ಬಳ್ಳಾರಿ:
ಅಸಂಘಟಿತ ವಲಯ ಎಂದು ಗುರುತಿಸಿರುವ ಛಾಯಾಗ್ರಾಹಕರಿಗೂ ಅಸಂಘಟಿತ ಕಾರ್ಮಿಕರಿಗೆ ಲಭಿಸುವ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ವೃತ್ತಿನಿರತ ಛಾಯಾಗ್ರಾಹಕರು, ವೀಡಿಯೋ ಗ್ರಾಹಕರು, ಸ್ಟುಡಿಯೋ ಮಾಲೀಕರ ಸಂಘವು ಜಿಲ್ಲಾಡಳಿತಕ್ಕೆ ಶನಿವಾರ ಮನವಿ ಸಲ್ಲಿಸಿದೆ.
ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸುಮಾರು 4300 ಜನ ಛಾಯಾಗ್ರಾಹಕರು ಇದ್ದಾರೆ. ಇದೇ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗುತ್ತಿದ್ದಾರೆ. ಆದರೆ, ಕೋವಿಡ್ 19 ವೈರಸ್‍ನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಕಳೆದ ಮಾ.24 ರಿಂದ ದೇಶಾದ್ಯಂತ ಲಾಕ್‍ಡೌನ್ ವಿಧಿಸಿದೆ. ಇದರಿಂದ ಮದುವೆ ಸಮಾರಂಭಗಳು ನಡೆಯಬೇಕಿದ್ದ ಇಂಥಹ ಸಂದರ್ಭದಲ್ಲಿ ಲಾಕ್‍ಡೌನ್‍ನಿಂದಾಗಿ ಮದುವೆ, ಶುಭಕಾರ್ಯಗಳೆಲ್ಲವೂ ಸ್ಥಗಿತಗೊಂಡಿದ್ದು, ಛಾಯಾಗ್ರಾಹಕರಿಗೆ ಫೋಟೊ, ವೀಡಿಯೋವನ್ನು ತೆಗೆಯಲು ಅವಕಾಶವೇ ಇಲ್ಲದಂತಾಗಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿದೆ. ಹಾಗಾಗಿ ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ನೀಡುವ ಸರ್ಕಾರಿ ಸೌಲಭ್ಯಗಳನ್ನು ಛಾಯಾ ಗ್ರಾಹಕರಿಗೂ ನೀಡಬೇಕು ಎಂದು ಸಂಘದ ಅಧ್ಯಕ್ಷ ಬಿ.ಆರ್.ಯಾದವ್ ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ವೇಳೆ ಸಂಘದ ಸದಸ್ಯರು, ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








