ಹಾವೇರಿ
ತುರ್ತು ಸಂದರ್ಭಗಳಲ್ಲಿ ಮಕ್ಕಳ ಸಹಾಯವಾಣಿ ಮೂಲಕ ರಕ್ಷಣೆ ಪಡೆಯಲು ಅನುಕೂಲವಾಗುವಂತೆ ಲೋಗೋ ಸಹಾಯವಾಣಿ ಸಂಖ್ಯೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಚಾರಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಮಕ್ಕಳ ಸಹಾಯವಾಣಿ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚೈಲ್ಡ್‍ಲೈನ್-1098 ಸಂಖ್ಯೆಯನ್ನು ಜಿಲ್ಲೆಯ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆಗಳು, ಪ್ರವಾಸೋದ್ಯಮಸ್ಥಳ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿಯ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಸಂಪರ್ಕಿಸಲು ಪ್ರಚಾರ ಕೈಗೊಳ್ಳಲು ಸೂಚಿಸಿದರು.
ಜಿಲ್ಲಾಡಳಿತದ ವೆಬ್‍ಸೈಟ್‍ಗಳಲ್ಲೂ ಮಾಹಿತಿ ಪ್ರಕಟಿಸಬೇಕು. ಗೋಡೆಬರಹ, ಸ್ಟಿಕ್ಕರ್‍ಗಳನ್ನು ಪ್ರದರ್ಶಿಸುವಂತೆ ಸೂಚಿಸಿದರು.
ಬುದ್ದಿಮಾಂಧ್ಯ ಮಕ್ಕಳನ್ನು ರಕ್ಷಣೆಮಾಡಿದ ನಂತರ ಅವರಿಗೆ ಸೂಕ್ತ ವೈದ್ಯಕೀಯ ನೆರವು ಒದಗಿಸಬೇಕು. ರಾತ್ರಿವೇಳೆ ರಕ್ಷಣೆ ಮಾಡಿದ ಮಕ್ಕಳ ಸುರಕ್ಷತಾ ಸ್ಥಳಗಳಿಗೆ ರಕ್ಷಣೆಗೆ ಮಾಡಬೇಕು. ಕೇವಲ ಬಿಡುಗಡೆಯಾದ ಅನುದಾನದ ವೆಚ್ಚ ತೋರಿಸಲು ಸುಳ್ಳು ಮಾಹಿತಿ ನೀಡಿದರೆ ಗಂಭೀರವಾಗಿ ಪರಿಗಣಿಸಲಾಗುವುದು.ರಕ್ಷಣೆ ಮಾಡಿದ ಮಕ್ಕಳಿಗಾಗಿ ಖರ್ಚುಮಾಡುವ ಅನುದಾನ ಸರಿಯಾಗಿ ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಿದರು.
ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಕೆಲ ಸ್ವಯಂ ಸೇವಾ ಸಂಘಗಳು ಮಕ್ಕಳ ರಕ್ಷಣೆಗಾಗಿ ಕೆಲಸಮಾಡುತ್ತಿವೆ. ಎಲ್ಲಿಯೂ ಪುನರಾವರ್ತನೆಯಾಗಬಾರದು. ಅಧಿಕಾರ ಮಕ್ಕಳ ರಕ್ಷಣೆಗಾಗಿ ರೂಪಿಸಲಾದ ನಿಯಮಾವಳಿಗಳು ಸರಿಯಾಗಿ ಪಾಲನೆಮಾಡಬೇಕು.
ರಕ್ಷಣೆಕೋರಿ ಬರುವ ಕರೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಸೂಚಿಸಿದರು.ಮಕ್ಕಳ ಸಹಾಯವಾಣಿ ಕುರಿತಂತೆ ಮಾಹಿತಿ ಒದಗಿಸಿದ ಜಿಲ್ಲಾ ಚೈಲ್ಡ್‍ಲೈನ್ ನಿರ್ದೇಶಕ ಎಚ್.ಎಸ್.ಮಜೀದ್ ಅವರು ದಿನದ 24 ಗಂಟೆಗಳ ತುರ್ತು ಉಚಿತ ದೂರವಾಣಿ ಸೇವೆಯಾಗಿದೆ, ಸಂಕಷ್ಟದಲ್ಲಿರುವ ಮಕ್ಕಳ ಮನಸ್ಥಿತಿಯನ್ನು ಮನಗಂಡು, ಅವರಿಗಾಗಿ ಪಾಲನೆ, ಪೋಷಣೆ ಮತ್ತು ರಕ್ಷಣೆಯನ್ನು ಒದಗಿಸುವ ಪ್ರಮುಖ ಕರೆಯಾಗಿದೆ.
ಮಕ್ಕಳ ಸಹಾಯವಾಣಿ 1098 ಯೋಜನೆಯು ದೇಶದಾಂತ್ಯ 542 ಕೆಂದ್ರಗಳನ್ನು 30 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ 30 ಜಿಲ್ಲೆಗಳಿಲ್ಲಿ ಹಾಗೂ 06 ರೇಲ್ವೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಮಕ್ಕಳ ನಾಯ್ಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ-2015, ಇದರಲ್ಲಿ ಉಲ್ಲೇಖನದಂತೆ ಅಧ್ಯಾಯ-1, ಸೇಕ್ಷನ್ 2(25) ಪ್ರಕಾರ ಮಕ್ಕಳ ಸಹಾಯವಾಣಿಯು ದಿನದ 24 ಗಂಟೆಗಳ ಕಾಲ ಮಕ್ಕಳಿಗೆ ಆರೈಕೆ ರಕ್ಷಣೆ, ಪೋಷಣೆಯನ್ನು ಒದಿಗಿಸುವ ಉಚಿತ ಕರೆ ಸೇವೆಯಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಚೈತನ್ಯ ರೂರಲ್ ಡೆವೆಲೆಪ್‍ಮೆಂಟ್ ಸೊಸೈಟಿ ಅವರ ಸಹಯೋಗದೊಂದಿಗೆ ಜುಲೈ 10, 2015 ರಿಂದ ಕಾರ್ಯಾರಂಭಮಾಡಿದೆ ಹಾಗೂ ಸಹಾಯಕ ಸಂಸ್ಥೆಯಾಗಿ ರೋಶನಿ ಸಮಾಜ ಸೇವಾ ಸಂಸ್ಥೆ ಹಾನಗಲ್‍ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಗರ್ಭಾವಸ್ಥೆಯಿಂದ ಇಂದ 18 ವರ್ಷದೊಳಗಿನ ಮಕ್ಕಳು, ಪರಿತ್ಯಕ್ತ ಮಗು ಅಥವಾ ನಿರ್ಗತಿಕ ಮಗು, ಕಾಣೆಯಾದ ಮಕ್ಕಳು, ಬಾಲ ಕಾರ್ಮಿಕ ಮಕ್ಕಳು ಮತ್ತು ಬಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು, ಬಾಲ್ಯ ವಿವಾಹಕ್ಕೆ ಒಳಗಾಗುತ್ತಿರುವ ಅಥವಾ ಒಳಪಟ್ಟಿರುವ ಮಕ್ಕಳು, ಮಾದಕ ವ್ಯಸನಕ್ಕೆ ಗುರಿಯಾದ ಮಕ್ಕಳು, ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆಗಾಗಿ ದುರುಪಯೋಗಿಸಲ್ಪಡುವ ಮಕ್ಕಳು, ಹಿಂಸೆ ಮತ್ತು ಆತ್ಯಾಚಾರಕ್ಕೆ ಒಳಗಾದ ಮಕ್ಕಳು, ಮಗುವಿಗೆ ಜೀವ ಬೆದರಿಕೆ, ಆಪತ್ತು ಅಥವಾ ನಿರ್ಲಕ್ಷಿಸಲ್ಪಡುವ ಭಯವಿದ್ದಲ್ಲಿ, ದೈಹಿಕ ಹಾಗು ಮಾನಸಿಕ ಅನಾರೊಗ್ಯದಿಂದ ಬಳಲುತ್ತಿರುವ ಹಾಗೂ ನೆರವು ನೀಡಲು ಯಾರು ಇಲ್ಲದಿದ್ದಲ್ಲಿ, ಹೆಚ್‍ಐವಿ ಸೋಂಕಿತ/ಏಡ್ಸ್ ಬಾದಿತ ಮಕ್ಕಳು, ಪ್ರಾಕೃತಿಕ ವಿಕೋಪಗಳಲ್ಲಿ ಸಿಕ್ಕಿರುವ ಮಕ್ಕಳು, ಲೈಂಗಿಕತೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಾಗಿ ಬಳಸುವಂತ ಮಕ್ಕಳು,ನಿಂದನಗೆ ಒಳಪಟ್ಟು ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆಯನ್ನು ಮಾಡುತ್ತದೆ.
ಇಂತಹ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗೆ ಸಾರ್ವಜನಿಕರು ಅಥವಾ ಮಕ್ಕಳು ಮಕ್ಕಳ ಸಹಾಯವಾಣಿ 1098ಕ್ಕೆ ಕರೆಮಾಡಿ ನೆರವು ಪಡೆಯಬಹುದು. ದಿನದ 24 ಘಂಟೆಗಳ ಉಚಿತ ಕರೆಗಳನ್ನು ಸ್ವೀಕರಿಸುವುದು,ಪ್ರತಿ ಕರೆಯನ್ನು ಗಂಭೀರವಾಗಿ ಪರಿಗಣಿಸಿ ಅನುಸರಣಾ ಸೇವೆ ಒದಗಿಸುವುದು ,ಕರೆ ಸ್ವೀಕರಿಸಿ ಮಗುವಿರುವ ಸ್ಥಳಕ್ಕೆ ತಲುಪುವುದು ಹಾಗೂ ಮಗುವನ್ನು ಸುರಕ್ಷತಾ ಸ್ಥಳಕ್ಕೆ ವರ್ಗಾಯಿಸುವುದು, ಪ್ರತಿ ಮಗುವಿಗೂ ಆಪ್ತ ಸಮಾಲೋಚನೆ ಮತ್ತು ಅವಶ್ಯಕತೆಗೆ ತಕ್ಕಂತೆ ಪುನರ್ವಸತಿ/ಅನುಸರಣೆ ಮಾಡುವುದು ಎಂದು ತಿಳಿಸಿದರು.
ಜಿಲ್ಲೆಯ ಮಕ್ಕಳ ಸಹಾಯವಾಣಿಯಿಂದ ಕಳೆದ ಐದು ವರ್ಷದಲ್ಲಿ 2244 ಕರೆಗಳನ್ನು ಸ್ವೀಕರಿಸಲಾಗಿದೆ. ಸಹಾಯವಾಣಿಗೆ ಬಂದ ಕರೆಗಳ ಆಧರಿಸಿ 262 ಬಾಲ್ಯವಿವಾಹಗಳನ್ನು ಜಿಲ್ಲೆಯಲ್ಲಿ ತಡೆಯಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯೋರ್ವಳಿಗೆ ನ್ಯಾಯ ಒದಗಿಸಲಾಗಿದೆ. ಶಾಲೆ ತೊರೆದ 261 ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸಲಾಗಿದೆ. 320 ಮಕ್ಕಳಿಗೆ ವೈದ್ಯಕೀಯ ನೆರವು ಕೊಡಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶ್ರೀವಿದ್ಯಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅಧಿಕಾರಿ ಪದ್ಮಾವತಿ ಜಿ, ವಿವಿಧ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ