ದಾವಣಗೆರೆ:
ಸಮಾಜದಲ್ಲಿ ಮನೆ ಮಾಡಿರುವ ಜಾತಿ-ಧರ್ಮ, ಮತ-ಪಂಥಗಳ ಮಧ್ಯೆ ಇರುವ ಅಡ್ಡಗೋಡೆಗಳನ್ನು ಬುಡಮೇಲು ಮಾಡುವ ನಿಟ್ಟಿನಲ್ಲಿ ಸಾಹಿತ್ಯ ಕೃಷಿ ಕೈಗೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಕರೆ ನೀಡಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಕ್ಕಳ ಲೋಕ, ಬಡ ಮಕ್ಕಳ ಉಚಿತ ಕನ್ನಡ ಸಾಂಸ್ಕೃತಿಕ ಸಂಸ್ಥೆ, ಜಿಲ್ಲಾ ಸಿರಿಗನ್ನಡ ವೇದಿಕೆ, ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಲೋಕದ 9ನೇ ವಾರ್ಷಿಕೋತ್ಸವ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯದ ಅಭಿರುಚಿ, ಒಲವು, ಸಾಮಾಜಿಕ ತುಡಿತಗಳನ್ನು ಯಾರು ಹೊಂದಿರುವರೋ ಅವರಿಂದಲ್ಲೂ ಸಾಹಿತ್ಯ ಸೃಷ್ಠಿಸಲು ಸಾಧ್ಯವಾಗಲಿದೆ. ಸಾಹಿತ್ಯ ವಂಶಪಾರಂಪರಿಕವಾಗಿ ಬಂದ ಬಿರುದಾಂಕಿತ ಅಲ್ಲ. ಕನ್ನಡ ಉಪನ್ಯಾಸಕರೇ ಸಾಹಿತಿ ಆಗಬೇಕೆಂಬುದು ಭ್ರಮೆ, ಮೂರ್ಖತನವಾಗಿದೆ ಎಂದರು.
ಸಾಹಿತ್ಯ ಸೃಷ್ಠಿ ಸುಂದರವಾದ ಹೂವಿನ ಮಾಲೆ ಇದ್ದಂತೆ. ಅದು ಎಷ್ಟು ಸೌಂದರ್ಯವೋ ಅಷ್ಟೇ ಶಕ್ತಿ ಭರಿತವಾಗಿರಲಿದೆ. ಸಾಹಿತ್ಯದ ಖಡ್ಗ ಸಾಮಾಜಿಕ ಅನಿಷ್ಠಗಳು, ಮೌಢ್ಯ ಭಾವನೆಗಳು, ಅಂಧಕಾರಗಳನ್ನು ಕತ್ತರಿಸಬೇಕು. ಸಾಹಿತ್ಯವು ಸದ್ಗುಣಗಳ ಬೀಜ ಬಿತ್ತಿ ಸಾಮಾಜಿಕ ಸಂವೇದನೆ ಮತ್ತು ಸಂಬಂಧಗಳ ಜೊತೆಗೆ ಸಾಮಾಜಿಕ ಮೌಲ್ಯತೆಗಳನ್ನು ಹುಟ್ಟು ಹಾಕುವಂತಿರಬೇಕು ಎಂದರು.
ಶತ್ರುಗಳನ್ನು ದ್ವೇಷಿಸುವ ಮೂಲಕ ಗೆಲ್ಲದೇ ದ್ವೇಷದ ಗೈರು ಹಾಜರಿಯಿಂದ ಗೆಲ್ಲಬೇಕು. ಅವರ ಮನಸ್ಸುಗಳನ್ನು ಒಲಿಸಿಕೊಳ್ಳಬೇಕು. ಇದು ಆತ್ಮವಿಶ್ವಾಸದಿಂದ ಸಾಧ್ಯ. ಆತ್ಮ ಶಕ್ತಿ ಖಡ್ಗ ಶಕ್ತಿಗಿಂತ ದೊಡ್ಡದು. ಆತ್ಮಶಕ್ತಿಯನ್ನು ಸೃಷ್ಠಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದರು.
ಇದೇ ವೇಳೆ ಮಕ್ಕಳ ಕವಿಗೋಷ್ಠಿ ನಡೆಯಿತು. ಇದಕ್ಕೆ ಸೋಮೇಶ್ವರ ವಿದ್ಯಾಲಯದ ವಿದ್ಯಾರ್ಥಿ ಕಾರ್ತಿಕ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾರುತಿ ಪ್ರೌಢಶಾಲೆ ವಿದ್ಯಾರ್ಥಿನಿ ಅನುಷಾ ಮುಖ್ಯ ಅತಿಥಿಗಳಾಗಿದ್ದರು. ನಂತರ ನಡೆದ ಹಿರಿಯರ ಕವಿಗೋಷ್ಠಿಯಲ್ಲಿ ಹಿರಿಯ ಕವಿ ಎಸ್. ಓಂಕಾರಯ್ಯ ತವನಿಧಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಶ್ರೀಮತಿ ಅಡಿಗರು ಇದ್ದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಶಿವಯೋಗಿ ಹಿರೇಮಠ, ಹಿರಿಯ ಸಮಾಜ ಚಿಂತಕ ಟಿ. ರಾಮಯ್ಯ, ಡಾ. ಎ.ಹೆಚ್. ಶಿವಮೂರ್ತಿಸ್ವಾಮಿ, ತೆಲಗಿ ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.