ಹೊಸದಿಲ್ಲಿ:
ದೇಶದಲ್ಲಿರುವ ಎಲ್ಲಾ ಮಸೀದಿಗಳನ್ನು ಮುಚ್ಚಲು ಫತ್ವಾ ನೀಡುವಂತೆ ದಾರುಲ್ ಉಲುಂ ದೇವ್ಬಂದ್ ಸಂಘಟನೆಗೆ ಚಿಂತಕರು ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ತಾಹೀರ್ ಮೆಹಮೂದ್ ಸಾಹೇಬ್ ಆಗ್ರಹಿಸಿದ್ದಾರೆ.
ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ 21 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದೆ. ಜನರು ರಸ್ತೆಗಿಳಿಯದಂತೆಯೂ ಸರ್ಕಾರ ಸೂಚನೆ ನೀಡಿದೆ. ಹೀಗಿದ್ದರೂ ಕೆಲವು ಮಸೀದಿಗಳಲ್ಲಿ ಜನರು ಸಾಮೂಹಿಕ ನಮಾಝ್ನಲ್ಲಿ ಭಾಗಿಯಾಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ದಾರುಲ್ ಉಲುಂ ಸಂಘಟನೆ ದೇಶದ ಎಲ್ಲ ಮಸೀದಿಗಳನ್ನು ಮುಚ್ಚುವಂತೆ ಫತ್ವಾ ನೀಡಬೇಕು ಎಂದು ತಾಹೀರ್ ಮೆಹಮೂದ್ ಒತ್ತಾಯಿಸಿದ್ದಾರೆ. ಕೊರೊನಾ ಕಾರಣದಿಂದಾಗಿ ಮುಸ್ಲಿಂ ದೇಶಗಳಲ್ಲೂ ಮಸೀದಿಗಳನ್ನು ಮುಚ್ಚಲಾಗಿದೆ. ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾಗೂ ಯಾರಿಗೂ ಪ್ರವೇಶ ಮಾಡಲು ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಭಾರತದಲ್ಲಿರುವ ಎಲ್ಲಾ ಮಸೀದಿಗಳನ್ನು ಕೊರೊನಾ ನಿಯಂತ್ರಣಕ್ಕೆ ಬರುವ ತನಕ ಸಂಪೂರ್ಣ ಮುಚ್ಚುವಂತೆ ಫತ್ವಾ ನೀಡಬೇಕು ಎಂದಿದ್ದಾರೆ.
ತಾಹೀರ್ ಮೆಹಮೂದ್ ಅವರ ಅಭಿಪ್ರಾಯವನ್ನು ಬೆಂಬಲಿಸಿ ಖ್ಯಾತ ಕವಿ ಹಾಗೂ ಗೀತೆ ರಚನೆಕಾರ ಜಾವೇದ್ ಅಖ್ತರ್ ಟ್ವೀಟ್ ಮಾಡಿದ್ದಾರೆ. ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರಾರ್ಥನಾ ಮಂದಿರಗಳನ್ನು ಮುಚ್ಚುವಂತೆ ಅವರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








