ರೆಡ್ ಕ್ರಾಸ್ : ಕಾಲ್ ಸೆಂಟರ್ ಗೆ ಸಚಿವರಿಂದ ಚಾಲನೆ

ಬೆಂಗಳೂರು

    ನೋವೆಲ್ ಕೊರೊನಾ ವೈರಾಣು (ಕೋವಿಡ್-19) ಸಂಬಂಧ ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಸಂಗ್ರಹಣೆ ಕಡಿಮೆಯಾಗಿರುವುದರಿಂದ ಗರ್ಭಿಣಿ ಮಹಿಳೆಯರಿಗೆ, ಅಪಘಾತ ಸಂಭವಿಸಿದವರಿಗೆ, ರಕ್ತ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ತುರ್ತು ರಕ್ತವನ್ನು ಸರಿಯಾದ ಸಮಯಕ್ಕೆ ನೀಡುವ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿ ಕೇಂದ್ರದಲ್ಲಿ ಗುರುವಾರ ಸ್ವಯಂ ಪ್ರೇರಿತ ರಕ್ತದಾನಿಗಳ ನೊಂದಣಿಗಾಗಿ ಗುರುತುಪಡಿಸಿದ ದೂರವಾಣಿ ಸಂಖ್ಯೆ 9154153920 ಅನ್ನು ಉದ್ಘಾಟಿಸಿದರು.

    ಉದ್ಘಾಟಿಸಿ ಮಾತನಾಡಿದ ಸಚಿವ ಶ್ರೀರಾಮುಲು, ಲಾಕ್ ಡೌನ್ ಪರಿಣಾಮವಾಗಿ ರಕ್ತದಾನದ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಬಾರದು ಎಂಬ ನಿಟ್ಟಿನಿಂದ ಕರ್ನಾಟಕ ಸರ್ಕಾರವು ಬೆಂಗಳೂರು ನಗರದ ಎಲ್ಲಾ 5 ವಲಯಗಳಲ್ಲಿ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಮಧ್ಯ) ರಕ್ತ ಸಂಗ್ರಹಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಒಳಗೊಂಡಿರುವ 17 ರಕ್ತ ಸಂಗ್ರಹ ಕೇಂದ್ರಗಳನ್ನು ಗುರುತಿಸಲಾಗಿದೆ.

   ಸ್ವಯಂ ರಕ್ತದಾನಿಗಳು ಮೇಲಿನ ಗುರುತು ಪಡಿಸಿರುವ ಸಂಖ್ಯೆಗೆ ಕರೆ ಮಾಡಿ ತಮ್ಮ ರಕ್ತದಾನವನ್ನು ನೊಂದಣಿ ಮಾಡಿಕೊಳ್ಳುವುದರಿಂದ ಅವರ ಸ್ಥಳದ ಹತ್ತಿರದಲ್ಲಿರುವ ರಕ್ತನಿಧಿ ಕೇಂದ್ರಕ್ಕೆ ಉಚಿತವಾಗಿ ಕರೆದುಕೊಂಡು ಹೋಗಿ ರಕ್ತದಾನ ಆದ ಬಳಿಕ ಮತ್ತೆ ಅವರ ಮನೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬಿಡುವ ನಿಟ್ಟಿನಲ್ಲಿ ಈ ವಿಶೇಷ ರೀತಿಯಾದ ವ್ಯವಸ್ಥೆಯನ್ನು ರೆಡ್ ಕ್ರಾಸ್ ನಂತಹ ಸಂಸ್ಥೆಯೊಡಗೂಡಿ ಪ್ರಾರಂಭಿಸಲಾಗಿದೆ. ಈ ಮೇಲಿನ ಕಾಲ್ ಸೆಂಟರ್ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯನಿರ್ವಹಿಸಲಿದೆ ಎಂದರು.

    ಸಭಾಪತಿ ಎಸ್. ನಾಗಣ್ಣನವರು ಮಾತನಾಡಿ, ರೆಡ್ ಕ್ರಾಸ್ ರಕ್ತನಿಧಿಯು ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಯಾವುದೇ ರೀತಿಯ ರಕ್ತದ ಕೊರತೆ ಆಗದಂತೆ ರಕ್ತದಾನ ಮಾಡಲಿಚ್ಛಿಸುವ ಎಲ್ಲಾ ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಪಾಸ್ ವ್ಯವಸ್ಥೆಯನ್ನು ಮಾಡಲಾಗಿದ್ದು ರಕ್ತದ ಕೊರತೆಯಾಗದಂತೆ ರೆಡ್ ಕ್ರಾಸ್ ರಕ್ತನಿಧಿಯ ಕರ್ನಾಟಕ ರಾಜ್ಯದಾದ್ಯಂತ ರಕ್ತವನ್ನು ಪೂರೈಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಎಂಟು ಜನ ಸ್ವಯಂಸೇವಕರು ರೆಡ್ ಕ್ರಾಸ್ ರಕ್ತನಿಧಿ ಯಲ್ಲಿ ರಕ್ತದಾನ ಮಾಡಿದರು. ಸಚಿವ ಶ್ರೀರಾಮುಲು ಅವರು ರಕ್ತದಾನಿಗಳಿಗೆ ಅಭಿನಂದನಾ ಪತ್ರವನ್ನು ನೀಡಿ ಪ್ರಶಂಸಿಸಿದರು.

    ಕಾರ್ಯಕ್ರಮದಲ್ಲಿ ರಾಜ್ಯ ರಕ್ತ ಕೋಶದ ಉಪನಿರ್ದೇಶಕ ಡಾ. ರೇವಣಕರ್, ಆಯುಷ್ ಇಲಾಖೆ ಆಯುಕ್ತರಾದ ಮೀನಾಕ್ಷಿ ನೇಗಿ, ರೆಡ್ ಕ್ರಾಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಚಂದ್ರಶೇಖರ್ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link