ಡಾಬಸ್‍ಪೇಟೆಗೆ ಹೇಮಾವತಿ: ಪಾಲಿಕೆ ವಿರೋಧ

ತುಮಕೂರು
    ತುಮಕೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬುಗುಡನಹಳ್ಳಿಯ ಜಲಸಂಗ್ರಹಾಗಾರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನೀರನ್ನು ಹರಿಸುವುದಕ್ಕೆ ತುಮಕೂರು ಮಹಾನಗರ ಪಾಲಿಕೆಯು ವಿರೋಧ ವ್ಯಕ್ತಪಡಿಸಿದೆಯಲ್ಲದೆ, ಮೈದಾಳ ಕೆರೆಗೆ ಹೇಮಾವತಿ ಹರಿಸಿ  ಆ ನೀರನ್ನು ಅಲ್ಲಿಂದ ತುಮಕೂರು ನಗರಕ್ಕೆ ಸರಬರಾಜು ಮಾಡುವ ಮಹತ್ವದ ತೀರ್ಮಾನವನ್ನು ತುಮಕೂರು ಮಹಾನಗರ ಪಾಲಿಕೆಯು ಕೈಗೊಂಡಿದೆ.
     ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ (ಸಂಖ್ಯೆ: 56/16) ಚರ್ಚಿಸಲಾಗಿದೆ.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ (ಕೆ.ಐ.ಎ.ಡಿ.ಬಿ.) ಯು ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ಡಾಬಸ್‍ಪೇಟೆಯ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನೀರನ್ನು ಹರಿಸಲು ಪೈಪ್‍ಲೈನ್ ಕಾಮಗಾರಿಯನ್ನು ಕೈಗೊಂಡಿದೆ.
 
     ಆದರೆ ಈ ಕಾಮಗಾರಿಯನ್ನು ಮೈದಾಳ ಕೆರೆಯವರೆಗೆ ಮಾತ್ರ ಕೈಗೊಳ್ಳಬೇಕು. ಅಲ್ಲಿಂದ ಮುಂದಕ್ಕೆ ಕಾಮಗಾರಿ ಮುಂದುವರೆಸಲು ಹಾಗೂ ತುಮಕೂರು ನಗರಕ್ಕೆ ಕುಡಿಯುವ ಸಲುವಾಗಿ ನಿಗದಿಯಾದ ಹೇಮಾವತಿ ನೀರನ್ನು ಡಾಬಸ್‍ಪೇಟೆಗೆ ಒಯ್ಯಲು ಪಾಲಿಕೆಯು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಿ ಈ ಬಗ್ಗೆ ಮಂಡಲಿಗೆ ಪತ್ರ ಬರೆಯಲು ನಿರ್ಧಾರಿಸಲಾಗಿದೆ. 
ಮೈದಾಳಕ್ಕೆ ಹೇಮಾವತಿ
     ಪ್ರಸ್ತುತ ತುಮಕೂರು ನಗರದ ಜನಸಂಖ್ಯೆ ಮತ್ತು ಮುಂದಿನ ದಿನಗಳಲ್ಲಿನ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಕುಡಿಯುವ ನೀರು ಪೂರೈಕೆ ಮಾಡಲು ಅನುವಾಗುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿಮಂಡಲಿಯು 24/7 ಕುಡಿಯುವ ನೀರಿನ ಯೋಜನೆ ಜಾರಿಮಾಡುತ್ತಿದೆ. ಈ ಯೋಜನೆಯು ಯಶಸ್ವಿಯಾಗಬೇಕಾದರೆ ತುಮಕೂರು ನಗರಕ್ಕೆ ನಿಗದಿಪಡಿಸಲಾಗಿರುವ ಹೇಮಾವತಿ ನೀರಿನಲ್ಲೇ ಮೈದಾಳ ಕೆರೆಯನ್ನೂ ಭರ್ತಿ ಮಾಡಿಕೊಂಡು ಅಲ್ಲಿಂದ ಅ ನೀರನ್ನು ತುಮಕೂರು ನಗರಕ್ಕೆ ಬಳಸಿಕೊಳ್ಳಬಹುದಾಗಿದೆಯೆಂದು ನಿರ್ಣಯಿಸಲಾಗಿದೆ. 
     ಈ ಹಿನ್ನೆಲೆಯಲ್ಲಿ ಮೈದಾಳ ಕೆರೆಯಿಂದ ತುಮಕೂರು ನಗರದಲ್ಲಿರುವ ವಿದ್ಯಾನಗರ ವಾಟರ್ ವಕ್ರ್ಸ್ ಮತ್ತು ಸಿದ್ಧಗಂಗಾ ಮಠಕ್ಕೆ ಪ್ರತ್ಯೇಕವಾದ ಪೈಪ್‍ಲೈನ್ ಅಳವಡಿಸಲು ಮತ್ತು ಪಂಪ್ ಹೌಸ್ ನಿರ್ಮಿಸಲು ಪಾಲಿಕೆ ನಿರ್ಧಾರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link