ಬಳ್ಳಾರಿ
ಗ್ರಾಹಕರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಅಂದಾಗ ಮಾತ್ರ ಮೋಸಹೋಗುವುದನ್ನು ತಪ್ಪಿಸಬಹುದು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಎ.ಜಿ.ಮಾಲ್ದಾರ್ ಹೇಳಿದರು.
ಜಿಲ್ಲಾಡಳಿತ,ಜಿಪಂ,ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ,ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ವಿಮ್ಸ್ ಕ್ಯಾಂಪಸ್ನಲ್ಲಿರುವ ಶಿಕ್ಷಕರ ಭವನದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏನಿದೆ?,ನಿಗದಿತ ಬೆಲೆಯಲ್ಲಿಯೇ ಮಾರಾಟವಾಗುತ್ತಿದೆಯಾ?, ಅವಧಿ ಮೀರಿದೆಯಾ? ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲದಿದ್ದಲ್ಲಿ ಮೋಸಹೋಗುವ ಸಾಧ್ಯತೆ ಹೆಚ್ಚು ಎಂಬುದನ್ನು ವಿವಿಧ ಉದಾರಣೆಗಳನ್ನು ನೀಡುವುದರ ಮೂಲಕ ಅವರು ವಿವರಿಸಿದರು.
ಸಂವಿಧಾನವು ಗ್ರಾಹಕರ ಕಾಯ್ದೆ 1986ರ ಬಗ್ಗೆ ಸವಿವರವಾಗಿ ತಿಳಿಸಿದ ಅಧ್ಯಕ್ಷ ಮಾಲ್ದಾರ್ ಅವರು ಗ್ರಾಹಕರು ಕ್ರಮಬದ್ಧವಾಗಿ ಹಕ್ಕುಗಳನ್ನು ಪಡೆಯುವಿಕೆ ಹಾಗೂ ಅನುಸರಿಸಬೇಕಾದ ನಿಯಮಗಳ ಕುರಿತು ವಿವರಿಸಿದರು.ಆಹಾರ,ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ರಾಮೇಶ್ವರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಹಕರ ದಿನಾಚರಣೆಯ ಧ್ಯೆಯೋದ್ಧೇಶಗಳನ್ನು ವಿವರಿಸಿದರು.
ವಿಮ್ಸ್ ಪ್ರಾಂಶುಪಾಲ ಡಾ.ಡಿ.ಕೃಷ್ಣಸ್ವಾಮಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಂಕಲಯ್ಯ ಅವರು ಮಾತನಾಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ,ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಅಮೃತಾ ಚವ್ಹಾಣ, ಆಹಾರ,ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರಾದ ಸುನೀತಾ ಮತ್ತು ಹಲೀಮಾ ಸೇರಿದಂತೆ ಇನ್ನೀತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








