ಹಗರಿಬೊಮ್ಮನಹಳ್ಳಿ:
ಪ್ರತಿಯೊಬ್ಬ ಮನುಷ್ಯ ಆರೋಗ್ಯವಂತನಾಗಿರಬೇಕು, ಸಮಾಜದ ಬಡತನ ರೇಖೆಗಿಂತ ಕೆಳಗಿರುವವರಿಗೆ ಸಕಾಲಕ್ಕೆ ವಿಶೇಷವಾದ ವೈಧ್ಯರು ದೊರೆಯದೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತವೆ. ಇದನ್ನು ತಪ್ಪಿಸಲು ಹಾಗಾಗಿ ಪ್ರತಿ ತಾಲೂಕಿನಲ್ಲಿಯೂ ತಿಂಗಳಿಗೊಮ್ಮೆ ಆರೋಗ್ಯ ಮೇಳಗಳಗಳನ್ನು ಏರ್ಪಡಿಸಬೇಕಾಗಿರುವುದು ಅವಶ್ಯವಾಗಿದೆ ಎಂದು ಬಳ್ಳಾರಿ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದರು.
ಪಟ್ಟಣದ ಜಿವಿ.ಪಿ.ಪಿ.ಪ್ರಥಮ ದರ್ಜೆ ಸರ್ಕಾರಿ ಕಾಲೇಜು ಆವರಣದಲ್ಲಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮಂಗಳವಾರ ಏರ್ಪಡಿಸಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉಚಿತ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಇರಲಿ ಎಂಬ ಉದ್ದೇಶದಿಂದ ನಮ್ಮ ಅನುದಾನದಲ್ಲಿ 4ಕೋಟಿ ರೂ ಅನುದಾನವನ್ನು ಆರೋಗ್ಯಕ್ಕಾಗಿ ಬಿಡುಗಡೆ ಮಾಡಿದ್ದೇನೆ.
ಸಂಬಂಧಪಟ್ಟ ಜಿಲ್ಲಾ ವೈದ್ಯಾಧಿಕಾರಿಗಳು ಈ ಅನುದಾನವನ್ನು ಸದುಪಯೋಗಪಡಿಸಿಕೊಳ್ಳುವುದರ ಮೂಲಕ ಪ್ರತಿ ತಾಲೂಕಿನಲ್ಲಿ ತಿಂಗಳಿಗೊಮ್ಮೆ ಆರೋಗ್ಯ ಶಿಬಿರಗಳನ್ನು ನಡೆಸಬೇಕು ಎಂದು ತಿಳಿಸಿದರು. ಮೂಲಭೂತ ಸೌಕರ್ಯಗಳಲ್ಲಿ ಅತಿ ಮುಖ್ಯವಾದದ್ದು ಆರೋಗ್ಯ. ಸಾಮಾನ್ಯ ಪ್ರಜೆಗೆ ಇದನ್ನು ಕೊಡಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕು ಎಂದು ಸಲಯೆ ನೀಡಿದರು.
ಜಿಲ್ಲೆಯ ಜನತೆಗಾಗಿ ಲೋಕಸಭಾ ಸದಸ್ಯನಾಗಿ ನನ್ನ ಅನುಧಾನದಲ್ಲಿ ಶುದ್ಧ ಕುಡಿಯುವ ನೀರಿಗಾಗಿ 2.5ಕೋಟಿ ರೂ ಹಣವನ್ನು ಬಿಡುಗಡೆ ಮಾಡಿದ್ದೇನೆ. ಹಂಪಿಯಲ್ಲಿ ಮೂಲ ಸೌಕರ್ಯಗಳಿಗಾಗಿ 2ಕೋಟಿ ರೂ ಹಣ ನೀಡಲಾಗಿದೆ. ಹಂಪಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ 3ಕೋಟಿ ರೂ ಹಣ ಬಿಡುಗಡೆ ಮಾಡಿದ್ದೇನೆ ಇದೆಲ್ಲವನ್ನು ಆಯಾ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಂಡು ಕೆಲಸ ಮಾಡಬೇಕು ಎಂದು ಆದೇಶಿಸಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಬಡ ರೋಗಿಗಳ ರಕ್ತ ಹೀರುವ ಕೇಂದ್ರಗಳಾಗಿಬಿಟ್ಟಿವೆ. ನಕಲಿ ವೈದ್ಯರ ಹಾವಳಿಯಿಂದಾಗಿ ನುರಿತ ತಜ್ಞ ವೈದ್ಯರಿಗೆ ಬೆಲೆ ಇಲ್ಲದಂತಾಗಿದೆ. ನಕಲಿ ವೈದ್ಯರು ಸಾರ್ವಜನಿಕರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಇದು ನಿಯಂತ್ರಣಗೊಳ್ಳಬೇಕು ಎಂದರು.ಈ ಮೇಳದಲ್ಲಿ ಆರು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ತಪಾಸಣೆಗೆ ಒಳಪಟ್ಟರು. ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಣ್ಣಿನ ಪೊರೆ ತಪಾಸಣೆ ನಡೆಸಿ ನೇತ್ರ ಚಿಕಿತ್ಸೆ ನಡೆಸಲಾಯಿತು.
ತಾ.ಪಂ.ಅಧ್ಯಕ್ಷೆ ಕೆ.ನಾಗಮ್ಮ, ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಭಾಗ್ಯ ತಿರುಮಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಮುಖಂಡರಾದ ಹೆಗ್ಡಾಳ್ ರಾಮಣ್ಣ, ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ದೇವೇಂದ್ರ, ಕನ್ನಿಹಳ್ಳಿ ಚಂದ್ರಶೇಖರ, ಬಳ್ಳಾರಿ ಆರ್.ಸಿ.ಎಚ್ ಅಧಿಕಾರಿ ಡಾ.ರವೀಂದ್ರನಾಥ, ಬಳ್ಳಾರಿ ವಿಮ್ಸ್ ನಿರ್ದೇಶಕ ಡಾ.ಡಿ.ಕೃಷ್ಣಸ್ವಾಮಿ, ಅಧೀಕ್ಷಕ ಡಾ.ಚನ್ನಣ್ಣ, ನೋಡಲ್ ಅಧಿಕಾರಿ ಡಾ.ಬಿ.ಎನ್.ರಜಿನಿ, ತಾಲೂಕು ವೈಧ್ಯಾಧಿಕಾರಿ ಡಾ.ಕೆ.ಸುಲೋಚನ, ವೈದ್ಯಾ ಡಾ.ಶಂಕರನಾಯ್ಕ, ಇ.ಓ ಬಿ.ಮಲ್ಲಾನಾಯ್ಕ, ತಹಸೀಲ್ದಾರ್ ಕೆ.ವಿಜಯಕುಮಾರ, ಬಿಇಓ ಶೇಖರಪ್ಪ ಎಂ.ಹೊರಪೇಟೆ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಾನಾಯ್ಕ, ಪಿಎಸ್‍ಐ ಮೌನೇಶ್ ರಾಥೋಡ್, ತಂಬ್ರಹಳ್ಳಿ ಪಿಎಐ ಸರಳ ಹಾಗೂ ಆಯುಷ್ ಅಧಿಕಾರಿಗಳು ಉಪಸ್ಥಿತರಿದ್ದರು.ಸಂಗೀತ ಶಿಕ್ಷಕಿ ಶಾರದ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಬಿ.ಕೊಟ್ರಪ್ಪ, ಡಾ.ಎಮ್.ಎಚ್.ರವೀಂದ್ರನಾಥ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
