ಸರ್ಕಾರ ಹೂ ಬೆಳೆಗಾರರಿಗೂ ಬೆಂಬಲ ಬೆಲೆ ನೀಡುವಂತಾಗಲಿ

ತುರುವೇಕೆರೆ

     ಕೊರೋನಾ ಸಂಕಷ್ಟಕ್ಕೆ ಸಿಲುಕಿದ ತಾಲ್ಲೂಕಿನ ಹೂ ಬೆಳೆಗಾರ ರೈತರ ಬದುಕು ಮೂರಾಬಟ್ಟೆಯಾಗಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.ಪ್ರತಿ ವರ್ಷ ಆಷಾಢ ಮಾಸ ಕಳೆದು ಭಾದ್ರಪದ ಮಾಸ ಹುಟ್ಟಿತೆಂದರೆ ಕಾರ್ತೀಕ ಮಾಸದ ಕೊನೆಯವರೆವಿಗೂ ಹಬ್ಬಗಳು ಸರಣಿಯೋಪಾದಿಯಲ್ಲಿ ಆಚರಣೆಯಲ್ಲಿರುತ್ತವೆ. ಮಂಗಳಗೌರಿ ವ್ರತದಿಂದ ಪ್ರಾರಂಭವಾಗಿ ಗೌರಿ ಗಣೇಶ, ಅಮಾವಾಸ್ಯೆ ಹಬ್ಬಗಳು, ವಿಜಯದಶಮಿ, ದೀಪಾವಳಿ, ಕಾರ್ತೀಕ ಮಾಸ ಸೇರಿದಂತೆ ಅನೇಕ ಹಬ್ಬಗಳು ವಾರಾನುಗಟ್ಟಲೆ ಹಿಂದೂ ಸಂಪ್ರದಾಯದಂತೆ ಪ್ರತಿಯೊಬ್ಬರೂ ಆಚರಿಸುವಂತ ಹಬ್ಬಗಳಾಗಿವೆ.

    ಪ್ರತಿದಿನ ಪೂಜೆ ಪುರಸ್ಕಾರಗಳೊಂದಿಗೆ ಪ್ರಾರಂಭವಾಗಿ ಒಂದಿಲ್ಲೊಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಪೂಜೆ ಪುರಸ್ಕಾರಕ್ಕೆ ಸಂಪ್ರದಾಯದಂತೆ ಹೂವು ಬಹು ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಒಂದು ಪೂಜೆ ಪುರಸ್ಕಾರ ನಡೆಯಬೇಕೆಂದರೆ ಹೂವು ಕಡ್ಡಾಯವಾಗಿ ಇರಲೇಬೇಕು.

    ಯಾವುದೇ ಹಬ್ಬ-ಹುಣ್ಣಿಮೆಗಳಾಗಲಿ, ಸಭೆ-ಸಮಾರಂಭಗಳಾಗಲಿ, ಶುಭ ಹಾಗೂ ಅಶುಭ ಸಂದರ್ಭಗಳೆರಡರಲ್ಲೂ ಸಹ ಹೂವಿನ ಅಗತ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ಹೂವುಗಳ ಬೇಡಿಕೆಯೂ ಅಷ್ಟೇ ಹೆಚ್ಚಿರುತ್ತದೆ. ಬೇಡಿಕೆ ಹೆಚ್ಚಿದಂತೆ ಬೆಲೆಗಳೂ ದುಪ್ಪಟ್ಟಾಗಿರುತ್ತವೆ. ಎಲ್ಲ ವಿಧದಲ್ಲೂ ಹಾಗೂ ವರ್ಷಪೂರ್ತಿ ಬೇಡಿಕೆ ಇರುವ ಹೂವನ್ನು ಬೆಳೆದು ಹೆಚ್ಚು ಬೆಲೆಗೆ ಮಾರಿ ಲಾಭ ಗಳಿಸಬಹುದೆಂಬ ಉದ್ದೇಶದಿಂದ ರೈತರು ಈ ಬಾರಿಯೂ ಹೂ ಬೆಳೆಯಲು ಮುಂದಾಗಿದ್ದರು.

    ಆದರೆ ಕೋರೋನಾ ಸಂಕಷ್ಟಕ್ಕೆ ಸಿಲುಕಿ ಎಲ್ಲಾ ಕಾರ್ಯಕ್ರಮಗಳು ರದ್ದಾದ ಹಿನ್ನೆಲೆಯಲ್ಲಿ ಒಂದು ಮಾರು ಹೂವಿಗೆ 200 ರಿಂದ 300 ರ ವರೆಗೆ ಮಾರಾಟವಾಗುತ್ತಿದ್ದ ಹೂವು ಇಂದು 10 ರೂ. ನಿಂದ 30 ರೂ.ಗೆ ಮಾರಾಟವಾಗುತ್ತಿರುವುದು ದುರಾದೃಷ್ಟಕರ. ಪ್ರತಿ ವರ್ಷ ಈ ಸಂದರ್ಭಗಳಲ್ಲಿ ಹೆಚ್ಚು ಹೆಚ್ಚು ಲಾಭ ರೈತನ ಕೈ ಸೇರುತ್ತಿದ್ದರಿಂದ ಈ ಬಾರಿಯೂ ಹೆಚ್ಚು ಲಾಭ ಪಡೆಯಬಹುದೆಂಬ ದೂರಾಲೋಚನೆಯಿಂದ ಸಾಲಸೋಲ ಮಾಡಿ ಹೂ ಬೆಳೆದಿದ್ದ ರೈತರಿಗೆ ಇದೀಗ ಹೂ ಬೇಡಿಕೆಯಿಲ್ಲದೆ ನೆಲ ಕಚ್ಚಿದ್ದು ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.

   ಕೊರೋನಾ ಎಂಬ ಹೆಮ್ಮಾರಿ ಇಡೀ ಪ್ರಪಂಚವನ್ನು ಸಂಕಷ್ಟಕ್ಕೆ ದೂಡಿದ್ದು ದೇಶ, ರಾಜ್ಯ, ಜಿಲ್ಲೆ, ತಾಲ್ಲೂಕಿನಾದ್ಯಂತ ಅತಿ ಕ್ರಮಿಸಿ ಜನರ ನಿದ್ದೆಗೆಡಿಸಿದೆಯಲ್ಲದೆ ತಿನ್ನುವ ಅನ್ನಕ್ಕೂ ಕಲ್ಲಾಕಿದೆ. ಮನೆಯಲ್ಲಿ ಸುಮ್ಮನೆ ಕೂರುವ ಹಾಗಿಲ್ಲ. ಇತ್ತ ದುಡಿತಕ್ಕೆ ಮುಂದಾದರೆ ಪ್ರತಿಫಲವೂ ಇಲ್ಲದಂತಾಗಿ ಆತಂಕದಿಂದ ದಿನ ದೂಡುವಂತಾಗಿದೆ. ಜಾತ್ರಾ ಮಹೋತ್ಸವಗಳು, ಹಬ್ಬ- ಹರಿದಿನಗಳೇ ರದ್ದಾಗಿವೆ ಎಂದ ಮೇಲೆ, ಇನ್ನೂ ಹೂವಿನ ಅಗತ್ಯವಾದರೂ ಏನಿದೆ? ಅಡಕೆ, ಕೊಬ್ಬರಿ, ರಾಗಿ, ಭತ್ತದ ಬೆಳೆಗಳಾದರೆ ಬೆಲೆ ಕುಸಿದರೆ ಕೆಲ ತಿಂಗಳವರೆಗೆ ಶೇಖರಣೆ ಮಾಡಬಹುದು. ಅದರಂತೆ ಹೂವನ್ನು ಒಂದು ವಾರ ಶೇಖರಣೆ ಮಾಡಲು ಸಾಧ್ಯವಿಲ್ಲ. ಎರಡು-ಮೂರು ದಿನಗಳೊಳಗೆ ಮಾರಾಟ ಮಾಡಿದರೇನೋ ಸರಿ, ಇಲ್ಲವೆಂದರೆ ಹೂ ಬಾಡಿ ಹಾಳಾಗಿ ಕಸವಾಗುತ್ತದೆ.

    ಇಂತಹ ಸಂದರ್ಭದಲ್ಲಿ ರೈತನಿಗೆ ತಣ್ಣೀರ ಬಟ್ಟೆಯೇ ಗತಿ. ಬೀಜ ನಾಟಿ ಮಾಡಿದಂದಿನಿಂದ ಅದಕ್ಕೆ ರಾಸಾಯನಿಕ ಗೊಬ್ಬರ, ಔಷಧಿ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆಗೆ ಪರಿಶ್ರಮಕ್ಕೆ ತಕ್ಕ ಫಲವಿಲ್ಲದೆ ಬೆಳೆಗಾರರು ಇಂದು ಸಂಕಷ್ಟಕ್ಕೀಡಾಗಿದ್ದಾರೆ.

   ತಾಲ್ಲೂಕಿನ ಡೊಂಕಿಹಳ್ಳಿ ಸುತ್ತ್ತಮುತ್ತಲ ರೈತರು ಸೇವಂತಿಗೆ ಸೇರಿದಂತೆ ತರಾವರಿ ಹೂವುಗಳನ್ನು ಎಕರೆಗಟ್ಟಲೆ ಜಮೀನಿನಲ್ಲಿ ಬೆಳೆದಿದ್ದು, ಈಗ ಹೂವಿನ ಬೆಲೆ ಪಾತಾಳಕ್ಕಿಳಿದಿದ್ದು, ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಪ್ರತಿ ವರ್ಷ ಕೈ ತುಂಬಾ ಹಣವನ್ನು ಜೇಬಿಗಿಳಿಸುತ್ತಿದ್ದ ರೈತ ಇಂದು ಕೊರೋನಾ ಸಂಕಷ್ಟಕ್ಕೆ ಸಿಲುಕಿ ಹೂ ಕೇಳುವವರೆ ಇಲ್ಲದಂತಾಗಿದೆ.

   ತಾಲ್ಲೂಕಿನ ಡೊಂಕಿಹಳ್ಳಿ ಭಾಗದಲ್ಲಿ ಹೆಚ್ಚು ಹೆಚ್ಚು ಹೂವು ಬೆಳೆಯುತ್ತಿದ್ದು, ಈ ಮಹಾನವಮಿ ಹಬ್ಬಗಳ ಸಂದರ್ಭದಲ್ಲಿ ಹೆಚ್ಚು ಬೇಡಿಕೆಯಿದ್ದು ಅಷ್ಟೇ ಲಾಭ ಸಿಗುತ್ತಿತ್ತು. ಆದರೆ ಈ ಬಾರಿ ಜಾತ್ರೆ, ಹಬ್ಬ ಹರಿದಿನಗಳು ಸೇರಿದಂತೆ ಯಾವುದೇ ಶುಭ ಸಮಾರಂಭಗಳಿಗೆ ಸರ್ಕಾರ ಬ್ರೇಕ್ ಹಾಕಿರುವುದರಿಂದ ಹೂವಿನ ಬೇಡಿಕೆ ಇಲ್ಲದೆ ಮಾರುಕಟ್ಟೆಯಲ್ಲಿ ಕೊಳೆಯುವಂತಾಗಿದೆ. ಬೆಳಗಿನಿಂದ ಸಂಜೆಯವರೆವಿಗೂ ವ್ಯಾಪಾರವಿಲ್ಲದೆ ಹೂವಿನ ಗುಡ್ಡೆ ಮುಂದೆ ಕುಳಿತು ತೂಕಡಿಸುವಂತಾಗಿದೆ. ಪ್ರತಿ ದಿನ ಸಂಜೆ ಮಾರಾಟವಾಗದೆ ಉಳಿದ ಹೂವನ್ನು ಮಾರಾಟದ ಸ್ಥಳದಲ್ಲಿಯೇ ಬಿಟ್ಟು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿವರ್ಷ ದಸರಾ ಸಂದರ್ಭದಲ್ಲಿ ಹೂವಿನ ಬೆಲೆ ಗಗನಕ್ಕೇರುತ್ತಿದ್ದು, ಈ ಬಾರಿ ಕೇವಲ 10 ರೂ.ನಿಂದ 30 ರೂ.ಗೂ ಕೇಳುವವರಿಲ್ಲ ಅಂದ ಮೇಲೆ ಕಷ್ಟಪಟ್ಟು ಬೆಳೆದ ನಮ್ಮಗಳ ಪಾಡೇನು? ಸರ್ಕಾರ ಇತ್ತ ಗಮನ ಹರಿಸಿ ಹೂ ಬೆಳೆದು ಕೈ ಸುಟ್ಟುಕೊಂಡ ರೈತರಿಗೆ ಬೆಂಬಲ ಬೆಲೆ ನೀಡಲಿ ಎಂದು ಹೂವು ಬೆಳೆಗಾರ ಡೊಂಕಿಹಳ್ಳಿ ಉಮೇಶ್ ತಮ್ಮ ಸಂಕಷ್ಟ ತೋಡಿಕೊಂಡರು.

   ಮಾರುಕಟ್ಟೆಗಳಿಗೆ ರೈತರು ವಿಪರೀತ ಹೂವು ತರುತ್ತಿದ್ದು, ಇತ್ತ ಕೊರೋನ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾರೂ ಹೂವು ಕೊಳ್ಳುತ್ತಿಲ್ಲ. ಜೊತೆಗೆ ಹೆಚ್ಚು ಹೂವಿನ ಬೇಡಿಕೆಯಿದ್ದ ದೇವಸ್ಥಾನಗಳಲ್ಲಿ ಪೂಜೆ ಪುರಸ್ಕಾರಗಳು ಕಡಿಮೆಯಾಗಿ, ಹೂವು ಕೊಳ್ಳುವವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಹೂವು ಮಾರಾಟವಾಗದೆ ಕೊಳೆಯುವ ಹಂತಕ್ಕೆ ತಲುಪಿದೆ. ಪ್ರತಿದಿನ ಇದನ್ನೆ ಕೊಂಡು ಮಾರುವ ನಮ್ಮಂತಹವರ ಗತಿಯೇನು ಎಂದು ವ್ಯಾಪಾರಿ ತುರುವೇಕೆರೆ ರಾಮಣ್ಣ ತಮ್ಮ ಆತಂಕ ಹೊರಹಾಕಿದರು.

   ಒಟ್ಟಿನಲ್ಲಿ ಹೂವಿನ ಬೆಳೆಯನ್ನೇ ಮೂಲ ಕಸುಬಾಗಿರಿಸಿಕೊಂಡ ತಾಲ್ಲೂಕಿನ ಹೂವು ಬೆಳೆಗಾರರಿಗೆ ಇತ್ತ ಕೊರೋನಾ ಛಾಯೆ ಒಂದೆಡೆಯಾದರೆ ಮತ್ತೊಂದೆಡೆ ತಕ್ಕ ಬೆಲೆಯಿಲ್ಲದೆ ಕಣ್ಣೆದುರಿಗೆ ಕೊಳೆಯುವ ಸ್ಥಿತಿ ಕಂಡು ಹೂ ಬೆಳೆದ ರೈತರು ಮಮ್ಮಲ ಮರುಗುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link