ಬೇಡಿಕೆಗೆ ಅನುಗುಣವಾಗಿ ಉತ್ಪಾದಿಸಿ : ಕೋಟ ಶ್ರೀನಿವಾಸ ಪೂಜಾರಿ

ಬಳ್ಳಾರಿ

     ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯ ಮೀನುಗಳ ಬೇಡಿಕೆಯಿದ್ದು, ಅದಕ್ಕೆ ತಕ್ಕ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಜರಾಯಿ ಮತ್ತು ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಜಲಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪೌಷ್ಠಿಕ ಆಹಾರದ ಕೊರತೆಯನ್ನು ನೀಗಿಸುವ ದೃಷ್ಠಿಯಿಂದ ಮತ್ತು ಬಡ ವರ್ಗದವರಿಗೂ ಆರ್ಥಿಕ ಅಭಿವೃದ್ಧಿ ದೃಷ್ಠಿಯಿಂದ ಬೇಡಿಕೆಗೆ ತಕ್ಕ ಮೀನುಗಳ ಉತ್ಪಾದನೆಗೆ ಅಗತ್ಯ ಕ್ರಮಕೈಗೊಳ್ಳುವುದಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.

    ಸಂಘದ ಸದಸ್ಯರಿಗೆ ಇಲಾಖೆಯಿಂದ ಮತ್ಸ್ಯಾಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ಸಹಾಯಧನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೀನುಗಾರರ ಸಹಕಾರ ಸಂಘಗಳಲ್ಲಿ ಸಭೆ, ಸದಸ್ಯತ್ವ, ಸಾಮಾನ್ಯ ಸಭೆಯನ್ನು ನಿಬಂಧನೆಗಳ ಅನುಸಾರವಾಗಿ ನಡೆಸಬೇಕು ಎಂದರು.

      ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳು ಇಲಾಖೆಗಳಲ್ಲಿ ಹೊಸ ಯೋಜನೆಗಳನ್ನು ಚಿಂತನೆ ಮಾಡಿ ಅದರ ಕಾರ್ಯರೂಪಕ್ಕೆ ತರುವುದರ ಮೂಲಕ ಜನರಿಗೆ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕು ಎಂದರು.ಜಿಲ್ಲೆಯಲ್ಲಿ ಪ್ರಸ್ತುತ 100ಕ್ಕೂ ಹೆಚ್ಚು ದೊಡ್ಡ ಕೆರೆ, 50ಕ್ಕೂ ಹೆಚ್ಚು ಸಣ್ಣ ಕೆರೆಗಳು ಹಾಗೂ 20 ಸಾವಿರ ಹೇಕ್ಟರ್ ನೀರಾವರಿ ಪ್ರದೇಶಗಳಲ್ಲಿ 2 ಕೋಟಿ ಮೀನುಗಳನ್ನು ಉತ್ಪಾದನೆ ಆಗುತ್ತಿದ್ದು, ಇದನ್ನು 4-5 ಕೋಟಿ ಉತ್ಪಾದನೆ ಮಾಡಲು ಹೊಸ ಯೋಜನೆಗಳನ್ನು ರೂಪಿಸಿ ಎಂದರು.

ಹಂಪಿ ಉತ್ಸವದಲ್ಲಿ ಮತ್ಸ್ಯ  ಮೇಳ:

       ಜ.11 ಮತ್ತು 12 ರಂದು ಹಂಪಿಯಲ್ಲಿ ನಡೆಯಲಿರುವ ಹಂಪಿ ಉತ್ಸವದಲ್ಲಿ ಮತ್ಸ್ಯ ಮೇಳವನ್ನು ಆಯೋಜಿಲಾಗುತ್ತದೆ. ಈ ಮತ್ಸ್ಯ ಮೇಳದಲ್ಲಿ ಅಲಂಕಾರಿಕವಾದ ಮತ್ಸ್ಯಗಳನ್ನು ಪ್ರದರ್ಶನ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

       ನಂತರ ಧಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ, ಎಲ್ಲಾ ಎ-ಶ್ರೇಣಿ, ಬಿ-ಶ್ರೇಣಿ ದೇವಸ್ಥಾನಗಳಲ್ಲಿ ಪಾರದರ್ಶಕವಾದ ಆಡಳಿತವನ್ನು ನಡೆಸಬೇಕು. ಕಾನೂನಿನ ಚೌಕಟ್ಟಿನಲ್ಲಿ ದೇವಸ್ಥಾನದ ಅನುದಾನವನ್ನು ಉಪಯೋಗಿಸಿಕೊಳ್ಳಬೇಕು ಎಂದರು.

      ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮಠಾಧೀಶರು ಹಾಗೂ ಇತರೆ ಗಣ್ಯವ್ಯಕ್ತಿಗಳ ಸಮಕ್ಷಮದಲ್ಲಿ ಬೃಹತ್ ಸಾಮೂಹಿಕ ಮದುವೆ ಕಾರ್ಯಕ್ರಮ ಏರ್ಪಡಿಸುವ ಉದ್ದೇಶವಿದೆ ಎಂದರು.ಎಲ್ಲಾ ದೇವಸ್ಥಾನದಲ್ಲಿ ಪ್ಲಾಸ್ಟಿಕ್‌ನ್ನು ಉಪಯೋಗಿಸಬಾರದು. ಪ್ಲಾಸ್ಟಿಕ್ ಬ್ಯಾನ್ ಕುರಿತು ದೇವಸ್ಥಾನಗಳಲ್ಲಿ ಫಲಕಗಳನ್ನು ಹಾಕಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

      ಈ ಸಂದರ್ಭದಲ್ಲಿ ಜಿಲ್ಲೆಯ ಎ, ಬಿ ಮತ್ತು ಸಿ-ಶ್ರೇಣಿಯ ದೇವಸ್ಥಾನಗಳ ಮಾಹಿತಿಯನ್ನು ಪಡೆದರು. ಈ ಸಂದರ್ಭದಲ್ಲಿ ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೇರಿದಂತೆ ಮೀನುಗಾರಿಕೆ, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link