4.03 ಲಕ್ಷ ಮಾನವ ದಿನಗಳ ಸೃಜನೆ : 10 ಕೋಟಿ ರೂ. ಕೂಲಿ ಪಾವತಿ
ಚಿತ್ರದುರ್ಗ:
ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟಲು ದೇಶದಲ್ಲಿ ಕಳೆದ ಮಾ. 23 ರಿಂದ ಲಾಕ್ಡೌನ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಕೆಲಸ ಇಲ್ಲದೆ ಪರದಾಡುತ್ತಿರುವ ಬಡ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಆಸರೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಾಂಬ ಅವರು ತಿಳಿಸಿದ್ದಾರೆ.
ಲಾಕ್ಡೌನ್ ಕಾರಣದಿಂದಾಗಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಲ್ಲಿ ಕೆಲಸ ಮಾಡಲು ವಲಸೆ ಹೋದವರು ಇದೀಗ ಸ್ವಂತ ಜಿಲ್ಲೆಗೆ ವಾಪಸ್ಸಾಗುತ್ತಿದ್ದಾರೆ. ಇಂತಹ ಕೂಲಿ ಕಾರ್ಮಿಕರಿಗೂ ಜಾಬ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೆ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳ ಪಟ್ಟಿಯಲ್ಲಿ ಜಿಲ್ಲೆಗೆ ವಾಪಸ್ ಬಂದ ಕುಟುಂಬ ಸದಸ್ಯರ ಹೆಸರು ಇದ್ದರೂ, ಅಂತಹವರಿಗೂ ಉದ್ಯೋಗ ನೀಡಲು ಸೂಚನೆ ನೀಡಲಾಗಿದೆ.
ಈ ವರ್ಷ ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಯನ್ನು ಆರಂಭಿಸಲಾಗಿದ್ದು, ರೈತರು ವೈಯಕ್ತಿಕವಾಗಿ ತಮ್ಮ ಹೊಲಗಳಲ್ಲಿ ಕೃಷಿಹೊಂಡ ಅಥವಾ ಬದು ನಿರ್ಮಾಣದಂತಹ ಕಾಮಗಾರಿ ಕೈಗೊಳ್ಳಬಹುದಾಗಿದೆ. ಸದ್ಯದಲ್ಲೇ ಮಳೆಗಾಲ ಆರಂಭವಾಗಲಿದ್ದು, ಮಳೆ ನೀರು ಹೆಚ್ಚು ನಿಂತಲ್ಲಿ ಭೂಮಿಯ ಫಲವತ್ತತೆ ಹಾಗೂ ಬೆಳೆಯ ಉತ್ತಮ ಇಳುವರಿಗೆ ಇದು ನೆರವಾಗಲಿದೆ ಎಂದು ಸಿಇಒ ಹೊನ್ನಾಂಬ ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ. ಎಸ್. ರಂಗಸ್ವಾಮಿ ಅವರು, ಜಿಲ್ಲೆಯಲ್ಲಿನ ನರೇಗಾ ಯೋಜನೆಯ ಸ್ಥಿತಿಗತಿ ಕುರಿತು ಮಾಹಿತಿ ನೀಡಿ, ಜಿಲ್ಲೆಯ 188 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ನರೇಗಾ ಯೋಜನೆಯಡಿ ಕೆಲಸ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 4.03 ಲಕ್ಷ ಮಾನವ ದಿನ ಸೃಜನೆಯಾಗಿದ್ದು, ನರೇಗಾ ಯೋಜನೆಯಡಿ ಸದ್ಯ ಜಿಲ್ಲೆಯಲ್ಲಿ 27 ಸಾವಿರ ಕೂಲಿ ಕಾರ್ಮಿಕರು ನಾನಾ ಕೆಲಸ ಮಾಡುತ್ತಿದ್ದಾರೆ.
ಈ ವರ್ಷ 75 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ಹೊಂದಲಾಗಿದ್ದು, 300 ಕೋಟಿ ರೂ. ನರೇಗಾ ಯೋಜನೆಗಾಗಿಯೇ ಅನುದಾನ ಖರ್ಚು ಮಾಡುವ ಗುರಿ ಇದೆ. ಜಿಲ್ಲೆಯಲ್ಲಿ ಈ ವರ್ಷ ಈಗಾಗಲೇ ರೂ. 10 ಕೋಟಿ ರೂ. ಕೂಲಿ ಬಾಬ್ತು ಪಾವತಿಸಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಕೂಲಿ ಕೆಲಸವಿಲ್ಲದೆ ಆತಂಕದಲ್ಲಿದ್ದ ಜಿಲ್ಲೆಯ ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರ ಅನುಕೂಲ ಮಾಡಿಕೊಟ್ಟಂತಾಗಿದೆ.
ಬದು ನಿರ್ಮಾಣ ಮಾಸಾಚರಣೆ:
ಸದ್ಯ ಮುಂಗಾರು ಮಳೆ ಪ್ರಾರಂಭವಾಗಲು ದಿನಗಣನೆ ಆರಂಭವಾಗಿದ್ದು, ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ವಿಶೇಷವಾಗಿ ಅಂತರ್ಜಲ ಅಭಿವೃದ್ಧಿಗಾಗಿ ಹೊಲ, ತೋಟಗಳಲ್ಲಿ ಬದು ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಈ ಬಾರಿ ಒತ್ತು ನೀಡಲಾಗಿದೆ. ಇದಕ್ಕಾಗಿ ನರೇಗಾ ಯೋಜನೆಯಡಿ ಮೇ 19 ರಿಂದ ಜೂನ್ 18 ರವರೆಗೆ ಬದು ನಿರ್ಮಾಣ ಮಾಸಾಚರಣೆ ಆಯೋಜಿಸಿದ್ದು, ಎಲ್ಲ ತಾಲ್ಲೂಕುಗಳಲ್ಲಿಯೂ ಇದನ್ನು ಅಭಿಯಾನವನ್ನಾಗಿ ತೆಗೆದುಕೊಳ್ಳಲಾಗಿದೆ.
ಪ್ರತಿ ಗ್ರಾಮದ ಪ್ರತಿ ರೈತರು ತಮ್ಮ ಹೊಲಗಳಲ್ಲಿ ಬದು ನಿರ್ಮಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯವಾಗಿ ಸಣ್ಣ, ಅತಿಸಣ್ಣ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರ್ಗದ ಜನರು ಹೊಲ, ತೋಟಗಳಲ್ಲಿ ಬದು ನಿರ್ಮಾಣ ಮಾಡಿ, ನೀರನ್ನು ಇಂಗಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯ 55 ಜಲಾನಯನ ಪ್ರದೇಶಗಳನ್ನು ಇದಕ್ಕಾಗಿ ಗುರುತಿಸಿ, ಎಲ್ಲ ರೈತರಿಗೆ ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊನ್ನಾಂಬ ಅವರು ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ಬದು ನಿರ್ಮಾಣ ಮಾಸಾಚರಣೆಗೆ ಚಾಲನೆ ನೀಡಿದ್ದು, ಹೊಸದುರ್ಗ ಹಾಗೂ ಚಿತ್ರದುರ್ಗದಲ್ಲೂ ಸ್ಥಳೀಯ ಶಾಸಕರು ಚಾಲನೆ ನೀಡಿದ್ದಾರೆ.
ನರೇಗಾದಡಿ ಕಾಮಗಾರಿಗಳು:
ನರೇಗಾ ಯೋಜನೆಯಡಿ ಪ್ರಸ್ತುತ ವೈಯಕ್ತಿಕ ಕಾಮಗಾರಿಗಳು, ಬದುಗಳ ನಿರ್ಮಾಣ, ಕೃಷಿ ಹೊಂಡ, ಅರಣ್ಯದಲ್ಲಿ ಗುಂಡಿ ತೆಗೆಯುವಿಕೆ, ಅರಣ್ಯದಲ್ಲಿ ನೀರು ಇಂಗಿಸುವ ಕಾಮಗಾರಿ, ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ, ರೇಷ್ಮೆ, ಕೃಷಿ ಇಲಾಖೆಯ ವತಿಯಿಂದ ಬದು ನಿರ್ಮಾಣ, ಸಮುದಾಯ ಆಧಾರಿತ ಕಾಮಗಾರಿಗಳಾದ ಕೆರೆ ಮತ್ತು ಗೋಕಟ್ಟೆ ಹೂಳೆತ್ತುವುದು, ಕನ್ವರ್ಜೆನ್ಸ್ ಕಾಮಗಾರಿಗಳು ನಡೆಯುತ್ತಿವೆ. ಇದರಿಂದಾಗಿ ಈ ಬಾರಿ ಹೆಚ್ಚಿನ ಮಾನವ ದಿನಗಳ ಸೃಜನೆ ಸಾಧ್ಯವಾಗುತ್ತಿದೆ.
75 ಲಕ್ಷ ಮಾನವ ದಿನ ಸೃಜನೆ ಗುರಿ:
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ನರೇಗಾ ಯೋಜನೆಯಡಿ 75 ಲಕ್ಷ ಮಾನವ ದಿನ ಸೃಜನೆಯ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಕನಿಷ್ಟ 300 ಕೋಟಿ ರೂ. ವೆಚ್ಚ ಮಾಡುವ ಅಂದಾಜು ಮಾಡಿಕೊಳ್ಳಲಾಗಿದೆ. ಇದಕ್ಕಿಂತ ಹೆಚ್ಚಿನ ಮಾನವ ದಿನಗಳ ಸೃಜನೆಯಾದರೂ, ಸರ್ಕಾರ ಅನುದಾನ ನೀಡಲು ಅವಕಾಶ ಕಲ್ಪಿಸಿದೆ. ಸರ್ಕಾರವು ಕೂಲಿ ಕಾರ್ಮಿಕರಿಗೆ ದಿನವೊಂದಕ್ಕೆ ರೂ.275 ನಿಗದಿಪಡಿಸಲಾಗಿದ್ದು, ಕೂಲಿ ಕಾರ್ಮಿಕರು ಸಲಕೆ, ಗುದ್ದಲಿ ಮುಂತಾದ ಸಲಕರಣೆಗಳನ್ನು ಕೊಂಡೊಯ್ದರೆ ಹೆಚ್ಚುವರಿಯಾಗಿ ರೂ. 10 ಕೂಲಿ ನೀಡಲಾಗುವುದು.
ಕೋವಿಡ್-19 ತಡೆಗೆ ಮುಂಜಾಗ್ರತಾ ಕ್ರಮಗಳು:
ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಕೂಲಿ ಕಾರ್ಮಿಕರಿಗೆ ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ. ಜೊತೆಗೆ ಸ್ಯಾನಿಟೈಸರ್ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಕಿಟ್ ಪೂರೈಕೆ ಮಾಡಲಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಕೋವಿಡ್ ವೈರಸ್ ಸೋಂಕು ತಡೆಗಾಗಿ ಅರಿವು ಮೂಡಿಸಲು ಕಾಯಕ ಬಂಧುಗಳಿಗೆ ಸೂಚನೆ ನೀಡಲಾಗಿದ್ದು, ಅದರಂತೆ, ಕಾಮಗಾರಿ ಸ್ಥಳಗಳಲ್ಲಿ, ಕೂಲಿ ಕಾರ್ಮಿಕರಿಗೆ ಕೋವಿಡ್-19 ತಡೆಗಟ್ಟಲು ಪ್ರತಿಜ್ಞಾ ವಿಧಿ ಬೋಧನೆ ಕೂಡ ಮಾಡಲಾಗುತ್ತಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-10 ಸೋಂಕು ತಡೆಗಟ್ಟಲು ಒಂದೆಡೆ ಜಿಲ್ಲಾಡಳಿತ ಶ್ರಮಿಸುತ್ತಿದ್ದರೆ, ಇನ್ನೊಂದೆಡೆ, ಲಾಕ್ಡೌನ್ ಪರಿಣಾಮವಾಗಿ ಉದ್ಯೋಗಕ್ಕೂ ತೊಂದರೆ ಎದುರಿಸುತ್ತಿರುವ ಬಡ ಕೂಲಿ ಕಾರ್ಮಿಕರ ಆರ್ಥಿಕ ಸಬಲತೆಗಾಗಿ ಜಿಲ್ಲಾ ಪಂಚಾಯತ್ ವತಿಯಿಂದ ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಸಕಾಲದಲ್ಲಿ ಬಂದರೆ, ರೈತರ ಕೃಷಿ ಚಟುವಟಿಕೆಗೆ ಉತ್ತೇಜನ ದೊರೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
