ಬೆಂಗಳೂರು
ಇದೇ ಶುಕ್ರವಾರದಿಂದ ಆ.18 ರವರೆಗೆ 9 ದಿನಗಳ ಕಾಲ ಲಾಲ್ಬಾಗ್ ನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರು ರಾಜ ಮನೆತನದ ಕೊನೆಯ ಮಹಾರಾಜರಾದ ಜಯ ಚಾಮರಾಜ ಒಡೆಯರ್ ಅವರ ಶ್ವೇತ ವರ್ಣದ ಎದೆ ಮಟ್ಟದ ಪುತ್ಥಳಿಯು ವಿಶೇಷ ಆಕರ್ಷಣೆಯಾಗಲಿದೆ.
ಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಅಂಗವಾಗಿ ಲಾಲ್ಬಾಗ್ನ ಗಾಜಿನ ಮನೆ ಆವರಣದಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರಿನಲ್ಲಿರುವ ಜಯಚಾಮರಾಜ ವೃತ್ತದಲ್ಲಿರುವ ಮಂಟಪದ ಯಥಾವತ್ ಪುಷ್ಪ ಮಂಟಪ ಅನಾವರಣಗೊಳ್ಳಲಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವಿ. ವೆಂಕಟೇಶ್ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ರಾಜಮಾತೆ ಪ್ರಮೋದ ದೇವಿ, ಯುವ ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಆಹ್ವಾನ ನೀಡಲಾಗುವುದು ಎಂದರು.
40 ಹಾಗೂ 40 ಅಡಿ ಸುತ್ತಳತೆ ಪ್ರದೇಶದಲ್ಲಿ 5 ಅಡಿ ಎತ್ತರದ ಮೆಟ್ಟಿಲುಗಳು, 10 ಅಡಿ ಎತ್ತರದ ಕಂಬಗಳು, 3 ಅಡಿ ಎತ್ತರದ ಮೇಲ್ಫಾವಣಿ, 5 ಅಡಿ ಎತ್ತರದ ಸ್ವರ್ಣಮಯ ಗೋಪುರ, ಹಾಗೂ 2 ಅಡಿ ಎತ್ತರದ ಕಳಸ ವನ್ನೊಳಗೊಂಡ 27 ಅಡಿ ಎತ್ತರವಿರುವ ಬೃಹತ್ ಮಂಟಪದಲ್ಲಿ ಪ್ರತಿಷ್ಠಾಪಿಸುವ ಜಯಚಾಮರಾಜ ಒಡೆಯರ್ ಅವರ ಪುಷ್ಪ ಪ್ರತಿ ರೂಪ ಎಲ್ಲರನ್ನು ಮನಸೂರೆಗೊಳ್ಳಲಿದೆ.
ಇದಕ್ಕಾಗಿ 1,50,000 ಕೆಂಪು ಗುಲಾಬಿ, 50,000 ಬಿಳಿ ಗುಲಾಬಿ, 50,000 ಕಿತ್ತಳೆ ವರ್ಣದ ಗುಲಾಬಿ ಸೇರಿದಂತೆ ಎರಡೂವರೆ ಲಕ್ಷಕ್ಕೂ ಹೆಚ್ಚು ಗುಲಾಬಿಗಳನ್ನು ಬಳಸಲಾಗುವುದು ಇದಲ್ಲದೇ 4 ಅಡಿ ಅಗಲ 3 ಅಡಿ ಎತ್ತರದ ಮೈಸೂರು ಸಿಂಹಾಸನವು ಪುಷ್ಪಾ ಅಲಂಕೃತವಾಗಿ ಕಂಗೊಳಿಸಲಿದೆ. ಮರ, ಫ್ರ್ಯಾಬಿಕ್, ಬಣ್ಣ ಮತ್ತು ಕುಷನ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
2 ಆನೆಗಳ ಮಾದರಿ ಮಂದಿ ಮಾಗದರ ಪ್ರತಿ ಕೃತಿಗಳು ದರ್ಬಾರ್ ಮಾದರಿಯಲ್ಲಿಯೇ ರೂಪಿಸಲಾಗುವುದು ಎಂದು ಅವರು ತಿಳಿಸಿದರು. ಮೈಸೂರು ಮಹಾರಾಜರ ಸಂಗೀತ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪುಷ್ಪ ನಿರ್ಮಿತ ಪಿಯಾನೋ ಅಲ್ಲದೇ ನಾನಾ ರೀತಿಯ ಸಂಗೀತ ಸಲಕರಣೆಗಳನ್ನು ಪ್ರದರ್ಶಿಸಲಾಗುವುದು ಎಂದರು.
ಮಹಾರಾಜ ಜಯಚಾಮರಾಜ ಒಡೆಯರ್ ಅವರು ತಮ್ಮ ಆಡಳಿತ ಅವಧಿಯಲ್ಲಿ ಕೈಗೊಂಡ ನೀರಾವರಿ, ವಿದ್ಯುತ್ ಮತ್ತು ಅವರ ಪಂಚವಾರ್ಷಿಕ ಯೋಜನೆ, ಬೆಂಗಳೂರು ಮತ್ತು ಮೈಸೂರು ನಗರಗಳ ಅಭಿವೃದ್ಧಿಯನ್ನು ಚಿತ್ರ ಮಾಹಿತಿಯೊಡನೆ ಪ್ರದರ್ಶಿ ಸಲಾಗುವುದು. ಹಲವಾರು ಪ್ರಾಣಿಗಳ ಪ್ರತಿ ಕೃತಿಯನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಇಡಲಾಗುವುದು ಎಂದು ತಿಳಿಸಿದರು.
ಲಾಲಾಬಾಗ್ ನಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ ಜೇನು ನೊಣಗಳು ಮತ್ತು ಬೀದಿ ನಾಯಿಗಳ ಹಾವಳಿಗೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು ಪತ್ರಿಕಾ ಗೋಷ್ಠಿಯಲ್ಲಿ ಮೈಸೂರು ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಡಿ.ಆರ್.ವಾಸುದೇವ್, ಲಾಲಾಬಾಗ್ ಸಸ್ಯ ತೋಟ ಉಪ ನಿರ್ದೇಶಕ ಎಂ.ಆರ್.ಚಂದ್ರಶೇಖರ್, ತೋಟಗಾರಿಕೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ಮೈಸೂರು ಉದ್ಯಾನ ಕಲಾ ಸಂಘದ ಗೌರವ ಖಜಾಂಚಿ ಎಂ.ಕುಪ್ಪುಸ್ವಾಮಿ,ಗೌರವ ಕಾರ್ಯದರ್ಶಿ ಜಯಲಕ್ಷ್ಮೀ ವರ್ಮಾ ಮತ್ತಿತರರು ಉಪಸ್ಥಿತರಿದ್ದರು.
ಉಚಿತ ಪ್ರವೇಶ:
ಫಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ 70 ರೂ. ಶುಲ್ಕ, 12 ವರ್ಷದೊಳಗಿನ ಮಕ್ಕಳಿಗೆ 20 ರೂ. ಶುಲ್ಕ, ಆಗಸ್ಟ್ 9, 13, 14, 16 ಮತ್ತು 17 ರಂದು ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಬೆಳಿಗ್ಗೆ 9 ರಿಂದ 5 ಗಂಟೆವರೆಗೆ ಉಚಿತ ಪ್ರವೇಶವಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








