ಮಂಗಳೂರು ಗೊಲಿಬಾರ್ : ಸಿಎಂ ಮತ್ತು ಗೃಹ ಸಚಿವರು ನೈತಿಕ ಹೊಣೆಹರಬೇಕು..!

ಬೆಂಗಳೂರು

    ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನಡೆಸಿದ ಗೋಲಿಬಾರ್‌ನಿಂದ ಇಬ್ಬರು ಮೃತಪಟ್ಟು ನೂರಾರು ಮಂದಿ ಗಾಯಗೊಂಡಿರುವ ಹೊಣೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೊರಬೇಕಾಗುತ್ತದೆ ಕಾಂಗ್ರೆಸ್‌ನ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

    ಮಂಗಳೂರಿನಲ್ಲಿ ನಡೆಸಿದ ಗೋಲಿಬಾರ್‌ನಿಂದ ಇಬ್ಬರು ಅಮಾಯಕರು ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿರುವುದಕ್ಕೆ ಇದರ ಸಂಪೂರ್ಣ ಹೊಣೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾರಣರಾಗಿದ್ದು ಅವರಿಬ್ಬರ ಮೇಲೆ ಮೊಕದ್ದಮೆ ದಾಖಲಿಸಬೇಕು ಎಂದು ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

    ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರು ಒಂದೆರೆಡು ಗಂಟೆಗಳ ಕಾಲ ತಮ್ಮ ನೋವನ್ನು ತೋಡಿಕೊಂಡು ಕಿರುಚಾಟ ಮಾಡುತ್ತಿದ್ದರು. ಅದನ್ನು ಸಹಿಸಿಕೊಳ್ಳುವ ಶಕ್ತಿ ರಾಜ್ಯಸರ್ಕಾರಕ್ಕಿರಲಿಲ್ಲವೇ? ಏಕಾಏಕಿ ಗುಂಡು ಹಾರಿಸಿ ಇಬ್ಬರು ಅಮಾಯಕರ ಸಾವಿಗೆ ಕಾರಣವಾಗಬೇಕಿತ್ತೆ? ಇದರ ಹೊಣೆ ಸರ್ಕಾರದಲ್ಲವೇ ಎಂದು ಪ್ರಶ್ನಿಸಿದರು.

   ಕಳೆದ ನಮ್ಮ ಸರ್ಕಾರದಲ್ಲಿ ಹಲವು ಪ್ರತಿಭಟನೆಗಳು ನಡೆದಿವೆ. ರಾಜ್ಯಸರ್ಕಾರಕ್ಕೆ ಮುಜುಗರವುಂಟು ಮಾಡುವ ಹೋರಾಟಗಳನ್ನು ನಡೆಸಲಾಗಿತ್ತು. ಆದರೆ, ಅವೆಲ್ಲವನ್ನು ನಾವು ಎದುರಿಸಿ ಅರಗಿಸಿಕೊಂಡಿದ್ದು, ಯಾರ ಮೇಲೂ ಗೋಲಿಬಾರ್ ಮಾಡಿರಲಿಲ್ಲ ಎಂದು ತಿಳಿಸಿದರು.

ನಿಷೇದಾಜ್ಞೆ ಏಕೆ?

     ರಾಜ್ಯದ ಯಾವುದೇ ಭಾಗದಲ್ಲಿ ತೀವ್ರತರಹದ ಪ್ರತಿಭಟನೆಗಳು ನಡೆದು ಕಾನೂನಿಗೆ ಧಕ್ಕೆ ಉಂಟು ಮಾಡುವ ಸನ್ನಿವೇಶವೂ ಸೃಷ್ಟಿಯಾಗಿರಲಿಲ್ಲ. ಆದರೂ,ರಾಜ್ಯಾದ್ಯಂತ 144ರ ಕಲಂ ಅನ್ವಯ ನಿಷೇಧಾಜ್ಞೆ ಏಕೆ ಜಾರಿಗೊಳಿಸಲಾಯಿತು ಎಂದು ಅವರು ಪ್ರಶ್ನಿಸಿದರು.

      ಪೌರತ್ವ ಕಾಯ್ದೆ ಬಗ್ಗೆ ಬಿಜೆಪಿ ನಾಯಕರೇ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೂ, ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಲಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸುವವರನ್ನು ಹತ್ತಿಕ್ಕಿ ದೇಶದೆಲ್ಲೆಡೆ ಭಯಭೀತ ವಾತಾವರಣ ಸೃಷ್ಟಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಪ್ರಧಾನಿ ಮೋದಿ, ಗೃಹ ಸಚಿವ ಶಾ ಮಾಡಿದ್ದಾರೆ ಎಂದು ಹರಿಹಾಯ್ದರು.

      ಪೌರತ್ವ ನಿಷೇಧ ಕಾಯ್ದೆ ಮೂಲಕ ಸಂವಿಧಾನ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಬುನಾದಿ ಹಾಕಿದೆ. ಬಹುಮತವಿದೆ ಎಂಬ ಕಾರಣಕ್ಕೆ ಮಾಡಬಾರದ ಕೆಲಸವನ್ನೆಲ್ಲ ಮಾಡಲು ಸಾಧ್ಯವಿಲ್ಲ, ದೇಶದ ಐಕ್ಯತೆ, ಸಾರ್ವಭೌಮತೆ ಜತೆಗೆ ಶಾಂತಿ ಕಾಪಾಡುವುದು ಮುಖ್ಯವಾಗಿದೆ ಎಂದು ಹೇಳಿದರು.

ವೈಷಮ್ಯ ಸೃಷ್ಟಿ

      ಮಂಗಳೂರಿನಲ್ಲಿ ಗಲಭೆಗೆ ಉಂಟಾದಾಗ ಶಾಸಕ ಖಾದರ್ ಕೊಪ್ಪಳದಲ್ಲಿದ್ದರು,ಯಾವುದೇ ರೀತಿಯ ಪ್ರಚೋದನಾಕಾರಿಯ ಹೇಳಿಕೆಗಳನ್ನು ನೀಡಿಲ್ಲ, ಹಾಗೇನಾದರೂ ನೀಡಿರುವುದು ಕಂಡು ಬಂದರೆ ಯಾವ ಕ್ರಮವನ್ನಾದರೂ ಬೇಕಾದರು ಜರುಗಿಸಿ ಎಂದು ಆಗ್ರಹಿಸಿದರು.

      ದೇಶದಲ್ಲಿ ಅಭದ್ರತೆ ಸೃಷ್ಟಿಸಿ, ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸುವ ಕೃತ್ಯಗಳನ್ನು ಮುಂದುವರೆಸಿದ್ದೇ ಆದರೆ, ಕಾಂಗ್ರೆಸ್ ಕೂಡ ರಸ್ತೆಗಿಳಿದು ಪ್ರತಿಭಟನೆ ನಡೆಸುವ ದಿನಗಳು ದೂರ ಉಳಿದಿಲ್ಲ ಎಂದು ಎಚ್ಚರಿಕೆ ನೀಡಿದರು.ಲಕ್ಷಾಂತರ ಮಂದಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ಕಾರ್ಖಾನೆಗಳು ಮುಚ್ಚಿವೆ, ಬಡವರು ಅನ್ನವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಅಂತಹವರ ನೆರವಿಗೆ ಧಾವಿಸುವುದನ್ನು ಬಿಟ್ಟು ಪೌರತ್ವ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಹರಿಹಾಯ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link