ನವದೆಹಲಿ
ದಕ್ಷಿಣ ಕೊರಿಯಾದ ಕಾರು ತಯಾರಿಕಾ ಕಂಪನಿಯಾದ ಹ್ಯುಂಡೈ ಪ್ರಸಕ್ತ ಮಾರುಕಟ್ಟೆ ಏರಿಳಿತವನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದೆ,
ಇನ್ನು ಕೆಲ ದಿನಗಳ ಹಿಂದೆಯಷ್ಟೆ ಬಂದಿದ್ದ ಮಾರುಕಟ್ಟೆ ವರದಿಗಳ ಪ್ರಕಾರ ಜುಲೈನಲ್ಲಿ ಪ್ರಯಾಣಿಕ ಕಾರುಗಳ ಮಾರುಕಟ್ಟೆ ಶೇಕಡಾ 31ರಷ್ಟು ಕುಸಿತ ಕಂಡಿತ್ತು ಅಂತಹ ಕ್ಲಿಷ್ಠ ಪರಿಸ್ಥಿಯಲ್ಲೂ ತನ್ನ ಮಾರುಕಟ್ಟೆ ಪಾಲನ್ನು ಶೇಕಡಾ 3 ರಷ್ಟು ಹೆಚ್ಚಿಸಿಕೊಂಡು 19.4 ಕ್ಕೆ ತಲುಪಿದ ಹ್ಯುಂಡೈ ಸಾಧನೆ ಮೆಚ್ಚುವಂತಹುದು.
ಇನ್ನು ಜುಲೈ 2019 ರಲ್ಲಿ, ಹ್ಯುಂಡೈ ಸುಮಾರು 39,000 ಕಾರುಗಳನ್ನು ಮಾರಾಟ ಮಾಡಿತು, ಅದರಲ್ಲಿ ಸುಮಾರು 9,585 ಕಾರುಗಳು ತನ್ನ ಹೊಸ ಮಾದರಿಯಾದ ವೆನ್ಯೂ ಆಗಿವೆ .
“ಇದು ಹ್ಯುಂಡೈಗೆ ಇದು ಬಹುಪಾಲು ಆದಾಯ ತಂದಿರುವ ವರ್ಷವಾಗಿದೆ. ಭಾರತದ ಮೊದಲ ಸಂಪೂರ್ಣ ಸ್ಮಾರ್ಟ್ ಎಸ್ಯುವಿ, ವೆನ್ಯೂ ಬಿಡುಗಡೆಯೊಂದಿಗೆ ಕಂಪನಿಯೂ ಸಬ್ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗಕ್ಕೆ ಕಾಲಿಟ್ಟಿದೆ. ನಾವು ಸಂಪೂರ್ಣ ಎಲೆಕ್ಟ್ರಿಕ್ ಎಸ್ಯುವಿ ಕೋನಾವನ್ನು ಸಹ ಬಿಡುಗಡೆ ಮಾಡಿದ್ದೇವೆ ಮತ್ತು ಈ ವರ್ಷ ಆಗಸ್ಟ್ 20 ರಂದು ಗ್ರ್ಯಾಂಡ್ ಐ 10 ನಿಯಾಸ್ ಅನ್ನು ಬಿಡುಗಡೆ ಮಾಡಲಿದ್ದೇವೆ ”ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ನ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ವಿಕಾಸ್ ಜೈನ್ ತಿಳಿಸಿದ್ದಾರೆ.
ಕಂಪನಿಯು ತನ್ನ ಮಾರಾಟದ ವೇಗವನ್ನು 2018-19ರಲ್ಲಿ ಶೇ 1.7 ರಷ್ಟು ಹೆಚ್ಚಿಸಿಕೊಂಡು ಸಧ್ಯ ಭಾರತದ ವಾಹನ ತಯಾರಿಕಾ ಕ್ಷೇತ್ರದಲ್ಲಿ ಸ್ಥಿರವಾಗಿ ನಿಲ್ಲುವ ಮೂಲಕ ಬೇರೆ ಕಾರು ತಯಾರಕರಿಗೆ ಮಾದರಿಯಾಗಿದೆ .
ಇನ್ನು ಕಳೆದ ವರ್ಷಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 5,45,243 ಯುನಿಟ್ಗಳನ್ನು ಮಾರಾಟ ಮಾಡಿತು ಮತ್ತು 2018-19ರಲ್ಲಿ 1,62,105 ಯುನಿಟ್ಗಳನ್ನು ರಫ್ತು ಮಾಡಿದೆ.
ಹ್ಯುಂಡೈನ ಯಶಸ್ಸಿಗೆ ಹೆಚ್ಚಾಗಿ ಅದರ ಇತ್ತೀಚಿನ ಎಸ್ಯುವಿ ವೆನ್ಯೂ ಸಹ ಕಾರಣ ಎಂದರೆ ತಪ್ಪಿಲ್ಲ. ಎಸ್ಯುವಿಗಳ ಒಟ್ಟು ಮಾರಾಟದ ಪ್ರಮಾಣದಲ್ಲಿ ವೆನ್ಯೂ, ಕ್ರೆಟಾ ಮತ್ತು ಟಕ್ಸನ್ ಅತಿ ಹೆಚ್ಚು ಜನರ ಪ್ರೀತಿಗೆ ಪಾತ್ರವಾಗಿವೆ. ಈ ಸಾಧನೆಯಿಂದಾಗಿ ಈಗ ಹ್ಯುಂಡೈ ಭಾರತದ ಅತಿದೊಡ್ಡ ಎಸ್ಯುವಿ ತಯಾರಕ ಕಂಪನಿಯಾಗಿದೆ, ಇನ್ನು ಒಟ್ಟು ಮಾರುಕಟ್ಟೆಯ ಶೇಕಡಾ 21 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ ಎಂದು ಜೈನ್ ಹೇಳಿದರು.
ಮಾರುತಿ ಮತ್ತು ಇತರ ಕಾರು ತಯಾರಕರು ಮಾರುಕಟ್ಟೆ ಏರಿಳಿತಗಳಿಗೆ ತಡೆಯಲಾರದೆ ಕಂಪನಿಗಳ ಉತ್ಪಾದನಾ ಘಟಕಗಳನ್ನು ಮುಚ್ಚು ಸ್ಥಿತಿಯಲ್ಲಿದ್ದರೆ ಇತ್ತ ಹ್ಯುಂಡೈ ಮಾತ್ರ ಯಾವುದರ ಪರಿವೆಯೇ ಇಲ್ಲದೆ ತನ್ನ ಪಾಡಿಗೆ ತಾನು ತನ್ನ ಪ್ರಗತಿಯನ್ನು ಏರು ಮುಖವಾಗಿ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ.ಮತ್ತು ಹ್ಯುಂಡೈ ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 7 ಲಕ್ಷ ಯುನಿಟ್ಗಳಿಂದ 7.5 ಲಕ್ಷ ಯೂನಿಟ್ಗಳಿಗೆ ವಿಸ್ತರಿಸಿದೆ ಮತ್ತು ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಸ್ಮಾರ್ಟ್ ಉತ್ಪಾದನಾ ಪ್ರಕ್ರಿಯೆಗಳೊಂದಿಗೆ ವಿಸ್ತರಿಸಿದೆ.”ನಮ್ಮ ಘಟಕವು ಪ್ರಸ್ತುತ ತನ್ನ ಪೂರ್ಣ ಪ್ರಮಾಣ ಸಾಮರ್ಥ್ಯವನ್ನು ಹೊಂದಿದೆ ಮತ್ತು ಉತ್ಪಾದನೆ ನಿಲ್ಲಿಸುವ ಯಾವುದೇ ಯೋಜನೆ ಹೊಂದಿಲ್ಲ” ಎಂದು ಜೈನ್ ಹೇಳಿದರು.
ಕಂಪನಿಯು ಮಾರುಕಟ್ಟೆಯ ಏರಿಳಿತದ ಬಗ್ಗೆ ಎಚ್ಚರಿಕೆಯಿಂದ ಕಾಲಿರಿಸಿ ಸ್ಥಿರವಾಗಿ ಉಳಿದಿದೆ.“ಕೆಲವೊಮ್ಮೆ ಮಾರುಕಟ್ಟೆಯಲ್ಲಿನ ಮಂದಗತಿಯು ವಿದ್ಯಮಾನವಾದರೆ ಅದನ್ನು ಎದುರಿಸುವುದು ಹೇಗೆ ಎಂಬುದನ್ನು ನಾವು ಚೆನ್ನಾಗಿಯೇ ಅರ್ಥಮಾಡಿಕೊಂಡಿದ್ದೇವೆ. ಇಂಧನ ಬೆಲೆಗಳಲ್ಲಿನ ಅಸ್ಥಿರತೆ, ಹೆಚ್ಚಿನ ಬಡ್ಡಿದರಗಳು ಮತ್ತು ಹೆಚ್ಚುತ್ತಿರುವ ವಿಮಾ ಪ್ರೀಮಿಯಂನಂತಹ ಪ್ರಾಯೋಗಿಕ ಸವಾಲುಗಳ ಕಾರಣ, ಕೆಲವು ಖರೀದಿದಾರರು ತಮ್ಮ ಖರೀದಿ ನಿರ್ಧಾರವನ್ನು ಮುಂದೂಡುತ್ತಿದ್ದಾರೆ, ”ಎಂದು ಅವರು ವಿಶ್ಲೇಷಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








