ಧರಣಿ, ಧಿಕ್ಕಾರ ಬಿಟ್ಟು ಇನ್ನಾದರೂ ಬದುಕು ಕಟ್ಟಿಕೊಳ್ಳಿ

ಚಿತ್ರದುರ್ಗ:

     ಡಿ.ಸಿ.ಕಚೇರಿ, ತಾಲೂಕು ಕಚೇರಿ ಎದುರು ಪ್ರತಿಭಟನೆ ಧರಣಿ ನಡೆಸಿ ಧಿಕ್ಕಾರಗಳನ್ನು ಕೂಗುವುದನ್ನು ಇನ್ನಾದರೂ ನಿಲ್ಲಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಭಿಗಳಾಗಿ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಿ ಎಂದು ಎಸ್.ಸಿ. ಎಸ್.ಟಿ.ಜನಾಂಗಕ್ಕೆ ಕರ್ನಾಟಕ ರಾಜ್ಯ ಎಸ್.ಸಿ./ಎಸ್.ಟಿ.ಎಂಟರ್ ಪ್ರೀನ್ಯೂರ್ಸ್ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ರಾಜ್ಯಸಭೆ ಸದಸ್ಯರಾದ ಡಾ.ಎಲ್.ಹನುಮಂತಯ್ಯ ಕರೆ ನೀಡಿದರು.

   ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ಜಿಲ್ಲಾ ಎಸ್.ಸಿ. ಎಸ್.ಟಿ. ಎಂಟರ್ ಪ್ರೀನ್ಯೂರ್ಸ್ ಇಂಡಸ್ಟ್ರಿಯಲ್ ಅಸೋಸಿಯೇಷನ್ ಉದ್ಘಾಟನೆ ಮತ್ತು ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.38 ರಿಂದ ಶೇ.40 ರಷ್ಟು ಪರಿಶಿಷ್ಟ ಜಾತಿ ವರ್ಗದವರಿದ್ದಾರೆ. ಸರ್ಕಾರದಿಂದ ನಿಮಗೆ ಸಿಗಬೇಕಾದ ನ್ಯಾಯಯುತವಾದ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳುವ ಜ್ಞಾನವನ್ನು ಮೊದಲು ಬೆಳೆಸಿಕೊಳ್ಳಿ. ಎಲ್ಲಿಯವರೆಗೂ ಅಧಿಕಾರಿಗಳು ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿಕೊಂಡೆ ಕಾಲ ಕಳೆಯುತ್ತೀರ. ಚುನಾವಣೆಯಲ್ಲಿ ಹಣ ಪಡೆದು ಮತ ಹಾಕುವುದು ಒಳ್ಳೆಯ ಬೆಳವಣಿಗೆಯಲ್ಲ. ಪೊಲೀಸ್, ನ್ಯಾಯಾಲಯ ರಕ್ಷಣೆ ಕೊಡುತ್ತದೆಂದು ನಂಬಿ ಕುಳಿತುಕೊಳ್ಳುವ ಬದಲು ಸರ್ಕಾರ ಬ್ಯಾಂಕುಗಳಿಂದ ಸಿಗುವ ಸಾಲ ಸವಲತ್ತುಗಳನ್ನು ಬಳಸಿಕೊಂಡು ಉದ್ಯಮಿಗಳು, ವ್ಯಾಪಾರಸ್ಥರಾಗುವ ಮೂಲಕ ಇನ್ನು ಹತ್ತು ಮಂದಿಗೆ ಕೆಲಸ ಕೊಡುವ ಶಕ್ತಿ ನಿಮ್ಮಲ್ಲಿ ಬರಬೇಕು ಎಂದು ಹೇಳಿದರು.

   ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕಾದರೆ ಮೊದಲು ಶಿಕ್ಷಣ ಬೇಕು. ಮತ್ತೊಬ್ಬರ ಬಳಿ ಹೋಗಿ ಕೆಲಸ ಮಾಡುವ ಬದಲು ನೀವೆ ಉದ್ಯಮಿಗಳಾಗಿ. ಪಾರಂಪರಿಕ ಕೆಲಸ ಮಾಡುವುದನ್ನು ಬಿಟ್ಟು ಹೊಸ ಕೌಶಲ್ಯಯುಕ್ತ ಕೆಲಸಗಳನ್ನು ಕಂಡುಕೊಂಡಾಗ ಜೀವನ ಸುಧಾರಣೆಯಾಗಲಿದೆ. ಇಲ್ಲಿಯವರೆಗೂ ಶೇ.50 ರಷ್ಟು ಸಬ್ಸಿಡಿಯನ್ನು ಎಸ್.ಸಿ.ಎಸ್.ಟಿ. ಗಳಿಗೆ ನೀಡುತ್ತಿರುವುದನ್ನು ಈಗ ಶೇ.75 ಕ್ಕೆ ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇವೆ.

    ದೊಡ್ಡ ದೊಡ್ಡ ಉದ್ಯಮಿಗಳ್ಯಾರು ಮನೆಯಿಂದ ಹಣ ತಂದು ಹಾಕಿದವರಲ್ಲ. ಬ್ಯಾಂಕ್‍ಗಳಿಂದ ಸಾಲ ಪಡೆದು ಉದ್ಯಮಿಗಳಾಗಿದ್ದಾರೆ. ಇಂಡಸ್ಟ್ರಿಸ್‍ಗಳು ಹತ್ತು ಲಕ್ಷ ಕೋಟಿ ಸಾಲ ಸರ್ಕಾರಕ್ಕೆ ಕಟ್ಟಲು ಆಗಿಲ್ಲ. ಶೇ.ಎರಡರಷ್ಟು ಎಸ್.ಸಿ.ಎಸ್.ಟಿ.ಗಳು ಬ್ಯಾಂಕ್‍ಗಳಲ್ಲಿ ಸಾಲ ತೆಗೆದುಕೊಂಡಿಲ್ಲ. ನೀವು ಸಾಲ ಕಟ್ಟುತ್ತೀರೋ ಇಲ್ಲವೋ ಅದು ಬೇರೆ ವಿಷಯ ಮೊದಲು ಸಾಲ ತೆಗೆದುಕೊಳ್ಳುವ ಧೈರ್ಯ ಮಾಡಿ ಎಂದು ಹುರಿದುಂಬಿಸಿದರು.

    ರಾಜ್ಯ ಸರ್ಕಾರ 43 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡಿದೆ. ಅದರಲ್ಲಿ ಶೇ.1 ರಷ್ಟು ಎಸ್.ಸಿ.ಎಸ್.ಟಿ.ರೈತರಿಲ್ಲ. ಸರ್ಕಾರ, ಬ್ಯಾಂಕ್‍ಗಳಿಂದ ಸಿಗುವ ಸಾಲ ಪಡೆದು ಸ್ವಾವಲಂಭಿಗಳಾಗಿ ಜೀವಿಸಿ ಮತ್ತೊಬ್ಬರ ಬಳಿ ಹೋಗಿ ಭಿಕ್ಷೆ ಬೇಡುವುದಿಲ್ಲ ಎನ್ನುವ ಪ್ರತಿಜ್ಞೆ ಮಾಡಿ ಎಂದು ಪರಿಶಿಷ್ಟ ಜಾತಿ ವರ್ಗದವರನ್ನು ಎಚ್ಚರಿಸಿದ ಡಾ.ಎಲ್.ಹನುಮಂತಯ್ಯನವರು ಎಲ್ಲರಿಗೂ ಸರ್ಕಾರಿ ಕೆಲಸ ಸಿಗಲ್ಲ. ಸ್ವಾಭಿಮಾನಿಯಾಗಿ ಬದುಕಬೇಕಾದರೆ ದಲಿತರು ಇಂದಿಗೂ ಆರ್ಥಿಕ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲದಿರುವುದೇ ಕಾರಣ ಎಂದು ವಿಷಾಧಿಸಿದರು.

    ಸಂಘಟನೆ ಹುಟ್ಟಿ ಹನ್ನೆರಡು ವರ್ಷಗಳಾಗಿದೆ. ಅಲ್ಲಿಂದ ಇಲ್ಲಿಯತನಕ ಪರಿಶಿಷ್ಟ ಜಾತಿ ವರ್ಗದವರನ್ನು ಸ್ವಾವಲಂಭಿಗಳನ್ನಾಗಿಸುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಸರ್ಕಾರದ ಸವಲತ್ತುಗಳನ್ನು ಮೊದಲು ಪರಿಚಯ ಮಾಡಿಕೊಳ್ಳಿ. ಯಾವುದೇ ಗ್ಯಾರೆಂಟಿಯಿಲ್ಲದೆ ಸರ್ಕಾರವೇ ಎರಡು ಕೋಟಿ ರೂ.ಸಾಲ ಕೊಡಬೇಕು. ಹತ್ತು ಕೋಟಿವರೆಗೆ ಶೇ.4 ರಷ್ಟು ಬಡ್ಡಿ ಹಾಕಬೇಕು ಇದೆಲ್ಲಾ ನಿಮಗೆ ತಿಳಿದಿರಲಿ ಎಂದರು.

    ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ದಲಿತರಲ್ಲಿಯೇ ಬಲಿತರಾಗಿರುವವರ ವಿರುದ್ದ ಎಸ್.ಸಿ. ಎಸ್.ಟಿ.ಜನಾಂಗ ಎಚ್ಚರಿಕೆಯಿಂದಿರಬೇಕಾಗಿದೆ. ಸರ್ಕಾರ ಹಾಗೂ ಬ್ಯಾಂಕ್‍ಗಳಿಂದ ಸಾಕಷ್ಟು ಸೌಲಭ್ಯಗಳಿವೆ. ದಲಿತರಲ್ಲಿಯೇ ಹೆಚ್ಚು ಬಲಶಾಲಿಗಳು ಎಲ್ಲಾ ನಮಗೆ ಇರಲಿ ಎಂದು ದೋಚುತ್ತಿದ್ದಾರೆ. ಜನಾಂಗದಲ್ಲಿ ಹುಟ್ಟಿದ ಮೇಲೆ ಕಿಂಚಿತ್ತಾದರೂ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

    ದುರಾಸೆ ಜಾಸ್ತಿಯಾಗಿದೆ. ಸೌಲಭ್ಯಗಳನ್ನು ಪಡೆದುಕೊಂಡವರೆ ಮತ್ತೆ ಮತ್ತೆ ಪಡೆದುಕೊಳ್ಳುತ್ತಿರುವುದರಿಂದ ಕಟ್ಟ ಕಡೆಯ ದಲಿತ ಇನ್ನು ಬಡವನಾಗಿಯೇ ಉಳಿದಿದ್ದಾನೆ. ನಾನು ಚುನಾವಣೆಯಲ್ಲಿ ಗೆದ್ದಾಗ ಹೇಗೆ ಸುತ್ತಾಡುತ್ತಿದ್ದೆನೋ ಈಗಲೂ ಅದೇ ರೀತಿ ಜನಗಳ ಮಧ್ಯೆ ಓಡಾಡಿಕೊಂಡು ಕಷ್ಟ-ಸುಖ ಆಲಿಸುತ್ತಿದ್ದೇನೆ. ಸೋತೆನೆಂದು ಮನೆಯಲ್ಲಿ ಕುಳಿತಿಲ್ಲ. ಸಿಕ್ಕಾಪಟ್ಟೆ ತಿಂದರೆ ಅಜೀರ್ಣವಾಗುತ್ತದೆ. ಎಷ್ಟು ಬೇಕೋ ಅಷ್ಟು ತಿಂದು ಕಷ್ಟದಲ್ಲಿರುವವರನ್ನು ಮೇಲೆತ್ತುವ ಮನಸ್ಸುಗಳು ಬೇಕಾಗಿದೆ ಎಂದರು.
 

    ಅವಿದ್ಯಾವಂತರು, ತಿಳಿಯದವರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಸರ್ಕಾರದ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ತಲುಪದಿದ್ದರೆ ಕನ್ನಡಿಯೊಳಗಿನ ಗಂಟಾಗಿ ಉಳಿಯುತ್ತದೆ ಎಂದು ತಿಳಿಸಿದರು.
ಸಮಾಜವಾದಿ ಚಿಂತಕ ಬೆಂಗಳೂರಿನ ಜಿ.ವಿ.ಸುಂದರ್ ಮಾತನಾಡುತ್ತ ಎಪ್ಪತ್ತರ ದಶಕದಲ್ಲಿಯೇ ದಲಿತರ ಮೇಲೆ ನಡೆಯುತ್ತಿದ್ದ ಹಲ್ಲೆ, ದೌರ್ಜನ್ಯ, ಅತ್ಯಾಚಾರ ವಿರುದ್ದ ದಲಿತ ಚಳುವಳಿ ಹುಟ್ಟಿಕೊಂಡಿತು. ದಲಿತ ಚಳುವಳಿ ನಿಂತ ನೀರಾಗದೆ ಬೇರೆ ಬೇರೆ ದಿಕ್ಕು ಪಡೆದುಕೊಳ್ಳಬೇಕಾದರೆ ದಲಿತರು, ಪರಿಶಿಷ್ಟ ವರ್ಗದವರು ಮೊದಲು ಆರ್ಥಿಕವಾಗಿ ಬಲಶಾಲಿಗಳಾಗಬೇಕೆಂದು ಅರಿವು ಮೂಡಿಸಿದರು.

    90 ರ ದಶಕದಲ್ಲಿ ಜಾಗತೀಕರಣ, ಖಾಸಗೀಕರಣದ ಕೂಗು ಎದ್ದಾಗ ಅನೇಕ ಕಾರ್ಖಾನೆ, ಕೈಗಾರಿಕೆ, ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿದ್ದರಿಂದ ದಲಿತರಿಗೆ ಕೆಲಸ ಸಿಗುತ್ತಿಲ್ಲ. ದಲಿತರು ಉದ್ಯಮಿಗಳಾಗಲು ಸರ್ಕಾರ ಉತ್ತೇಜಿಸುತ್ತಿದೆ. ಉದ್ಯಮಿಗಳಾದವರಿಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ. ಸರ್ಕಾರಿ ನೌಕರರಿಗೆ ಕಾಯುವ ಬದಲು ಬ್ಯಾಂಕ್‍ಗಳಿಂದ ಸಾಲ ಪಡೆದುಕೊಂಡು ಉದ್ಯಮಿಗಳಾಗುವ ಮೂಲಕ ಸದೃಢರಾಗಬೇಕಿದೆ ಎಂದರು.
ದೇಶದಲ್ಲಿ ಶೇ.50 ರಷ್ಟು ಜನ ಕೃಷಿಕರಾಗಿದ್ದಾರೆ. ಸ್ಥಿತಿವಂತರು, ಉದ್ದಿಮೆದಾರರು, ಹಣವಂತರಾದರೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಸರ್ಕಾರದಿಂದ ಸಾಕಷ್ಟು ಮಾಹಿತಿ ಸವಲತ್ತುಗಳು ಸಿಗುತ್ತೆ. ಎಲ್ಲವನ್ನು ಬಳಸಿಕೊಂಡು ಯಶಸ್ವಿ ಉದ್ಯಮಿಗಳಾಗಿ ಎಂದು ಹಾರೈಸಿದರು.

     ಕೆ.ಎಸ್.ಎಸ್.ಐ.ಡಿ.ಸಿ ನಿವೃತ್ತ ಡಿ.ಜಿ.ಎಂ. ಕೆ.ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಕೆಂಚವೀರಪ್ಪ, ಚಿತ್ರದುರ್ಗ ಜಿಲ್ಲಾ ಎಸ್.ಸಿ.ಎಸ್.ಟಿ. ಎಂಟರ್ ಪ್ರೀನ್ಯೂರ್ಸ್ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್, ಎಸ್.ಟಿ.ಜಗತ್‍ಕುಮಾರ್, ಟಿ.ಎನ್.ಶಿವಲಿಂಗಪ್ಪ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap