ಬೆಂಗಳೂರು
ಆಸ್ತಿ ವ್ಯಾಜ್ಯದ ಹಿನ್ನಲೆಯಲ್ಲಿ ಆಕ್ರೋಶಗೊಂಡು ಸುಪಾರಿ ಕೊಟ್ಟ ಅತ್ತಿಗೆಯನ್ನೇ ಕೊಲೆ ಮಾಡಿಸಿದ ಕಿರಾತಕ ಮೈದುನ ಹಾಗೂ ಕೊಲೆಗಾರ ಸೇರಿ ಇಬ್ಬರನ್ನು ಬಂಧಿಸುವಲ್ಲಿ ನಗರದ ಹೊರವಲಯದ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.ಅತ್ತಿಗೆಯ ಕೊಲೆಗೆ 2 ಲಕ್ಷ ಸುಪಾರಿ ಕೊಟ್ಟಿದ್ದ ಕಗ್ಗಲಹಳ್ಳಿಯ ನಾಗೇಶ್ ಹಾಗೂ ಸುಪಾರಿ ಪಡೆದು ಕೊಲೆ ಮಾಡಿದ್ದ ಲಕ್ಷ್ಮೀಶನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಕಳೆದ ಡಿ.22 ರಂದು ಕಗ್ಗಲಹಳ್ಳಿಯ ರತ್ಮಮ್ಮ ಅವರ ಬಾಯಿಗೆ ಬಟ್ಟೆ ತುರುಕಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು ಕೃತ್ಯವು ಎರಡು ದಿನಗಳ ನಂತರ ತಡವಾಗಿ ಬೆಳಕಿಗೆ ಬಂದಿತ್ತು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಚನ್ನರಾಯಪಟ್ಟಣ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ
ಪತಿ ಮೃತಪಟ್ಟ ನಂತರ ಒಂಟಿಯಾಗಿದ್ದ ರತ್ಮಮ್ಮ ಹಾಗೂ ಆರೋಪಿ ಮೈದುನ ನಾಗೇಶ್ ನಡುವೆ ಆಗಾಗ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಜಗಳ ನಡೆದು ವ್ಯಾಜ್ಯವು ಕೋರ್ಟ್ ಮೆಟ್ಟಿಲೇರಿದ್ದರಿಂದ ಅತ್ತಿಗೆ ಮೇಲೆ ದ್ವೇಷ ಸಾಧಿಸುತ್ತಿದ್ದ ಮೈದುನ ನಾಗೇಶ್,ತನ್ನದೇ ಗ್ರಾಮದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಶನಿಗೆ 2 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು 5 ಸಾವಿರ ಹಣವನ್ನು ಮುಂಗಡವಾಗಿ ನೀಡಿದ್ದನು.
ಲಕ್ಷ್ಮೀಶ ಆಗಾಗ ಪರಿಚಯಸ್ಥರಾಗಿದ್ದ ಮೃತಳ ಮನೆಗೆ ಹೋಗಿ ಬರುತ್ತಿದ್ದು ಅದೇ ರೀತಿ ಮಾತನಾಡಿಸುವ ನೆಪದಲ್ಲಿ ಕಳೆದ ಡಿ.22ರಂದು ಮನೆಗೆ ಹೋಗಿ ಆಕೆಯ ಮೇಲೆ ಮೊದಲು ಮಚ್ಚಿನಿಂದ ಹಲ್ಲೆ ಮಾಡಿ ಬಾಯಿಗೆ ಬಟ್ಟೆ ತುರುಕಿ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಅಲ್ಲಿಂದ ಪರಾರಿಯಾಗಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಯಾರಿಗೂ ಅನುಮಾನ ಬಾರದ ಹಾಗೆ ಊರಲ್ಲೇ ಓಡಾಡಿಕೊಂಡು ಇದ್ದನು.
ಚಿನ್ನ ವಶ
ಪೊಲೀಸರು ತನಿಖೆ ಮಾಡುತ್ತಿದ್ದ ವೇಳೆ ಅನುಮಾನಗೊಂಡು ಆರೋಪಿ ಮೈದುನ ನಾಗೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಬಯಲಾಗಿದ್ದು ಆತನನ್ನು ಹಾಗೂ ಸುಪಾರಿ ಪಡೆದಿದ್ದ ಲಕ್ಷ್ಮೀಶನನ್ನ ಬಂಧಿಸಿದ್ದಾರೆ. ಕೊಲೆಗಡುಕ ಲಕ್ಷ್ಮೀಶ್ ಮೃತಳ ಕತ್ತಿನಲ್ಲಿದ್ದ ಚಿನ್ನದ ಸರ ಕಳವು ಅದನ್ನ ಚಿಕ್ಕಬಳ್ಳಾಪುರದ ಮುತ್ತೂಟ್ ಫೈನಾನ್ಸ್‌ನಲ್ಲಿ ಆಡವಿಟ್ಟಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








