ಹುಳಿಯಾರು
ಹುಳಿಯಾರು ಪಟ್ಟಣದ ಲಿಂಗಾಯಿತರ ಬೀದಿಯ 65 ವರ್ಷದ ನಿವಾಸಿಯೊಬ್ಬರಿಗೆ ಕೋವಿಡ್ –19 ಪ್ರಕರಣ ದೃಢವಾಗಿದೆ. ಪರಿಣಾಮ ಅವರು ವಾಸ ಮಾಡುತ್ತಿದ್ದ ಲಿಂಗಾಯಿತರ ಬೀದಿಯನ್ನು ಬುಧವಾರ ಬೆಳಗ್ಗೆಯಿಂದ ಸೀಲ್ಡೌನ್ ಮಾಡಲಾಗಿದೆ.
ಕಳೆದ ವಾರದ ಹಿಂದೆಯೇ ಕೆಮ್ಮು ನೆಗಡಿ ಬಂದಿದ್ದು ಸ್ಥಳೀಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ. ಆದರೆ ಗುಣಮುಖವಾಗದ ಕಾರಣದಿಂದ ತುಮಕೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅನುಮಾನ ಬಂದ ಅಲ್ಲಿನ ವೈದ್ಯರು ಕೊರೊನಾ ಪರೀಕ್ಷೆಗೆ ಸೂಚಿಸಿದ್ದು ಅದರಂತೆ ಪರಿಕ್ಷೆಗೆ ಒಳಪಟ್ಟಿದ್ದರು. ಈಗ ಕೊರೊನಾ ವರದಿಯು ಪಾಸಿಟಿವ್ ಬಂದಿದ್ದು, ಇವರನ್ನು ತುಮಕೂರು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರಿಗೆ ಕೊರೊನಾ ಬಂದಿರುವ ಸುದ್ದಿ ಮಂಗಳವಾರ ಸಂಜೆಯೆ ಹರಿದಾಡಿತ್ತಲ್ಲದೆ ಪಪಂ ಸಿಬ್ಬಂದಿ ಸಹ ಇವರ ವಾಸದ ಬೀದಿ ಸೀಲ್ಡೌನ್ ಮಾಡಲು ಸಿದ್ಧತೆ ಸಹ ಮಾಡಿಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇದು ಸುಳ್ಳು ಸುದ್ದಿ ಎಂದು ಸೀಲ್ ಡೌನ್ಗೆ ತಂದಿದ್ದ ಸಾಮಗ್ರಿಗಳನ್ನು ವಾಪಸ್ಸು ಕೊಂಡೊಯ್ದಿದ್ದರು.
ಆದರೆ ಬುಧವಾರ ಬೆಳಗ್ಗೆ ಮತ್ತೆ ಕೊರೊನಾ ದೃಢವಾಗಿದೆ ಎಂದೇಳಿ ಸೀಲ್ಡೌನ್ಗೆ ಮುಂದಾದರು. ಮಂಗಳವಾರ ರಾತ್ರಿಯೇ ಸೀಲ್ ಡೌನ್ ಮಾಡುವ ಸುದ್ದಿ ಹರಿದಾಡಿದ್ದರಿಂದ ಇಲ್ಲಿನ ನಾಲ್ಕೈದು ಮನೆಯವರು ಮನೆ ಖಾಲಿ ಮಾಡಿಕೊಂಡು ನೆಂಟರಿಷ್ಟರ ಮನೆಗಳಿಗೆ ತೆರಳಿದ್ದರು. ಈ ವಿಷಯ ತಿಳಿದ ಆರೋಗ್ಯ ಇಲಾಖೆಯವರು ಅವರು ತೆರಳಿರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದು ಅಲ್ಲಿನ ಆರೋಗ್ಯ ಇಲಾಖೆಗೆ ಕ್ವಾರಂಟೈನ್ ಮಾಡುವಂತೆ ತಿಳಿಸಿದರು.
ಕೊರೊನಾ ದೃಢಪಟ್ಟಿರುವ ಮನೆಯಲ್ಲಿ 24 ಮಂದಿ ವಾಸವಾಗಿದ್ದು, ಇವರಲ್ಲಿ ಸಣ್ಣಸಣ್ಣ ಮಕ್ಕಳಿದ್ದು ಇವರೆಲ್ಲರನ್ನೂ ಹಾಸ್ಟೆಲ್ ಕ್ವಾರಂಟೈನ್ ಮಾಡಿದರೆ ಮಕ್ಕಳ ಆರೈಕೆಗೆ ತೊಂದರೆಯಾಗುತ್ತದೆ ಎಂದು ಹೋಂ ಕ್ವಾರಂಟೈನ್ ಮಾಡಿ, ಮನೆಗೆ ಬೀಗ ಹಾಕಿಕೊಂಡು ಹೋಗಿ ಎಂಬ ಬೇಡಿಕೆಯನ್ನು ಸೀಲ್ ಡೌನ್ ಮಾಡುವ ಸಂದರ್ಭದಲ್ಲಿ ಇಟ್ಟರು. ನವಜಾತ ಶಿಶುಗಳು ಮತ್ತು ಅವರ ತಾಯಂದಿರನ್ನು ಮಾತ್ರ ಹೋಂ ಕ್ವಾರಂಟೈನ್ ಮಾಡಿ ಉಳಿದವರನ್ನು ಇಲ್ಲಿನ ಹಾಸ್ಟೆಲ್ಗೆ ಕಳುಹಿಸಿಕೊಟ್ಟರು.ಸೋಂಕಿತರು ವಾಸಿಸುತ್ತಿರುವ ಏರಿಯಾವನ್ನು ಸೀಲ್ಡೌನ್ ಮಾಡಲಾಯಿತಲ್ಲದೆ, ಪಟ್ಟಣ ಪಂಚಾಯ್ತಿಯಿಂದ ಚರಂಡಿ, ರಸ್ತೆಯನ್ನು ಸ್ವಚ್ಛಗೊಳಿಸಿ, ಬೀದಿಗೆ ಬ್ಲೀಚಿಂಗ್ ಪೌಡರ್ ಮತ್ತು ಔಷಧಿ ಸಿಂಪಡಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ