ಹೊಸಪೇಟೆ :
ಮುಂದಿನ 2023ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸೋದೆ ನನ್ನ ಪರಮ ಗುರಿ ಎಂದು ಕೆಪಿಸಿಸಿ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಖಾಸಗಿ ಹೋಟೆಲ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬೇರುಗಳು ಗಟ್ಟಿಯಾಗಿವೆ. ಇಲ್ಲಿ ಕಾರ್ಯಕರ್ತರೇ ಲೀಡರ್‍ಗಳಿದ್ದಂತೆ. ನಮ್ಮ ಪಕ್ಷದ ವತಿಯಿಂದ ಹಣ, ಹೆಂಡ ಹಂಚಲಿಲ್ಲ.
ಆದರೂ ನಮ್ಮ ಅಭ್ಯರ್ಥಿ 55 ಸಾವಿರ ಮತಗಳನ್ನು ಪಡೆದಿದ್ದಾರೆ. ಆದರೆ ಬಿಜೆಪಿಯ ಆನಂದಸಿಂಗ್ ಹಣ, ಹೆಂಡ, ಅಧಿಕಾರ ಬಳಸಿಕೊಂಡು ಚುನಾವಣೆ ಗೆದ್ದಿದ್ದಾರೆ. ನಾವು ಏನು ಇಲ್ಲದೇ ಇಷ್ಟೊಂದು ಮತಗಳನ್ನು ಪಡೆದಿದ್ದೇವೆ. ಇಲ್ಲಿ ಕಾಂಗ್ರೆಸ್ ಬೇರುಗಳು ಗಟ್ಟಿಯಾಗಿವೆ ಅಂತ ಇದರಿಂದ ಗೊತ್ತಾಗುತ್ತದೆ. ಮುಂದಿನ 2023ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಲಿ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸೋದೆ ನನ್ನ ಪರಮ ಗುರಿ ಬರೆದಿಟ್ಟುಕೊಳ್ಳಿ ಎಂದರು.
ಕಾಂಗ್ರೆಸ್ ಯಾವತ್ತೂ ನಶಿಸಿ ಹೋಗೋ ಪಕ್ಷವಲ್ಲ. ಬಿಜೆಪಿ ಯಡಿಯೂರಪ್ಪ, ಮೋದಿ ಹೋದರೆ ಮುಗೀತು. ಆ ಪಕ್ಷವನ್ನು ಕೇಳೋರೇ ಇರೋದಿಲ್ಲ. ಆದರೆ ಕಾಂಗ್ರೆಸ್ ಹಾಗಲ್ಲ. ಯಾರೇ ಇದ್ದರೂ, ಯಾರೇ ಹೋದರೂ ಪಕ್ಷ ಮಾತ್ರ ಜೀವಂತವಾಗಿರುತ್ತೆ. ಹೊಸಪೇಟೆ ಕಾಂಗ್ರೆಸ್‍ನ ಭದ್ರಕೋಟೆ. ಹೀಗಾಗಿ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಬೇಡ. ಒಬ್ಬರ ಮೇಲೆ ಒಬ್ಬರು ಛಾಡಿ ಹೇಳೋದು ಬೇಡ.
ನಾವೆಲ್ಲರೂ ಒಂದೇ. ಕಾರ್ಯಕರ್ತರು ಇನ್ನು ಮೇಲೆ ಎದೆಗುಂದ ಬೇಕಿಲ್ಲ. ಇನ್ನು ಮುಂದೆ ಕಾಂಗ್ರೆಸ್ ಕಾರ್ಯವೈಖರೀನೇ ಬದಲಾಗಲಿದೆ. ನೀವು ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡಿದರೆ ಗೆಲುವು ಕಷ್ಟವಲ್ಲ ಎಂದು ಹೇಳಿದರು.ಮುಂದಿನ ಚುನಾವಣೆಯಲ್ಲಿ ನೀವು ಟಿಕೆಟ್ ಆಕಾಂಕ್ಷಿಗಳಾ ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ “ ಅದನ್ನು ಪಕ್ಷ ನಿರ್ಣಯ ಮಾಡುತ್ತೆ. ನಾನು ಆಗಲಿ, ಇಮಾಮ್ ಆಗಲಿ, ಬೇರೆ ಯಾರೇ ಆಗಲಿ. ಆದರೆ ನಾನು ಮುಂದಿನ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಅವರನ್ನು ಎಂಎಲ್‍ಎ ಮಾಡೇ ಮಾಡುತ್ತೇನೆ. ಇದು ಶತಸಿದ್ದ ಎಂದರು.
ಕಂಪ್ಲಿ ಶಾಸಕ ಜೆ.ಎನ್.ಗಣೇಶ ಮಾತನಾಡಿ, 224 ಕ್ಷೇತ್ರಗಳಲ್ಲಿ ಹೊಸಪೇಟೆ ವಿಭಿನ್ನ ಕ್ಷೇತ್ರ. ಇಲ್ಲಿ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕರಿದ್ದರೆ ಖಂಡಿತಾ ಉಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ಇದರಿಂದ ಗೆಲುವು ಸುಲಭವಾಗೋದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.
ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಮಾಮ್ ನಿಯಾಜಿ, ವಿ.ಸೋಮಪ್ಪ, ಗುಜ್ಜಲ ನಾಗರಾಜ, ಗುಜ್ಜಲ ರಘು, ನಿಂಬಗಲ್ ರಾಮಕೃಷ್ಣ, ಭಾಗ್ಯಲಕ್ಷ್ಮಿ ಭರಾಡೆ, ತಾರಿಹಳ್ಳಿ ವೆಂಕಟೇಶ, ಬಿ.ಚಂದ್ರಶೇಖರ, ಕೆ.ತಿಪ್ಪೇಸ್ವಾಮಿ, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ