ಗಣಪತಿ ಮೂರ್ತಿ ವಿಸರ್ಜನೆಗೆ ಸೂಕ್ತ ಬಂದೋಬಸ್ತ್: ಎಸ್ ಪಿ

ದಾವಣಗೆರೆ:

     ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಿರುವ ಪ್ರಮುಖ ಸಾರ್ವಜನಿಕ ಗಣಪತಿ ಮೂರ್ತಿಗಳ ವಿಸರ್ಜನೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ತಿಳಿಸಿದರು.

    ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 2,499 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು. ಈ ಪೈಕಿ ಈ ವರೆಗೂ 2 ಸಾವಿರ ಮೂರ್ತಿಗಳ ವಿಸರ್ಜನೆಯಾಗಿದ್ದು, ಬಾಕಿ ಉಳಿದ 499 ಗಣಪತಿ ಮೂರ್ತಿಗಳ ವಿಸರ್ಜನೆಗೆ ವ್ಯಾಪಕ ಬಂದೋಬಸ್ತ್‍ಗೆ ಕಲ್ಪಿಸಲಾಗುವುದು ಎಂದು ಹೇಳಿದರು.

    ಜಿಲ್ಲೆಯ ಚನ್ನಗಿರಿಯಲ್ಲಿ ಸೆ.9ರಂದು ಬಜರಂಗ ದಳದಿಂದ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿ, ಸೆ.10ರಂದು ದಾವಣಗೆರೆ ಉಪ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 30 ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಈ ಪೈಕಿ ವಿನೋಬ ನಗರದ 2ನೇ ಮುಖ್ಯರಸ್ತೆ 6ನೇ ಕ್ರಾಸ್‍ನ ಶ್ರೀವರಸಿದ್ಧಿ ವಿನಾಯಕ ಸೇವಾಸಮಿತಿ ಗಣೇಶ ಮೂರ್ತಿ ವಿಸರ್ಜನೆಯಾಗಲಿದೆ ಎಂದು ಅವರು ಹೇಳಿದರು.

     ಹರಪನಹಳ್ಳಿ, ಚನ್ನಗಿರಿ ಪಟ್ಟಣದಲ್ಲಿ ಹಿಂದು ಮಹಾಸಭಾದ ಶ್ರೀಗಣೇಶ ಮೂರ್ತಿಗಳ ವಿಸರ್ಜನೆ ಸೆ.12ರಂದು ನಡೆಯಲಿದೆ. ಸೆ.21ರಂದು ದಾವಣಗೆರೆ ನಗರದ ರಾಂ ಅಂಡ್ ಕೋ ವೃತ್ತದ ಶ್ರೀ ಗಣೇಶ ದೇವಸ್ಥಾನ ಟ್ರಸ್ಟ್‍ನ ಗಣೇಶ ಹಾಗೂ ಹೈಸ್ಕೂಲ್ ಮೈದಾನದಲ್ಲಿ ಹಿಂದು ಮಹಾಸಭಾ ಟ್ರಸ್ಟ್‍ನಿಂದ ಪ್ರತಿಷ್ಟಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದ್ದು, ಈ ಎಲ್ಲಾ ಮೆರವಣಿಗೆಗಳಿಗೆ ವ್ಯಾಪಕ ಭದ್ರತೆ ಕಲ್ಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

      ಗಣೇಶ ಮೂರ್ತಿ ವಿಸರ್ಜನೆ ವೇಳೆ ಅಗತ್ಯ ಭದ್ರತೆ ದೃಷ್ಟಿಯಿಂದ 52 ಸ್ಥಿರ ಸಿಸಿ ಕ್ಯಾಮೆರಾ ಹಾಗೂ ಪಾಲಿಕೆ ಸಹಕಾರದಿಂದ 137 ಸಿಸಿ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆ ಸೇರಿದಂತೆ ಖಾಸಗಿ ಡ್ರೋಣ್ ಕ್ಯಾಮೆರಾಗಳ ಕಣ್ಗಾವಲನ್ನೂ ಇಡಲಾಗುತ್ತದೆ. 4 ಕೆಎಸ್‍ಆರ್‍ಪಿ ಹಾಗೂ 8 ಡಿಆರ್ ತುಕಡಿಗಳು, 3 ಡಿಎಸ್ಪಿಗಳು, ಹೋಂ ಗಾಡ್ರ್ಸ್ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿ ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ.

      ಅಗ್ನಿಶಾಮಕ ದಳ, ಅಂಬ್ಯುಲೆನ್ಸ್ ಬಂದೋಬಸ್ತ್ ವೇಳೆ ಇರಲಿವೆ. ಗಣೇಶ ವಿಸರ್ಜನೆ ಮೆರವಣಿಗೆ ಸುಗಮವಾಗಿ ಸಾಗಲು ಬೆಸ್ಕಾಂ, ಲೋಕೋಪಯೋಗಿ ಇಲಾಖೆ ಸಹ ಕೈಜೋಡಿಸಲಿವೆ. ನಗರ, ಜಿಲ್ಲಾದ್ಯಂತ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸುವ್ಯವಸ್ಥಿತವಾಗಿ ಸಾಗುವ ನಿಟ್ಟಿನಲ್ಲಿ ಇಲಾಖೆಯು ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಂಡಿದ್ದು, ಶಾಂತಿ, ಸುವ್ಯವಸ್ಥಿತವಾಗಿ ಗಣೇಶ ವಿಸರ್ಜನೆಗೆ ಒತ್ತು ನೀಡಲಾಗಿದೆ ಎಂದು ಅವರು ವಿವರಿಸಿದರು.

     ಸುದ್ದಿಗೋಷ್ಠಿಯಲ್ಲಿ ವೃತ್ತ ನಿರೀಕ್ಷಕರಾದ ಲಕ್ಷ್ಮಣನಾಯ್ಕ, ಸತೀಶಕುಮಾರ, ಸಬ್ ಇನ್ಸಪೆಕ್ಟರ್ ಬಸವನಗರ ಎಸ್‍ಐ ವೀರೇಶ್ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link