ಬೆಂಗಳೂರು,ಆ.26:
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಓಲಾ ಕ್ಯಾಬ್ ಚಾಲಕನೋರ್ವ ನೀಲಿ ಚಿತ್ರವನ್ನು ತೋರಿಸಿ ಕಿರುಕುಳ ನೀಡಿದ್ದು ಮಹಿಳೆಯು ಕಬ್ಬನ್‍ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆಯು ಯಲಹಂಕದಿಂದ ಬನ್ನೇರುಘಟ್ಟಕ್ಕೆ ಹೋಗಲು ಓಲಾ ಬುಕ್ ಮಾಡಿ ಪ್ರಯಾಣಿಸುತ್ತಿದ್ದಾಗ ಮಾರ್ಗ ಮಧ್ಯೆ ಕಬ್ಬನ್ ಪಾರ್ಕ್ ಬಳಿ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಗೆ ನೀಲಿ ಚಿತ್ರ ಕಾಣುವಂತೆ ತನ್ನ ಮೊಬೈಲ್ ನಲ್ಲಿ ತೋರಿಸಿದ್ದಾನೆ. ಚಾಲಕನ ಈ ವರ್ತನೆಯಿಂದ ಬೆದರಿದ ಮಹಿಳೆ ಅರ್ಧ ದಾರಿಯಲ್ಲಿಯೇ ಕಾರಿನಿಂದ ಇಳಿದಿದ್ದಾರೆ.
ಮಹಿಳೆ ಒಂದು ದಿನದ ಬಳಿಕ ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 354(ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಚಾಲಕನ ಬಂಧನಕ್ಕೆ ಶೋಧ ನಡೆಸಿದ್ದಾರೆ
ದೂರಿನ ವಿವರ
ಗುರುವಾರ ಬೆಳಗ್ಗೆ 6.28 ಕ್ಕೆ ಯಲಹಂಕ ನ್ಯೂ ಟೌನ್ ನಿಂದ ಜೆಪಿ ನಗರದವರೆಗೆ ಓಲಾ ಕ್ಯಾಬ್ ಬುಕ್ ಮಾಡಿದ್ದೆ. ಈ ವೇಳೆ ವಿಧಾನಸೌಧ ಸಿಗ್ನಲ್ ನಿಂದ ಕ್ವೀನ್ಸ್ ಸರ್ಕಲ್ ನ ಕಡೆಗೆ ಬರುತ್ತಿದ್ದಂತೆ ಚಾಲಕ ಮುಂಬದಿಯ ಕನ್ನಡಿಯಿಂದ ಹಿಂದೆ ಕುಳಿತ್ತಿದ್ದ ನನ್ನನ್ನು ಗಮನಿಸುತ್ತಿರುವುದು ಕಂಡುಬಂತು. ಅಷ್ಟೇ ಅಲ್ಲದೇ ಅವನು ಎಡಗೈನಿಂದ ನನಗೆ ಮೊಬೈಲ್ ಕಾಣುವಂತೆ ಹಿಡಿದುಕೊಂಡಿದ್ದನು.
ಅದರಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದು, ನನಗೂ ಕಾಣುವಂತೆ ಹಿಡಿದುಕೊಂಡಿದ್ದನು. ಮತ್ತೆ ಆತ ತನ್ನನ್ನು ತಾನೇ ಮುಟ್ಟುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಅದನ್ನು ಕಂಡ ನನಗೆ ಭಯಗೊಂಡು ಕ್ಯಾಬ್ ನಿಲ್ಲಿಸುವಂತೆ ಸೂಚಿಸಿದೆ. ಅದಕ್ಕೆ ಅವನು ನಿಮ್ಮ ಇಳಿಯುವ ಸ್ಥಳ ಇನ್ನೂ ದೂರದಲ್ಲಿದೆ ಎಂದು ಹೇಳಿದ್ದಾನೆ. ಬಳಿಕ ತನ್ನ ಕಚೇರಿ ಬಳಿ ಬಂದು ಇಳಿದು ಆತನ ಬಗ್ಗೆ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಿದ್ದು, ಅವರು ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ