ತುಮಕೂರು
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ತುಮಕೂರು ಮಹಾನಗರ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷ ಕಸರತ್ತು ನಡೆಸಿರುವ ಬೆನ್ನಲ್ಲೇ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳ ಮಹತ್ವದ ಸಭೆಯೊಂದು ಜ.26 ರಂದು ನಡೆಯಲಿದೆ.
ಈ ಸಭೆಯಲ್ಲಿ ಗುಬ್ಬಿಯ ಶಾಸಕ ಹಾಗೂ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ (ಜೆಡಿಎಸ್), ತುಮಕೂರಿನ ಮಾಜಿ ಶಾಸಕ ಎಸ್.ರಫೀಕ್ ಅಹಮದ್ (ಕಾಂಗ್ರೆಸ್), ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ (ಜೆಡಿಎಸ್), ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು (ಜೆಡಿಎಸ್) ಹಾಗೂ ಜೆಡಿಎಸ್ ಮುಖಂಡ ಗೋವಿಂದರಾಜು ಅವರುಗಳು ಪಾಲ್ಗೊಂಡು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಫರೀದಾ ಬೇಗಂ ಬಗ್ಗೆ ಕಾಂಗ್ರೆಸ್‍ನಲ್ಲಿ ಒಮ್ಮತ
ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‍ನ 10 ಸದಸ್ಯರುಗಳಿದ್ದು, ಇವರೆಲ್ಲ ಮೇಯರ್ ಅಭ್ಯರ್ಥಿ ವಿಚಾರದಲ್ಲಿ ಮೂರು ಬಣಗಳಾಗಿ ವಿಭಜಿತರಾಗಿದ್ದರೆಂಬುದು ಬಹಿರಂಗವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ತುಮಕೂರು ನಗರದ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಜ.24 ರಂದು ಸಂಜೆ ಪಾಲಿಕೆಯ ಎಲ್ಲ 10 ಕಾಂಗ್ರೆಸ್ ಸದಸ್ಯರೊಡನೆ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಕಾಂಗ್ರೆಸ್ ಪರವಾಗಿರುವ ಓರ್ವ ಪಕ್ಷೇತರ ಅಭ್ಯರ್ಥಿಯೂ ಆಗಮಿಸಿದ್ದರೆಂಬುದು ಗಮನಾರ್ಹ.
ಇವರೆಲ್ಲರ ಮನವೊಲಿಸಿದ ಡಾ.ರಫೀಕ್ ಅಹಮದ್ ಅವರು ಪ್ರಸ್ತುತ ಸನ್ನಿವೇಶದಲ್ಲಿ 13 ನೇ ವಾರ್ಡ್ (ಕುರಿಪಾಳ್ಯ) ಸದಸ್ಯೆ ಫರೀದಾ ಬೇಗಂ ಅವರನ್ನೇ ಮೇಯರ್ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಿರುವುದಾಗಿ ಪ್ರಕಟಿಸಿದಾಗ ಎಲ್ಲರೂ ಅದಕ್ಕೆ ಸಮ್ಮತಿಸಿದ್ದಾರೆ.
ಕಾಂಗ್ರೆಸ್‍ನಿಂದ ವಿಪ್ ಜಾರಿ
ಇದಾದ ಬಳಿಕ ಡಾ.ರಫೀಕ್ ಅಹಮದ್ ಅವರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಪಾಲಿಕೆಯ ಎಲ್ಲ ಕಾಂಗ್ರೆಸ್ ಸದಸ್ಯರುಗಳ ಸಭೆಯೊಂದನ್ನು ನಡೆಸಿ, ಅಲ್ಲಿಯೂ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ ಎಲ್ಲ ಕಾಂಗ್ರೆಸ್ ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿದೆ.
ಇದರೊಂದಿಗೆ ಕಾಂಗ್ರೆಸ್ ವಲಯದಲ್ಲಿ ತಲೆಯೆತ್ತಿದ್ದ ಬಣ ರಾಜಕೀಯ ಕೊನೆಗೊಂಡಿದ್ದು, ಪಕ್ಷವು ಫರೀದಾ ಬೇಗಂ ಅವರನ್ನು ಮೇಯರ್ ಸ್ಥಾನದ ಅಭ್ಯರ್ಥಿಯೆಂದು ಮನವರಿಕೆ ಮಾಡಿಕೊಟ್ಟಿದ್ದು, ಆ ಬಗೆಗಿನ ಬಹಿರಂಗ ಪ್ರಕಟಣೆ ಮಾತ್ರ ಬಾಕಿ ಇದೆ.
ಶ್ರೀನಿವಾಸ್-ರಫೀಕ್ ಚರ್ಚೆ
ಜ.25 ರಂದು ಕಾಂಗ್ರೆಸ್ ಮಾಜಿ ಶಾಸಕ ಡಾ.ಎಸ್. ರಫೀಕ್ ಅಹಮದ್ ಅವರು ಗುಬ್ಬಿ ಶಾಸಕ ಜೆಡಿಎಸ್‍ನ ಎಸ್.ಆರ್.ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಈವರೆಗಿನ ಬೆಳವಣಿಗೆಗಳನ್ನು ಚರ್ಚಿಸಿದ್ದಾರೆ. ಇದರ ಮುಂದುವರೆದ ಭಾಗವಾಗಿ ಜ.26 ರಂದು ಪ್ರಮುಖರ ಸಭೆ ಏರ್ಪಟ್ಟಿದೆ.
ಜೆಡಿಎಸ್‍ನಲ್ಲಿ ಭಿನ್ನರಾಗ
ಇವೆಲ್ಲದರ ನಡುವೆ ಜೆಡಿಎಸ್‍ನ 10 ಸದಸ್ಯರ ಪೈಕಿ ಎರಡು ಗುಂಪುಗಳಾಗಿದ್ದು, ಒಂದು ಗುಂಪು ಭಿನ್ನರಾಗ ಶುರುಮಾಡಿದೆ. ಕಳೆದ ಬಾರಿ ಲಲಿತಾ ರವೀಶ್ ಅವರು ಮೇಯರ್ ಆಗುವ ಸಂದರ್ಭವನ್ನು ಈ ಭಿನ್ನರಾಗದ ಗುಂಪು ಪುನರುಚ್ಚರಿಸುತ್ತಿದೆ. ಆಗ ಸಹ ಜೆಡಿಎಸ್‍ನಲ್ಲಿ ಎಸ್.ಆರ್.ಶ್ರೀನಿವಾಸ್ ಪರವಾಗಿ ಒಂದು ಗುಂಪು ಹಾಗೂ ಡಿ.ಸಿ.ಗೌರಿಶಂಕರ್ ಪರವಾಗಿ ಇನ್ನೊಂದು ಗುಂಪು ಉಂಟಾಗಿತ್ತು. ಅಂದು ಎರಡೂ ಗುಂಪುಗಳು ಪ್ರತ್ಯೇಕವಾಗಿ ನಗರದ ಬಿಜೆಪಿ ಶಾಸಕರನ್ನು ಸಂಪರ್ಕಿಸುವಂತೆ ಮುಂಖಡರುಗಳೇ ಸೂಚಿಸಿದ್ದರು.
ಅದರಂತೆ ಶಾಸಕರನ್ನು ಸಂಪರ್ಕಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಆದ ಬೆಳವಣಿಗೆಯಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಗಿತ್ತು. ಆ ಪ್ರಸಂಗವನ್ನು ಮೆಲುಕು ಹಾಕುತ್ತಿರುವ ಜೆಡಿಎಸ್‍ನ ಒಂದು ಗುಂಪು, ಈಗಲೂ ನಾವೇಕೆ ಬಿಜೆಪಿ ಶಾಸಕರ ಜೊತೆ ಮಾತನಾಡಬಾರ ದೆಂದು ಪ್ರಶ್ನಿಸತೊಡಗಿದ್ದು, ಜೆಡಿಎಸ್‍ನಲ್ಲಿ ಇದೊಂದು ಹೊಸ ಸಮಸ್ಯೆಯಾಗಿ ಕಾಡತೊಡಗಿದೆ. ಈ ಭಿನ್ನರಾಗ ಶಮನವಾದೀತೇ? ಅಥವಾ ಶಮನ ಆಗುವುದಿಲ್ಲವೇ? ಎಂಬುದೀಗ ಯಕ್ಷಪ್ರಶ್ನೆಯಾಗಿದ್ದು, ಜ.26 ರ ಪ್ರಮುಖರ ಸಭೆಯಲ್ಲಿ ಚರ್ಚೆಗೆ ಬರಲಿದೆ.
ಪ್ರವಾಸಕ್ಕೆ ಬಸ್ ಸಿದ್ಧ
ಹೀಗೆ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದರೂ, ಅತ್ತ ಎಲ್ಲ 10 ಕಾಂಗ್ರೆಸ್ ಮತ್ತು ಎಲ್ಲ 10 ಜೆ.ಡಿ.ಎಸ್. ಮತ್ತು ಇಬ್ಬರು ಪಕ್ಷೇತರರು ಸೇರಿ ಒಟ್ಟು 22 ಜನ ಪಾಲಿಕೆ ಸದಸ್ಯರನ್ನು ಜ.26 ರಿಂದಲೇ ಪ್ರವಾಸಕ್ಕೆ ಕರೆದೊಯ್ಯಲು ಬಸ್ ವ್ಯವಸ್ಥೆ ಸೇರಿದಂತೆ ಸಕಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ