ತುರುವೇಕೆರೆ
ಪಟ್ಟಣದಲ್ಲಿ ಫ್ಲೆಕ್ಸ್‍ಗಳ ಹಾವಳಿ ಜಾಸ್ತಿಯಾಗಿದ್ದು ಇತ್ತೀಚೆಗಷ್ಟೆ ಪಟ್ಟಣದಲ್ಲಿ ಅಳವಡಿಸಿದ್ದ ಫ್ಲೆಕ್ಸ್ ವಿಚಾರದಲ್ಲಿ ಎರಡು ರಾಜಕೀಯ ಪಕ್ಷಗಳ ನಡುವೆ ಘರ್ಷಣೆಗೆ ಕಾರಣವಾಗಿರುವುದರಿಂದ ಅಕ್ರಮವಾಗಿ ಫ್ಲೆಕ್ಸ್ ಅಳವಡಿಸಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಕಾಂಗ್ರೆಸ್ ಮುಖಂಡ ಹಾಗೂ ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್. ವಸಂತಕುಮಾರ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು, ಸುಪ್ರೀಂ ಕೋರ್ಟ್ ಈಗಾಗಲೇ ಫ್ಲೆಕ್ಸ್ ಬಳಕೆ ನಿಷೇಧಿಸಿ ಸ್ಪಷ್ಟ ಆದೇಶ ನೀಡಿದೆ. ಆದರೂ ಸಹ ಪಟ್ಟಣದಲ್ಲಿ ಫ್ಲೆಕ್ಸ್ ಅಳವಡಿಸದಂತೆ ಬಿಗಿ ನಿಲುವನ್ನು ಕೈಗೊಳ್ಳುವಲ್ಲಿ ಮುಖ್ಯಾಧಿಕಾರಿಗಳು ವಿಫಲವಾಗಿದ್ದಾರೆ. ರಾಜಕೀಯ ಪಕ್ಷದವರ ಅಕ್ರಮ ಫ್ಲೆಕ್ಸ್ ಅಳವಡಿಕೆಗೆ ಬಗ್ಗೆ ಮುಖ್ಯಾಧಿಕಾರಿಗಳು ಬಿಗಿ ನಿಲುವು ತಾಳಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಆದರೆ ಫ್ಲೆಕ್ಸ್ ವಿಚಾರ ಪಟ್ಟಣಕ್ಕಷ್ಟೆ ಸೀಮಿತವಾಗದೆ ಇಡೀ ತಾಲ್ಲೂಕಿನ ಜನತೆಯ ನೆಮ್ಮದಿಗೆ ಭಂಗ ತಂದಿದ್ದು, ನಿಷೇದಾಜ್ಞೆ ಜಾರಿಗೆ ಕಾರಣವಾಗಿದೆ.
ಮುಖ್ಯಾಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ಎರಡು ರಾಜಕೀಯ ಪಕ್ಷಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ ಎಂದು ದೂರಿದರಲ್ಲದೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯತೆ ವಿರುದ್ದ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ. ಫ್ಲೆಕ್ಸ್ ನಿಷೇಧದ ಆದೇಶ ಹೊರ ಬಿದ್ದು ಸುಮಾರು ತಿಂಗಳುಗಳು ಕಳೆದಿವೆ. ಆದರೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಸುತ್ತಿದ್ದರೂ ಮುಖ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಕಳೆದ ಕೆಲ ತಿಂಗಳುಗಳಿಂದ ಅಕ್ರಮವಾಗಿ ಫ್ಲೆಕ್ಸ್ ಅಳವಡಿಸಿದವರ ವಿರುದ್ದ ಮುಖ್ಯಾಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ದಾಖಲೆ ಸಹಿತ ಮಾಹಿತಿ ಒದಗಿಸುವಂತೆ ಬಿ.ಎಸ್.ವಸಂತಕುಮಾರ್ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಬಿಗನೇನಹಳ್ಳಿ ರವೀಂದ್ರಕುಮಾರ್, ಕರ್ನಾಟಕ ವಿಜಯಸೇನೆ ತಾ.ಅದ್ಯಕ್ಷ ಗಿರೀಶ್, ಹುಲಿಕಲ್ ಜಗದೀಶ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ