ನವದೆಹಲಿ:
ಲಾಕ್ಡೌನ್ ಎರಡನೇ ಅವಧಿ ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆಯಾಗಿದ್ದರೂ ಸಹಾ ಏಪ್ರಿಲ್ 20ರ ಬಳಿಕ ಅತ್ಯಾವಶ್ಯವಲ್ಲದ ವಸ್ತುಗಳನ್ನು ಕೂಡ ಆನ್ಲೈನ್ ಮೂಲಕ ಆರ್ಡರ್ ಮಾಡಬಹುದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಮೊದಲ ಹಂತದ ಲಾಕ್ಡೌನ್ ಸಂದರ್ಭದಲ್ಲಿ ಆನ್ಲೈನ್ ಇ- ವಾಣಿಜ್ಯ ಸಂಸ್ಥೆಗಳಿಗೆ ಜೀವನಾವಶ್ಯಕ ವಸ್ತುಗಳನ್ನಷ್ಟೇ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಆದರೆ, ಏಪ್ರಿಲ್ 20ರ ನಂತರ ಎಲ್ಲ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ ಎಂದು ಮಾಹಿತಿ ನೀಡಿದೆ. ಈವರೆಗೆ ಅಗತ್ಯ ವಸ್ತುಗಳೆಂದು ವರ್ಗೀಕರಣ ಮಾಡಲಾಗದ ವಸ್ತುಗಳೆಲ್ಲವೂ ಈ ವಿಭಾಗದಲ್ಲಿ ಬರುತ್ತವೆ ಎಂದು ಸ್ಪಷ್ಟನೆ ನೀಡಲಾಗಿದೆ. ಆದ್ದರಿಂದ ಅಮೆಜಾನ್, ಫ್ಲಿಪ್ ಕಾರ್ಟ್ ನಂಥ ಆನ್ ಲೈನ್ ಸೇವಾ ಸಂಸ್ಥೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ.
ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ವಾಹನ ಹಾಗೂ ತಮಗೆ ಪಾಸ್ ಗಳನ್ನು ಪಡೆಯುವುದು ಅಗತ್ಯವಾಗಿದೆ. ಎಂಟು ಡಿಸಿಪಿಗಳಿಂದ ಈ ಪಾಸ್ ಪಡೆಯಬಹುದಾಗಿದೆ. ಆದೇಶದಲ್ಲಿ ಸೂಚಿಸಿದಂತೆ, ದಿನಸಿ, ಡೆಲವರಿ ಬಾಯ್ಸ್, ಟೆಲಿಕಾಂ, ವೈದ್ಯಕೀಯ, ಡೇಟಾ ಸೆಂಟರ್, ಬ್ಯಾಂಕ್, ವಿಮೆ, ಕೆಲವು ಸೆಕ್ಯುರಿಟಿ ಏಜೆನ್ಸಿ ಕಾರ್ಯ ನಿರ್ವಹಿಸಲು ಅನುಮತಿ ಇದ್ದು ,ಎಲ್ಲರಿಗೂ ಪಾಸ್ ಅಗತ್ಯವಿದೆ.
ಲಾಕ್ಡೌನ್ ಸಮಯದಲ್ಲಿ ಹಲವು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದ್ದವು. ಆದರೆ, ಫೋನ್, ಲ್ಯಾಪ್ಟಾಪ್ಗಳ ಹಾಗೂ ಇವುಗಳ ಬಿಡಿಭಾಗಗಳ ತೀವ್ರ ಕೊರತೆ ಉಂಟಾಗಿತ್ತು. ಈ ಎಲ್ಲ ವಸ್ತುಗಳನ್ನು ಅತ್ಯಾವಶ್ಯವಲ್ಲದ ವಸ್ತುಗಳೆಂದು ವರ್ಗೀಕರಿಸಿದ ಹಿನ್ನೆಲೆಯಲ್ಲಿ ಆನ್ಲೈನ್ನಲ್ಲೂ ಇವನ್ನು ಪಡೆಯುವುದು ಸಾಧ್ಯವಾಗಿರಲಿಲ್ಲ. ಇದೀಗ ಏ.20 ರ ನಂತರ ಇಂತಹ ತೊಂದರೆಗಳು ಕಡಿಮೆಯಾಗಬಹುದು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/Online-shopping.gif)