ಶಿರಾ:

ತಾಲ್ಲೂಕಿನ ತಾವರೇಕೆರೆ ಗ್ರಾಮದ ಸ.ನಂ. 305ರಲ್ಲಿ ಶ್ರೀ ವಾಲ್ಮೀಕಿ ಚಿಂತನಾ ಭವನ ಮತ್ತು ಪಾತಲಿಂಗೇಶ್ವರ ದೇವಾಲಯಗಳನ್ನು ಈ ಹಿಂದೆ ನಿರ್ಮಿಸಲಾಗಿದ್ದು ಸದರಿ ದೇವಾಲಯಗಳಿಗೆ ರಸ್ತೆ ಸಂಪರ್ಕ ಇಲ್ಲದಂತೆ ಸ್ಥಳೀಯ ಆರಕ್ಷಕ ಇಲಾಖೆ ತಡೆಗೋಡೆ ನಿರ್ಮಿಸುತ್ತಿದ್ದು ಈ ಕೂಡಲೇ ಕ್ರಮ ಕೈಗೊಂಡು ರಸ್ತೆ ಸಂಪರ್ಕ ಕಲ್ಪಿಸುವಂತೆ ವಾಲ್ಮೀಕಿ ಸಮುದಾಯದ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
1993 ರಂದು ಸರ್ಕರದ ಆದೇಶದಂತೆ ಸ.ನಂ. 29 ರಲ್ಲಿ ತಾವರೇಕೆರೆ ಆರಕ್ಷಕ ಠಾಣೆ ಮತ್ತು ವಸತಿ ನಿಲಯಗಳನ್ನು ನಿರ್ಮಿಸಲು 5 ಎಕರೆ ಜಮೀನನ್ನು ಷರತ್ತು ಬದ್ಧವಾಗಿ ಈ ಇಲಾಖೆಗೆ ಸರ್ಕಾರ ವರ್ಗಾಯಿಸಿತ್ತು. ಆದರೆ ಸದರಿ ಜಮೀನಿನಲ್ಲಿ ವಸತಿ ಗೃಹಗಳ ನಿರ್ಮಾಣ ಮಾತ್ರಾ ಮಾಡಿದ್ದು ಧಾನವಾಗಿ ದಾನಿಗಳು ಹೆದ್ದಾರಿ ಸಮೀಪದಲ್ಲಿ ನೀಡಿದ್ದ ಜಮೀನಿನಲ್ಲಿ ಆರಕ್ಷಕ ಠಾಣೆ ನಿರ್ಮಿಸಲಾಗಿದೆ. ಸ.ನಂ. 29(ಈಗಿನ ಸ.ನಂ.305)ರಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ಅನುದಾನದಲ್ಲಿ ಶ್ರೀ ವಾಲ್ಮೀಕಿ ಚಿಂತನ ಭವನ ಹಾಗೂ ಪಾತಲಿಂಗೇಶ್ವರ ದೇವಸ್ಥಾನಗಳಿದ್ದು ಸದರಿ ದೇವಸ್ಥಾನಗಳಿಗಿದ್ದ ರಸ್ತೆಯನ್ನು ಆರಕ್ಷಕ ಇಲಾಖೆ ಮುಚ್ಚಿ ಹಾಕುವ ಪ್ರಯತ್ನ ನಡೆಸಿದೆ ಎಂದು ವಾಲ್ಮೀಕಿ ಸಮಾಜದ ಮುಖಂಡರು ಆರೋಪಿಸಿದ್ದಾರೆ.
ಆರಕ್ಷಕ ಇಲಾಖೆಯ ವಸತಿ ಗೃಹಗಳ ಸಮುಚ್ಚಯದ ಪಕ್ಕದಲ್ಲಿ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡುತ್ತಿದ್ದು ಈ ಕಾಂಪೌಂಡ್ ಗೋಡೆ ನಿರ್ಮಾಣವಾದಲ್ಲಿ ವಾಲ್ಮೀಕಿ ಭವನ ಹಾಗೂ ಪಾತಲಿಂಗೇಶ್ವರ ದೇವಸ್ಥಾನಗಳಿಗೆ ರಸ್ತೆ ಸಂಪರ್ಕವೇ ಇಲ್ಲದಂತಾಗುತ್ತದೆ. ಈ ಕೂಡಲೇ ತಡೆ ಗೋಡೆಯ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ತಹಶೀಲ್ದಾರ್ ಅವರಿಗೂ ಮನವಿ ನೀಡಲಾಗಿದೆ ಎಂದು ಸಮಾಜದ ಮುಖಂರು ತಿಳಿಸಿದ್ದಾರೆ.
ಚಿಂತನ ಭವನ ಟ್ರಸ್ಟ್ ಅಧ್ಯಕ್ಷ ಭಕ್ತರಾಮೇಗೌಡ ಸೇರಿದಂತೆ ಹಲವು ಪ್ರಮುಖರ ಮನವಿಗೆ ಸ್ಪಂಧಿಸಿದ ತಹಶೀಲ್ದಾರ್ ಮಮತಾ ತಾವರೇಕೆರೆಯ ಸದರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಸಮಾಜದ ಮುಖಂಡರಿಂದ ಮನವಿ ಸ್ವೀಕರಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಈ ಸಂಬಂಧ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮಮತಾ ಭರವಸೆ ನೀಡಿದರು.
ತಹಶೀಲ್ದಾರ್ ಅವರ ಭೇಟಿಯ ಸಂದರ್ಬದಲ್ಲಿ ವಾಲ್ಮೀಕಿ ನಾಯಕ ಕ್ರಿಯಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಧರಣಿಕುಮಾರ್, ಖಜಾಂಚಿ ರಂಗರಾಜು, ವಿ.ನಾಗರಾಜಯ್ಯ, ಮುದಿಮಡು ರಂಗಸ್ವಾಮಯ್ಯ, ದಲಿತ ಮುಖಂಡ ಜೆ.ಎನ್.ರಾಜಸಿಂಹ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








