ಜಿಪಂ ಸಭೆಯಲ್ಲಿ ಕಾವೇರಿದ ಪರ್ಸೆಂಟೇಜ್ ಪ್ರಲಾಪ..!!

ಇಂಜಿನಿಯರ್‍ಗಳಿಂದ ಪರ್ಸೆಂಟ್ ಹೆಸರಲ್ಲಿ ಲಂಚ ವಸೂಲಿ ಆರೋಪ

ತುಮಕೂರು

     ಜಿಲ್ಲಾ ಪಂಚಾಯ್ತಿಯ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರು ಬಿಲ್ಲು ನೀಡಲು ಇಂಜಿನಿಯರ್‍ಗಳಿಗೆ 18 ಪರ್ಸೆಂಟ್ ಹಣ ನೀಡಬೇಕು. ಇದರ ಜೊತೆಗೆ 18 ಪರ್ಸೆಂಟ್ ಜಿಎಸ್‍ಟಿ ಪಾವತಿಸಬೇಕು, ಇದಲ್ಲದೆ ಗುತ್ತಿಗೆದಾರರು 10 ಪರ್ಸೆಂಟ್ ಲಾಭ ಇಟ್ಟುಕೊಂಡರೆ ಎಲ್ಲಾ ಕಳೆದು ಉಳಿದ ಶೇಕಡ 54ರಷ್ಟು ಹಣದಲ್ಲಿ ಕಾಮಗಾರಿ ಮಾಡಬೇಕಾಗುತ್ತದೆ, ಹೀಗಾಗಿ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವೆ, ಇಂಜಿನಿಯರ್‍ಗಳು ಗುತ್ತಿಗೆದಾರರಿಂದ ಲಂಚದ ರೂಪದ ಪರ್ಸೆಂಟೇಜ್ ಪಡೆಯುವುದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಒತ್ತಾಯಿಸಿದರು.

    ಕಳೆದ 13ರಂದು ನಡೆದ ಜಿಲಾ ಪಂಚಾಯ್ತಿ ಸಾಮಾನ್ಯ ಸಭೆಯ ಮುಂದುವರೆದ ಸಭೆ ಬುಧವಾರ ಅಧ್ಯಕ್ಷೆ ಲತಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ಈ ವರ್ಷದ ಸರ್ಕಾರದ ಅನುದಾನದ 1,56,362.56 ಲಕ್ಷ ರೂ.ಗಳ ಲಿಂಕ್ ಡಾಕ್ಯುಮೆಂಟ್‍ಗೆ ಸಭೆ ಸರ್ವಾನುಮತದ ಅನುಮೋದನೆ ನೀಡಿತು.

    ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಕೆಂಚಮಾರಯ್ಯ, ಅನುದಾನದಲ್ಲಿ ಶೇಕಡ 58ರಷ್ಟು ಸಿಬ್ಬಂದಿಯ ವೇತನಕ್ಕೆ ಖರ್ಚಾಗುತ್ತದೆ. ಉಳಿದ ಶೇಕಡ 42ರಷ್ಟು ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ. ಈ ಸ್ಥಿತಿಯಲ್ಲಿ ಅಧಿಕಾರಿಗಳು ಹಣ ಲ್ಯಾಪ್ಸ್ ಆಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

    ಹುಲಿಕುಂಟೆ ಕ್ಷೇತ್ರದ ಸದಸ್ಯ ರಾಮಕೃಷ್ಣ ಇದೇ ಮಾತು ಅನುಮೋದಿಸಿ, ಶಿರಾ ತಾಲ್ಲೂಕಿನ ಅಭಿವೃದ್ಧಿ ಹಣ ಹೆಚ್ಚು ಲ್ಯಾಪ್ಸ್ ಆಗಿದೆ, ಈ ಬಾರಿ ಹಾಗಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

     ಪುರವರ ಕ್ಷೇತ್ರದ ಸದಸ್ಯ ಕೊಂಡವಾಡಿ ತಿಮ್ಮಯ್ಯ ಮಾತನಾಡಿ, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಇಂಜಿನಿಯರ್‍ಗಳಿಗೆ ಗುತ್ತಿಗೆ ಮೊತ್ತದ 18 ಪರ್ಸೆಂಟ್ ಹಣವನ್ನು ಲಂಚದ ರೂಪದಲ್ಲಿ ನೀಡಬೇಕು. ಅಷ್ಟು ನೀಡಿ, 18 ಪರ್ಸೆಂಟ್ ಜಿಎಸ್‍ಟಿ ಪಾವತಿಸಿ ಉಳಿದ ಹಣದಲ್ಲಿ ಎಷ್ಟರಮಟ್ಟಿಗೆ ಗುಣಮಟ್ಟದ ಕಾಮಗಾರಿ ಮಾಡಿಯಾರು. ಅಧಿಕಾರಿಗಳು ಈ ಅವಧಿಯಲ್ಲಾದರೂ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಪರ್ಸೆಂಟೇಜ್ ಪಡೆಯುವುದನ್ನು ನಿಲ್ಲಿಸಬೇಕು, ಒಳ್ಳೆಯ ಕಾಮಗಾರಿ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

   ಹೌದು, ಈ ಅವಧಿಯಲ್ಲಿ ಇಂಜಿನಿಯರ್‍ಗಳು ಪರ್ಸೆಂಟೇಜ್ ಪಡೆಯದೆ ಉತ್ತಮ ಕೆಲಸ ನಡೆಯಲು ಕಾರಣರಾಗಬೇಕು ಎಂದು ಅಧ್ಯಕ್ಷೆ ಲತಾ ರವಿಕುಮಾರ್ ಕೂಡಾ ಹೇಳಿದರು.ಕಮೀಷನ್ ಕೊಡದಿದ್ದರೆ ಇಂಜಿನಿಯರ್‍ಗಳು ಗುತ್ತಿಗೆದಾರರಿಗೆ ಬಿಲ್ಲು ಮಂಜೂರು ಮಾಡುವುದಿಲ್ಲ. ಇಲ್ಲವೆ ಕಾಮಗಾರಿಯಲ್ಲಿ ತಪ್ಪು ಹುಡುಕಿ ಬಿಲ್ಲು ತಡೆಹಿಡಿದು ಗುತ್ತಿಗೆದಾರರಿಗೆ ಹಿಂಸೆ ಕೊಡುತ್ತಾರೆ. ಸರ್ಕಾರ ಇಂಜಿನಿಯರ್‍ಗಳಿಗೆ ಒಳ್ಳೆ ಸಂಬಳ ಕೊಡುತ್ತದೆ, ವಾಹನ, ಮತ್ತಿತರ ಸೌಕರ್ಯ ನೀಡುತ್ತಿದೆ, ಇದಾಗಿಯೂ ಪರ್ಸೆಂಟೇಜಿಗೆ ಆಸೆ ಪಡದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಮ್ಮಯ್ಯ ಹೇಳಿದರು. ಪರ್ಸೆಂಟೇಜ್ ಪಡೆಯುವ ಇಂಜಿನಿಯರ್‍ಗಳ ವಿರುದ್ಧ ಅಧ್ಯಕ್ಷರು, ಸಿಇಓ ಕ್ರಮ ತೆಗೆದುಕೊಳ್ಳಬೇಕು ಎಂದೂ ಅವರು ಒತ್ತಾಯಿಸಿದರು.

    ಈ ವೇಳೆ ಮಾತನಾಡಿದ ಸದಸ್ಯ ಜಿ ಜೆ ರಾಜಣ್ಣ, ಕಾಮಗಾರಿಯ ಮೊತ್ತ ಒಂದು ಲಕ್ಷ ರೂ ಒಳಗಿದ್ದರೆ ಜಿಎಸ್‍ಟಿ ಪಾವತಿಸುವಂತಿಲ್ಲ ಎಂದರು.ಜಿಎಸ್‍ಟಿ ಬಗ್ಗೆ ಇಂಜಿನಿಯರ್‍ಗಳು ಸಭೆಗೆ ಮಾಹಿತಿ ನೀಡಬೇಕು ಎಂದು ಸದಸ್ಯರು ಒತ್ತಾಯ ಮಾಡಿದರು. ಮಾಹಿತಿ ನೀಡಿದ ಇಂಜಿನಿಯರ್‍ಗಳು, ಎರಡೂವರೆ ಲಕ್ಷ ರೂ.ವರೆಗೆ ಜಿಎಸ್‍ಟಿ ಪಾವತಿಸುವಂತಿಲ್ಲ ಎಂದರು.

     ಸದಸ್ಯ ರಾಮಾಂಜನಪ್ಪ ಮಾತನಾಡಿ, ಎಲ್ಲದಕ್ಕೂ ಅಧಿಕಾರಿಗಳನ್ನೇ ಗುರಿ ಮಾಡಬಾರದು, ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳೂ ಜವಾಬ್ದಾರಿವಹಿಸಿ ಕೆಲಸ ಕಾರ್ಯ ಗಮನಿಸಿದರೆ, ಸರಿಯಾದ ರೀತಿಯಲ್ಲಿ ಕೆಲಸ ಮಾಡಬಹುದಾಗಿದೆ ಎಂದರು.ಸದಸ್ಯ ಜಿ ಜೆ ರಾಜಣ್ಣ, ಯಾವುದೇ ಇಲಾಖೆಯಲ್ಲಿ ಪರ್ಸೆಂಟೇಜ್ ನೀಡದೆ ಬಿಲ್ಲು ಆಗುವುದಿಲ್ಲ, ಪರ್ಸೆಂಟೇಜ್ ನೀಡುವ ಅನಿವಾರ್ಯ ಪರಿಸ್ಥಿತಿ ಇದೆ. ಗುತ್ತಿಗೆದಾರನಾಗಿರುವ ನನ್ನ ಅನುಭವ ಹೇಳುತ್ತೇನೆ ಎಂದರು.

      ಸದಸ್ಯ ವೈ ಹೆಚ್ ಹುಚ್ಚಯ್ಯ ಮಧ್ಯ ಪ್ರವೇಶಿಸಿ, ನಿಮ್ಮ ಅಭಿಪ್ರಾಯ ಸದಸ್ಯರು ಲಂಚವನ್ನು ಬೆಂಬಲಿಸಿದಂತಾಗುತ್ತದೆ ಎಂದರು. ಈ ವೇಳೆ ಪರ್ಸೆಂಟೇಜ್, ತುಂಡುಗುತ್ತಿಗೆ ವಿಚಾರವಾಗಿ ಸದಸ್ಯರ ನಡುವೆ ತೀವ್ರ ಚರ್ಚೆಯಾಯಿತು.ಆಗ ಸದಸ್ಯ ಕೆಂಚಮಾರಯ್ಯ, ಸದಸ್ಯರು ಗುತ್ತಿಗೆದಾರರನ್ನು ಬೆಂಬಲಿಸಿದ ಸಂದೇಶ ಸಾರ್ವಜನಿಕರಿಗೆ ಹೋಗುತ್ತದೆ, ಇಲ್ಲಿಗೆ ಚರ್ಚೆ ಮುಕ್ತಾಯಗೊಳಿಸಿ, ಯಾವುದೇ ಇಂಜಿನಿಯರ್ ಪರ್ಸೆಂಟೇಜ್ ಪಡೆದರೆ ಅವರ ವಿರುದ್ಧ ಸಿಇಓಗೆ ದೂರು ನೀಡಿ ಅವರು ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿ ಆ ಚರ್ಚೆಗೆ ತೆರೆ ಎಳೆದರು.

     ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ಸಿಇಓ ಶುಭಾ ಕಲ್ಯಾಣ್ ಸಭೆಯಲ್ಲಿದ್ದು. ಕೆಲ ಕಾಲ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಇಓ, ಮುಖ್ಯಮಂತ್ರಿ ನಗರಕ್ಕೆ ಭೇಟಿ ನೀಡುತ್ತಿದ್ದಾರೆ ಹೋಗಬೇಕು ಎಂದು ಹೇಳಿ ನಿರ್ಗಮಿಸಿದರು, ನಂತರ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಸಭೆ ನಿರ್ವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link