ಕೊಟ್ಟೂರು:
ಬಸವಣ್ಣನನ್ನು ಜನಪದರು ತಮ್ಮ ತಂದೆ, ತಾಯಿ, ಗುರು, ಬಂಧುವಾಗಿ ಸ್ವೀಕರಿಸಿದ್ದಾರೆ. ಜನಪದರಿಗೆ ಓದು-ಬರಹ ಬರದಿದ್ದರೂ ದೊಡ್ಡ-ದೊಡ್ಡ ಕಾವ್ಯಗಳನ್ನು, ಕಾದಂಬರಿಗಳನ್ನು ಬರೆಯುವಷ್ಟು ವಿವೇಕಿಗಳು ಎಂದು ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಕೊಟ್ಟೂರು ಸಮೀಪದ ಸಂಗಮೇಶ್ವರ ಗ್ರಾಮದಲ್ಲಿ ತರಳುಬಾಳು ಸಾಣೇಹಳ್ಳಿ ಮಠ ಮತ್ತು ಇಲ್ಲಿನ ಗ್ರಾಮಸ್ಥರು ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಜನಪದರು ಅಕ್ಷರ ಜ್ಞಾನವಿಲ್ಲದಿದ್ದರೂ ಸಾಮಾಜಿಕ ಮತ್ತು ಸಂಸ್ಕಾರವಂತರಾಗಿದ್ದರು. ಇವರು ಸಮಾಜ ಕಟ್ಟುವ ಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರೇ ಹೊರತು; ಕೆಡುವವು ಕನಸನ್ನೂ ಕಾಣದವರು. ಇಂಥ ಜನಪದರೇ ಬಸವ ಕಲ್ಯಾಣದಲ್ಲಿ ಒಂದು ಕಡೆ ಸೇರಿ ಕಲ್ಯಾಣ ನಾಡನ್ನು ಕಟ್ಟುವ ಕಾರ್ಯ ಮಾಡಿದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
12 ನೆಯ ಶತಮಾನದ ಶರಣರಲ್ಲಿ ಅನೇಕರಿಗೆ ಅಕ್ಷರ ಜ್ಞಾನವಿರಲಿಲ್ಲ ಆದರೆ ಜನಪದ ಲೋಕವನ್ನು ಮುಂದಿಟ್ಟುಕೊಂಡು, ಪದವಿ-ಪ್ರಶಸ್ತಿಗಳನ್ನು ಪಡೆಯುತ್ತೇವೆ. ಆದರೆ ಜನಪದರಿಗೆ ನಾವೇನು ಕೊಟ್ಟಿದ್ದೇವೆ ಎನ್ನುವುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.
‘ಬಸವ ಜಾನಪದ’ ಕುರಿತಂತೆ ಉಪನ್ಯಾಸ ನೀಡಿದ ಅರುಣ್ ಜೋಳದ ಕೂಡ್ಲಿಗಿ,. ಬಸವಣ್ಣ ಅವರನ್ನು ರೈತರು ಎತ್ತು ಎಂದು ಭಾವಿಸಿದ್ದಾರೆ. ಕಾರಣ ಎತ್ತುಗಳು ರೈತರ ನಿತ್ಯದ ಒಡನಾಡಿಯಾಗಿರುವುದು, ಅವರ ಕಷ್ಟ-ಸುಖಗಳಲ್ಲಿ ನಿರಂತರ ಭಾಗಿಯಾಗಿರುವುದು. ಬಸವಣ್ಣನವರೂ ಜನಸಾಮಾನ್ಯರ ಒಡನಾಡಿಗಳಾಗಿರುವುದೇ ರೈತರ ಈ ಭಾವನೆಗೆ ಕಾರಣ ಎಂದರು.
ಬಸವಣ್ಣನ ಬಗ್ಗೆ ಹುಟ್ಟಿಕೊಂಡ ಅನೇಕ ಮಹತ್ವಪೂರ್ಣ ಶಿಷ್ಟ ಸಾಹಿತ್ಯಕ್ಕೆ ಆಧಾರವೇ ಜನಪದರು ಕಟ್ಟಿದ ಬಸವಣ್ಣನ ವ್ಯಕ್ತಿತ್ವ. ನಿಸರ್ಗ ದೈವಾರಾಧಾನೆ ಪೂಜಿಸುವ ಜನಸಮುದಾಯಕ್ಕೆ ಏಕ ದೇವೋಪಾಸನೆಯನ್ನು ಹೇಳಿಕೊಟ್ಟವರೇ ಬಸವಣ್ಣನವರು. ಗಾದೆಗಳಿಂದ ವಚನಗಳು ಪ್ರಭಾವಿತವಾದವೋ, ವಚನಗಳಿಂದ ಗಾದೆಗಳು ಪ್ರಭಾವಿತವಾದವೋ ಎನ್ನುವುದರ ಬಗ್ಗೆ ವಿಸ್ತಾರವಾದ ಅಧ್ಯಯನ ಮಾಡುವುದರ ಅವಶ್ಯಕತೆಯಿದೆ ಎಂದು ತಿಳಿಸಿದರು.
ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಟ್ಟೂರು ಜಾನುಕೋಟಿ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಪಂಡಿತಾರಾಧ್ಯ ಶ್ರೀಗಳು ಸ್ವಾಮಿಗಳ ಪರಂಪರೆಯಲ್ಲಿಯೇ ಅಪರೂಪದ ವ್ಯಕ್ತಿತ್ವವನ್ನು ಹೊಂದಿದವರು. ಅವರ ರಂಗಾಂದೋಲನ ಅಪೂರ್ವವಾದುದು. ಅವರ ಶಿವಸಂಚಾರದ ನಾಟಕಗಳು ನಮ್ಮ ಭಾಗಕ್ಕೆ ಬಂದಾಗ ನಾವು ತಪ್ಪದೇ ನೋಡುತ್ತೇವೆ. ಆದರೆ ಇಂದು ಕೇಳುವ ಪರಂಪರೆ ಮರೆಯಾಗಿ ಜನ ಧಾರವಾಹಿಗಳಲ್ಲಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.
ರಾಜೇಂದ್ರ ಪ್ರಸಾದ್, ಸಿದ್ಧಲಿಂಗ ಗೌಡ, ನೀಲಕಂಠಪ್ಪ, ಸಣ್ಣ ಬಸವರಾಜ್, ಎಲ್ ನಾಗರಾಜ್, ವಿಶಾಲಾಕ್ಷಿ, ಸುಶಿಲಮ್ಮ ಮಂಜುನಾಥ್ ವೇದಿಯಲ್ಲಿದ್ದರು. ಶಿಕ್ಷಕ ಚಂದ್ರಧರಯ್ಯ ಸ್ವಾಗತಿಸಿದರು. ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಣೇಹಳ್ಳಿಯ ಶಿವಸಂಚಾರದ ದಾಕ್ಷಾಯಣಿ ಕೆ, ನಾಗರಾಜ್ ಹೆಚ್ ಎಸ್ ಮತ್ತು ಶರಣ್ ತಂಡದವರು ವಚನಗೀತೆ ಹಾಡಿದರು. ಮಕ್ಕಳು ವಚನ ನೃತ್ಯರೂಪಕ ಪ್ರಸ್ತುತ ಪಡಿಸಿದರು. ಪ್ರದೀಪ್ ಕುಮಾರ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ