ತುಮಕೂರು

ದೇಶದಲ್ಲಿ ಸಾಲ ಇಲ್ಲದ ರೈತ ಇಲ್ಲವೇ ಇಲ್ಲ. ಸಣ್ಣ ರೈತ, ದೊಡ್ಡ ರೈತ ಎಂಬ ವ್ಯತ್ಯಾಸವೂ ಇಲ್ಲದೇ ಪ್ರತಿಯೊಬ್ಬ ರೈತನಿಗೂ ಸಾಲಗಳಿವೆ. ಅನ್ನ ನೀಡುವ ರೈತನಿಗೆ ಅನ್ನ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ರೈತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಸಾಲ ಸೌಲಭ್ಯ ಹಾಗೂ ಸಾಲಮನ್ನಾ ಮಾಡಲಾಗುತ್ತಿದೆ ಎಂದು ಎಂದು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಜಿಲ್ಲಾ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ 65ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಹಕಾರ ಕೇಂದ್ರ ಬ್ಯಾಂಕ್‍ನ ಶಾಖೆಗಳಲ್ಲಿ ಖಾತೆಗಳನ್ನು ತೆರೆದು ಠೇವಣಿ ಇಟ್ಟರೆ ಅದರಿಂದ ರೈತರಿಗೆ, ಅವಶ್ಯಕತೆ ಇದ್ದವರಿಗೆ ಸಾಲ ಸೌಲಭ್ಯ ನೀಡಲು ಅನುಕೂಲವಾಗುತ್ತದೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಒಬ್ಬರಿಗೆ ಸಹಾಯ ಮಾಡೆಬೇಕು ಎಂಬ ಮನಸ್ಸು ಇದ್ದರೆ ಏನಾದರೂ ಮಾಡಬಹುದು ಎಂದು ತಿಳಿಸಿದರು.
ಕೃಷಿ, ಬೇಸಾಯ ಮಾಡುವವರ ಕಷ್ಟ ಏನು ಎಂಬುದು ನನಗೆ ತಿಳಿದಿದೆ. ಹಾಗಾಗಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಬ್ಯಾಂಕ್‍ನಿಂದ ಸಾಲ ನೀಡವುದರ ಜೊತೆಗೆ ಮೃತ ರೈತರ ಒಂದು ಲಕ್ಷದ ವರೆಗೆ ಸಾಲ ಮನ್ನಾ ಮಾಡಲಾಗುತ್ತಿದೆ. ಇದೆಲ್ಲಾ ನಮ್ಮ ಬ್ಯಾಂಕಿನ ಲಾಭಾಂಶದಿಂದ ಮಾಡಲಾಗುತ್ತಿದೆ. ಜನರ ವಿಶ್ವಾಸವನ್ನು ಗಳಿಸಿದ್ದರ ಪರಿಣಾಮವಾಗಿ ಇಂದು ಬ್ಯಾಂಕು ಸಾವಿರ ಕೋಟಿ ರೂಗಳಷ್ಟು ಬಂಡವಾಳ ಹೊಂದಿದ್ದು, ಇದರಲ್ಲಿ ನಿರ್ದೇಶಕರು, ಸದಸ್ಯರು, ಬ್ಯಾಂಕಿನ ಆಡಳಿತವರ್ಗ, ಸಿಬ್ಬಂದಿ ವರ್ಗದ ಶ್ರಮ ಸಾಕಷ್ಟಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಹಕಾರಿ ಆಂದೋಲನ ಮಾಡುವವರು ಪಕ್ಷಾತೀತ, ಜಾತ್ಯಾತೀತವಾಗಿರಬೇಕು. ಇದರಲ್ಲಿ ಯಾವುದೇ ತಾರತಮ್ಯ ಇರಬಾರದು. ಸಹಕಾರಿ ಬ್ಯಾಂಕುಗಳಲ್ಲಿನ ಸಾಲ ಮನ್ನಾ ವಿಚಾರದಲ್ಲಿನ ಲೋಪಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಚರ್ಚೆ ಮಾಡಲಾಗಿದ್ದು, 1400 ಕೋಟಿ ರೂಗಳನ್ನು ಘೋಷಣೆ ಮಾಡಿದ್ದಾರೆ. ಇದರಲ್ಲಿ ಯಾರಿಗೂ ತಾರತಮ್ಯ ಮಾಡದೇ ಸಾಲ ಸೌಲಭ್ಯ ನೀಡಲಾಗುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೆಲವರು ಸಾಲ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ನಾವು ಯಾರು ಇಲ್ಲಿ ಹಣ ಮಷಿನ್‍ಗಳನ್ನು ಇಟ್ಟುಕೊಂಡಿಲ್ಲ. ಕೇಳಿದವರಿಗೆ ಕೇಳಿದ ಹಾಗೆ ಸಾಲ ನೀಡಲು. ಜನರು ಇಡುವ ಠೇವಣಿಗಳನ್ನೇ ಸಾಲದ ರೂಪದಲ್ಲಿ ನೀಡಬೇಕು ಎಂದರು.
ಇಂದಿನ ದಿನಗಳಲ್ಲಿ ಸರ್ಕಾರಗಳು ಬ್ಯಾಂಕಿನಲ್ಲಿನ ಸಾಲ ಮನ್ನಾ ಮಾಡುತ್ತದೆ ಎಂಬ ಕಾರಣಕ್ಕೆ ಎಲ್ಲರೂ ಖಾತೆಗಳನ್ನು ಮಾಡಿಸಿಕೊಂಡು ಸಾಲ ತೆಗೆದುಕೊಳ್ಳುತ್ತಾರೆ. ಖಾಸಗಿ ಬ್ಯಾಂಕುಗಳಲ್ಲಿ 2 ಲಕ್ಷ ಸಾಲ ಮನ್ನಾ ಮಾಡಿದರೆ ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷ ಮಾತ್ರ ಮನ್ನಾ ಮಾಡಲಾಗುತ್ತದೆ. ಹಾಗಾಗಿ ಎಲ್ಲರೂ ಖಾಸಗಿ ಬ್ಯಾಂಕ್‍ಗಳತ್ತ ಮುಖ ಮಾಡುತ್ತಿದ್ದಾರೆ ಎಂದರಲ್ಲದೆ, ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದವರು ಸಾಲ ಮನ್ನಾ ಮಾಡುತ್ತೇವೆ ಎಂದು ಭಾಷಣ ಮಾಡಿದರು. ಆದರೆ ಇಲ್ಲಿಯವರೆಗೆ ಯಾರಿಗೆ ಸಾಲಮನ್ನಾ ಆಗಿದೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ವಿವಿಧ ಶಾಖೆಗಳ ಅಧ್ಯಕ್ಷರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ರಾಜಣ್ಣನವರು, ಬ್ಯಾಂಕ್‍ಗಳ ಕಟ್ಟಡ ನಿರ್ಮಾಣಕ್ಕೆ ನೇರವಾಗಿ ಬಂದು ಹಣ ಕೇಳುವುದರ ಬದಲಿಗೆ ತಾವು ತಮ್ಮದೇ ಹಣದಲ್ಲಿ ಕಟ್ಟಡ ನಿರ್ಮಾಣ ಮಾಡಿ, ಕೊನೆಯ ಹಂತದಲ್ಲಿ ನಮ್ಮ ಬಳಿ ಬಂದರೆ ನಾವು ಸಹಾಯ ಮಾಡುತ್ತೇವೆ. ಅದರ ಬದಲಾಗಿ ಪ್ರಾರಂಭದಲ್ಲಿ ಬಂದು ಹಣ ಪಡೆದು ಸ್ವಲ್ಪ ಕೆಲಸ ಮಾಡಿಸಿ ನಿಲ್ಲಿಸಿದರೆ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ. ನಿಮ್ಮಂತೆಯೇ ನಾವು ಇಲ್ಲಿ ಖಾತೆದಾರರು ಠೇವಣಿ ಮಾಡುವುದರಲ್ಲಿಯೇ ಕೆಲಸ ಕಾರ್ಯಗಳನ್ನು ಮಾಡಬೇಕು. ಅದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.
ಇಲ್ಲಿಯವರೆಗೆ ಸಹಕಾರಿ ಬ್ಯಾಂಕ್‍ನಿಂದ ಜಾರಿ ಗೊಳಿಸಲಾದ ವಿವಿಧ ಯೋಜನೆಗಳಿಗೆ ಅದರದ್ದೇ ಆದ ಹಿನ್ನಲೆಗಳಿವೆ. ಆ ಹಿನ್ನೆಲೆಯ ಪ್ರಭಾವದಿಂದ ಯೋಜನೆಗಳನ್ನು ಜಾರಿ ಮಾಡಿದ್ದು, ಅದರಲ್ಲಿ ಪ್ರಮುಖವಾಗಿ ಮೃತ ರೈತರ ಸಾಲಮನ್ನಾ, ಚಿನ್ನಾಭರಣಗಳ ಮೇಲೆ ಸಾಲ, ಗೋಶಾಲೆಗಳಲ್ಲಿ ಊಟದ ವ್ಯವಸ್ಥೆ, ವಿಧ್ಯಾಭ್ಯಾಸಕ್ಕೆ ಸಹಾಯ ಹಸ್ತ ಮುಂತಾದ ಕಾರ್ಯಕ್ರಮಗಳು ತುಂಬಾ ಅನುಕೂಲವಾಗಿವೆ ಎಂದು ನೈಜ ಘಟನೆಗಳ ಉದಾಹರಣೆಯೊಂದಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಹಕಾರಿ ಮಂಡಳಿಯ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ರಾಜಣ್ಣನವರು ರೈತರ ಪರವಾಗಿ ಸೇವೆ ಮಾಡುತ್ತಿದ್ದು, ಇಡೀ ರಾಜ್ಯದಲ್ಲಿ ತುಮಕೂರಿನಲ್ಲೇ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ್ದಾರೆ. ಅದೇ ರೀತಿ ಸಾಕಷ್ಟು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಹಸ್ತ ನೀಡುವುದು. ತುಮಕೂರು ವಿವಿಯಲ್ಲಿ ಪ್ರತಿ ವರ್ಷ ನೀಡುವ ಬಂಗಾರದ ಪದಕಗಳಿಗೆ ಧನ ಸಹಾಯ ನೀಡುವುದು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಪ್ರಿಯರಾಗುತ್ತಿದ್ದರಿಂದ ಅವರ ಮೇಲೆ ರಾಜಕೀಯ ಕುತಂತ್ರಗಳನ್ನು ಮಾಡಿದರೂ ಅದಕ್ಕೆ ಎದೆಗುಂದದೇ ಕಾನೂನು ಹೋರಾಟ ಮಾಡಿ ಇಂದು ಬ್ಯಾಂಕಿನ ಆದಾಯ ಹೆಚ್ಚಳವಾಗುವಲ್ಲಿ ಅವಿರತಶ್ರಮ ಹಾಕಿದ್ದಾರೆ ಎಂದರು.
ಸಂದೀಪ್ ಎಂಬ ವಿದ್ಯಾರ್ಥಿ ಬ್ಯಾಂಕಿನಿಂದ ಸಾಲ ಪಡೆದು ವಿದ್ಯಾಭ್ಯಾಸ ಮುಂದುವರೆಸಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಇದೇ ವೇಳೆ ವಿವಿಧ ತಾಲ್ಲೂಕುಗಳಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕುಭೇಂದ್ರನಾಯ್ಕ್ ವಾರ್ಷಿಕ ವರದಿಯನ್ನು ಮಂಡಿಸಿದರು.
ಸಮಾರಂಭದಲ್ಲಿ ನಿರ್ದೇಶಕರಾದ ಕೆ.ಷಡಕ್ಷರಿ, ಎಸ್.ಲಕ್ಷ್ಮೀ ನಾರಾಯಣ, ತಾಳೇಮರದ ನರಸಿಂಹಯ್ಯ, ಬಿ.ಶಿವಣ್ಣ, ಜಿ.ಜೆ.ರಾಜಣ್ಣ, ಎಸ್.ಹನುಮಾನ್, ಎಸ್.ಆರ್.ರಾಜಕುಮಾರ್, ಬಿ.ಎಸ್.ದೇವರಾಜು, ಎಂ.ವಿ.ರಾಮಚಂದ್ರ, ಜಿ.ಎಸ್.ರವಿ, ಎಚ್.ಟಿ,ತಿಮ್ಮರಾಜು, ಆರ್.ಜೆ,.ಕಾಂತರಾಜು, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಜಂಗಮಪ್ಪ,. ರಾಮ ಪ್ರಸಾದ್, ಚನ್ನಮಲ್ಲಪ್ಪ, ಅನಿಲ್., ಇಂದಿರಾ ದೇನಾನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸೂಪರ್ ಸೀಡ್ ಘಟನೆ ನಡೆದಾಗ ಪ್ರತಿಯೊಬ್ಬರು ಪ್ರತಿಭಟನೆಗಳನ್ನು ಮಾಡಿ ನಮಗೆ ಸಹಕರಿಸಿದ್ದಕ್ಕೆ ಅಭಿನಂದನೆಗಳು ತಿಳಿಸಿದ ರಾಜಣ್ಣನವರು, ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ತುಮಕೂರಿನಲ್ಲಿ ಸೋಲನ್ನು ಅನುಭವಿಸಿದ್ದಾರೆ ಎಂಬ ಕಾರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿ ಸೀಪರ್ ಸೀಡ್ ಮಾಡಿದ್ದರು. ಅದಕ್ಕಾಗಿ ಕಾನೂನು ಹೋರಾಟ ಮಾಡಿದ್ದರಿಂದ, ನಮ್ಮ ಪರ ನ್ಯಾಯವಿದ್ದರಿಂದ ನಮಗೆ ನ್ಯಾಯ ದೊರಕಿತು. ಇಲ್ಲವಾದಲ್ಲಿ ಬ್ಯಾಂಕಿಗೆಎ ಬೀಗ ಹಾಕಿದ್ದರೆ ಎಲ್ಲರ ಪರಿಸ್ಥಿತಿ ಹೇಗಿರುತ್ತಿತ್ತು.ಕೆ.ಎನ್.ರಾಜಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








