ಹರಪನಹಳ್ಳಿ:
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2017-18ನೇ ಸಾಲಿನಲ್ಲಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಹಣ ಪಾವತಿ ಮಾಡಬೇಕು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕೂಲಿಕಾರರು ತಾಲ್ಲೂಕಿನ ಹರಕನಾಳು ಗ್ರಾಮ ಪಂಚಾಯಿತಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಹರಕಾನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕಟ್ಟಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಏಳು ದಿನದ ಕೂಲಿ ಹಣ ಪಾವತಿ ಆಗಿಲ್ಲ. ಅಲ್ಲದೇ ಈಶಾಪುರ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯಲ್ಲೂ ಐದು ಕುಟುಂಬಗಳಿಗೆ ಎರಡು ವಾರದ ಕೂಲಿ ಹಣ ಪಾವತಿಯಾಗಿಲ್ಲ ಎಂದು ದೂರಿದರು.
ಹುಲಿಕಟ್ಟಿ ಹಾಗೂ ಈಶಾಪುರ ನಡೆದ ಕಾಮಗಾರಿಯಲ್ಲಿ ಟ್ರ್ಯಾಕ್ಟರ್ ಬಳಸಿ ಮಣ್ಣು ಎತ್ತಿಹಾಕಲಾಗಿದೆ. ಇದರ ಹಣವೂ ಪಾವತಿಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಲಿ ಮಾಡಿ ಜೀವನ ಸಾಗಿಸುವವರಿಗೆ ಇದರಿಂದ ತೊಂದರೆ ಆಗಿದೆ. ಶೀಘ್ರವೇ ಕೂಲಿಕಾರರ ಕೂಲಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರು ಉದ್ಯೋಗ ಖಾತ್ರಿ ಯೋಜನೆಯ ಸಹಾಯಕರಾದ ತಿಮ್ಯಾ ನಾಯ್ಕ, ಪಿಡಿಒ ಚಂದ್ರಾ ನಾಯ್ಕ,ಅವರಿಗೆ ಮನವಿ ಸಲ್ಲಿಸಿದ್ದರು. ಅಶೋಕ, ಬಸವರಾಜ, ಶಕಿನಾಬಾನು, ಆಶಾ, ಗೌರಮ್ಮ, ಬಿ,ಭಾಗ್ಯಾ, ಎ.ಅಬ್ದುಲ್,ಮರಿಯಪ್ಪ, ಹನುಮಂತಪ್ಪ, ದುರುಗಪ್ಪ, ಶೈಪುಲ್ಲಾ, ದಂಡೆಪ್ಪ, ದಾನಪ್ಪ ಇತರರಿದ್ದರು.