವೋಚ್ಚ ನ್ಯಾಯಾಲಯದ ಮುಂದಿಟ್ಟಿವೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಟ್ರಿಬ್ಯುನಲ್ ಆದೇಶವಾಗಿ ಅಧಿಸೂಚನೆ ಆದರೂ ಕೂಡ ಮೇಕೆದಾಟು ಒಳಗೊಂಡಂತೆ ತಮಿಳುನಾಡು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ. ಇವೆಲ್ಲವುಗಳ ಬಗ್ಗೆ ಈಗಾಗಲೇ ಸಭೆಗಳಾಗಿದ್ದು, ಇಂದು ವರ್ಚುಯಲ್ ಸಭೆ ನಡೆಯಲಿದೆ.

ಆದಷ್ಟು ಶೀಘ್ರವಾಗಿ ಸಮಸ್ಯೆಗಳ ಪರಿಹಾರಕ್ಕೆ ಗಂಭೀರವಾಗಿ ಪ್ರಯತ್ನ ಗಳನ್ನು ಮಾಡಲಾಗುವುದು. ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಿ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಲಾಗುವುದು ಎಂದರು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link