ಬೆಂಗಳೂರು
ನಗರದಲ್ಲಿ ಮೊಬೈಲ್ ಸುಲಿಗೆ ಕಳವು ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡ ನಗರ ಪೊಲೀಸರು ಮೊಬೈಲ್, ಕಳ್ಳತನ ಮಾಡಿ, ಅದರಲ್ಲಿನ ಡೇಟಾವನ್ನು ತೆಗೆದು ಹೊಸದಾಗಿ ಪ್ಯಾಕ್ ಮಾಡಿ ಹೊರ ರಾಜ್ಯಗಳ ಕಳವು ಮೊಬೈಲ್ ಮಾರಾಟಗಾರರಿಗೆ ವಿಲೇವಾರಿ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಬೇಧಿಸಿ ೧ ಕೋಟಿ ೨೫ ಲಕ್ಷ ಮೌಲ್ಯದ ೫೬೩ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತರರಾಜ್ಯ ಜಾಲದಲ್ಲಿದ್ದ ಜೆಜೆ ನಗರದ ಕಿಜರ್ಪಾಷ (೨೧), ಅಸೀಫ್ ಖಾನ್ ಅಲಿಯಾಸ್ ಅಸೀಫ್ (೩೬), ಹಫ್ಜಲ್ ಷರೀಫ್ ಅಲಿಯಾಸ್ ಮೌಲಿ (೩೬), ಪಾದರಾಯನಪುರದ ಅಸ್ಲಂ (೪೭), ಕಲೀಂ (೨೦), ಸಲ್ಮಾನ್ (೨೨), ಉಲ್ಲಾಳ ಉಪನಗರದ ಸೈಯದ್ ಅಕ್ಬರ್ (೪೨) ಚಿಕ್ಕಬಸ್ತಿಯ ನವಾಜ್ಷರೀಫ್ ಅಲಿಯಾಸ್ ಅಕ್ರಂ (೪೨), ಹೈದ್ರಾಬಾದ್ನ ಮೊಬೈಲ್ ವ್ಯಾಪಾರಿ ಅಮೀರ್ ಜಮೀರ್ಖಾನ್ (೨೮) ಸೇರಿ ಹತ್ತು ಮಂದಿಯನ್ನು ಬಂಧಿಸಿ ಜಾಲದಲ್ಲಿದ್ದ ಇನ್ನು ಕೆಲವರ ಬಂಧನಕ್ಕೆ ಶೋಧ ನಡೆಸಿದ್ದಾರೆ.
ಅಂತರರಾಜ್ಯ ಮೊಬೈಲ್ ಕಳವು ವಿಲೇವಾರಿ ಮಾಡುತ್ತಿದ್ದ ಜಾಲದಲ್ಲಿದ್ದ ಆರೋಪಿಗಳಿಂದ ಆಪಲ್ ಕಂಪನಿಯ ೧೨, ಸ್ಯಾಮ್ಸಂಗ್ ೮೧, ಐಎಂ ೯೨, ವೀವೊ ೫೭, ಓಪೊ ೪೪, ನೋಕಿಯಾ ೨೧, ಸೋನಿ ೧೭, ಮೊಟೊರೊಲಾ ೪೨, ಲಿನೊವಾ ೨೨, ರೆಡ್ಮೀ ೨೧, ಹಾನರ್ ೨೩, ರಿಯಲ್ ಮೀ ೧೨ ಸೇರಿದಂತೆ ೫೬೩ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ೧ ಕೋಟಿ ೨೫ ಲಕ್ಷಗಳಾಗಿದೆ ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ೨ ಆಟೋ, ೧ ಬೈಕ್, ೨೬,೧೫೦ ನಗದು ವಶಪಡಿಸಿಕೊಳ್ಳಲಾಗಿದ್ದು, ಜಪ್ತಿ ಮಾಡಿರುವ ಮೊಬೈಲ್ಗಳ ಇಎಂಇಐ ಸಂಖ್ಯೆಯಾಧರಿಸಿ ವಾರಸುದಾರರು ಪತ್ತೆ ಹಾಗೂ ಮೊಬೈಲ್ ರಿಪೇರಿ ಅಂಗಡಿಗಳಲ್ಲಿ ಕಳವು ಮಾಡಿದ ಮೊಬೈಲ್ ಮಾರಾಟದ ಮಾಹಿತಿ ಸಂಗ್ರಹಿಸಲಾಗುವುದುಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಕಿಜರ್ ಪಾಷ, ಸಲ್ಮಾನ್, ಆಟೋ ಚಾಲಕರಾದ ನವಾಜ್ ಷರೀಫ್, ಹಫ್ಜಲ್ ಷರೀಫ್, ಟಯರ್ ವ್ಯಾಪಾರ ಮಾಡುತ್ತಿದ್ದ ಖಲೀಂ ಸೇರಿ ಐವರು ನಗರದ ವಿವಿಧೆಡೆ ಆಟೋ ಹಾಗೂ ಬೈಕ್ಗಳಲ್ಲಿ ಸುತ್ತಾಡುತ್ತ ಒಂಟಿಯಾಗಿ ಓಡಾಡುವವರ ಮೊಬೈಲ್ ಸುಲಿಗೆ, ಕಳವು ಮಾಡುತ್ತಿದ್ದರು.
ಕಳವು ವಿಲೇವಾರಿ
ಬಂಧಿತ ಆರೀಫ್ ಪಾಷ, ಆಸೀಫ್ ಖಾನ್, ಅಸ್ಲಂ ಹಾಗೂ ಸೈಯದ್ ಅಕ್ಬರ್ ಮೇಲಿನ ಐವರು ಆರೋಪಿಗಳಿಂದ ಮೊಬೈಲ್ಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅದರಲ್ಲಿನ ಡೇಟಾವನ್ನು ಫ್ಲಾಷ್ ಮಾಡಿ ಹೊಸ ಮೊಬೈಲ್ಗಳಂತೆ ಪ್ಯಾಕ್ ಮಾಡಿ ಹೊರ ರಾಜ್ಯದ ಕಳವು ಮೊಬೈಲ್ಗಳನ್ನು ಸ್ವೀಕರಿಸುವವರಿಗೆ ಮಾರಾಟ ಮಾಡುತ್ತಿದ್ದರು.
ಹೈದ್ರಾಬಾದ್ನ ಬಂಧಿತ ಆರೋಪಿ ಅಮೀರ್ ಜಮೀರ್ ಆರೋಪಿಗಳಿಂದ ಕಳ್ಳತನ ಮಾಡಿದ್ದ ಮೊಬೈಲ್ಗಳನ್ನು ಕಡಿಮೆ ಬೆಲೆಗೆ ತೆಗೆದುಕೊಂಡು ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತ ವ್ಯವಸ್ಥಿತ ಜಾಲವನ್ನು ಸೃಷ್ಟಿಸಿಕೊಂಡಿದ್ದರು.ಹೈದ್ರಾಬಾದ್ ಅಲ್ಲದೆ ಬೇರೆ ರಾಜ್ಯಗಳಿಗೂ ಆರೋಪಿಗಳು ಮೊಬೈಲ್ ಮಾರಾಟ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಪ್ರತಿರೋಧ ಹಲ್ಲೆ
ಸುಲಿಗೆ, ಕಳವು ಮಾಡುತ್ತಿದ್ದ ಬಂಧಿತ ಆರೋಪಿಗಳು, ಮೊಬೈಲ್ ಕಸಿಯಲು ಹೋದಾಗ ಪ್ರತಿರೋಧ ತೋರಿದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳು ವರದಿಯಾಗಿದ್ದು, ಪೊಲೀಸ್ ಇಲಾಖೆಗೆ ಈ ಜಾಲ ಸವಾಲಾಗಿ ಪರಿಣಮಿಸಿತ್ತು ಎಂದು ಭಾಸ್ಕರ್ರಾವ್ ತಿಳಿಸಿದರು.
ಆರೋಪಿಗಳ ಪೈಕಿ ಅಸ್ಲಾಂ ಮೇಲೆ ಗಿರಿನಗರ, ಮಾರತ್ಹಳ್ಳಿ. ಜೆಜೆ ನಗರ, ಎಸ್ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಲಿಗೆ, ಕಳವು ಕೃತ್ಯ, ಗಾಂಜಾ ಮಾರಾಟ, ಮಟ್ಕಾ-ಜೂಜಾಟ ದಂಧೆ ಪ್ರಕರಣಗಳು ದಾಖಲಾಗಿದ್ದರೆ, ಮತ್ತೊಬ್ಬ ಆರೋಪಿ ಕಿಜರ್ ಪಾಷಾನ ವಿರುದ್ಧ ಗಿರಿನಗಗರ, ಎಸ್ಆರ್ ನಗರಗಳಲ್ಲಿ ಸುಲಿಗೆ, ಕಳವು ಪ್ರಕರಣಗಳು ದಾಖಲಾಗಿವೆ.
ವಿಶೇಷ ತಂಡ ರಚನೆ
ನಗರದ ಎಸ್ಜೆ ಪಾರ್ಕ್, ವಿವೇಕ್ನಗರ, ಎಸ್ಆರ್ ನಗರ, ಇನ್ನಿತರ ಕಡೆಗಳಲ್ಲಿ ಮೊಬೈಲ್-ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಪೊಲೀಸ್ ತಂಡವನ್ನು ಕೇಂದ್ರವಿಭಾಗದ ಡಿಸಿಪಿ ಚೇತನ್ಸಿಂಗ್ ರಾಥೋಡ್ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು.
ತಂಡದಲ್ಲಿದ್ದ ಇನ್ಸ್ಪೆಕ್ಟರುಗಳಾದ ತನ್ವೀರ್, ಜಗದೀಶ್, ರಫೀಕ್ ಕಾರ್ಯಾಚರಣೆ ಕೈಗೊಂಡ ೪೫ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ತಾಂತ್ರಿಕ ನೆರವಿನೊಂದಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತಂಡಕ್ಕೆ ನಗದು ಬಹುಮಾನವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಚೇತನ್ಸಿಂಗ್ ರಾಥೋಡ್ ಅವರಿದ್ದರು.
ಹಲವರು ಭಾಗಿ
ಇದೇ ವೇಳೆ ಮಾತನಾಡಿದ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ಸಂಪಂಗಿರಾಮನಗರ, ವಿವೇಕ್ನಗರ, ಎಸ್.ಜೆ ಪಾರ್ಕ್ ಇನ್ನಿತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್, ಸುಲಿಗೆ, ಕಳವು ಪ್ರಕರಣಗಳು ಹೆಚ್ಚಾಗಿದ್ದವು. ಕಳವು ಮಾಡಿದ್ದ ಮೊಬೈಲ್ಗಳ ಡೇಟಾ ತೆಗೆದು ಪ್ಯಾಕ್ ಮಾಡಿ ಹೊರ ರಾಜ್ಯದ ಕದ್ದ ಮೊಬೈಲ್ ಮಾರಾಟಗಾರರಿಗೆ ವಿಲೇವಾರಿ ಮಾಡುವ ಜಾಲವಿರುವ ಖಚಿತ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಇನ್ನು ಹಲವರು ಭಾಗಿಯಾಗಿರುವ ಮಾಹಿತಿ ಇದ್ದು, ಅವರನ್ನೂ ಬಂಧಿಸಲಾಗುವುದು ಅಲ್ಲದೆ ಮೊಬೈಲ್ಗಳ ಇಎಂಇಐ ಸಂಖ್ಯೆಯನ್ನು ಬದಲಿಸುವ ಕೃತ್ಯದ ಬಗ್ಗೆಯೂ ತನಿಖೆ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








