ಬೆಂಗಳೂರು
ನೆರೆಯ ಆಂಧ್ರಪ್ರದೇಶ ರಾಜ್ಯದಿಂದ ಅಕ್ರಮವಾಗಿ ತಂದು ರಕ್ತ ಚಂದನ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ರಕ್ತ ಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಪಟ್ಟಣದ ತಬ್ರೇಜ್ ಖಾನ್ ಅಲಿಯಾಸ್ ಬಬ್ಲು (24), ಬಷೀರ್ ಉದ್ದೀನ್ (53) ಹಾಗೂ ಆರ್.ಟಿ. ನಗರದ ಆದಿಲ್ ಪಾಷ (36) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 1,204 ಕೆಜಿ ರಕ್ತ ಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಗಳು ಜಾಲಹಳ್ಳಿಯ ಇಸ್ರೋ ವಸತಿ ನಿಲಯದ ಹೆಚ್ಎಂಟಿ ಮೈದಾನದಲ್ಲಿ ರಕ್ತ ಚಂದನದ ಮರದ ತುಂಡುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಹೊಂಚುಹಾಕುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಜಾಲಹಳ್ಳಿ ಇನ್ಸ್ಪೆಕ್ಟರ್ ಲೇಪಾಕ್ಷಿ, ಮತ್ತವರ ಸಿಬ್ಬಂದಿಗಳು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿ ಬಷೀರ್ ಉದ್ದೀನ್ಗೆ ಜೆಸಿ ನಗರದ ಷಾರು ಎಂಬಾತ ರಕ್ತ ಚಂದನದ ಮರದ ತುಂಡುಗಳನ್ನು ಸರಬರಾಜು ಮಾಡುತ್ತಿದ್ದು , ಆತನಿಂದ ಖರೀದಿಸಿ ಇನ್ನಿಬ್ಬರ ಜೊತೆ ಸೇರಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ .ಜೆಸಿ ನಗರದ ಷಾರು ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಶೋಧ ನಡೆಸಲಾಗಿದೆ. ಆಂಧ್ರ ಪ್ರದೇಶದಿಂದ ಷಾರು, ರಕ್ತ ಚಂದನದ ಮರದ ತುಂಡುಗಳನ್ನು ತಂದಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








