ಹುಳಿಯಾರು : ಅಪಾಯ ಮಟ್ಟ ತಲುಪಿದ ನೀರಿನ ಸಮಸ್ಯೆ

ಹುಳಿಯಾರು : 

      ಜಿಲ್ಲಾಧಿಕಾರಿಗಳೆ ನಾವು ಹನಿ ಹನಿ ನೀರಿಗೂ ಹಾಹಾಕಾರ ಎದುರಿಸುತ್ತಿದ್ದೇವೆ. ಕೈ ಮುಗಿದು ಕೇಳ್ಕೋತ್ತೀವಿ ಜೀವ ಉಳಿಸಿಕೊಳ್ಳಲು ನೀರು ಕೊಡಿ. ನೀವೇನಾದ್ರೂ ಕೈ ಬಿಟ್ರೆ ನಮಗೆ ಸಾವೆ ಗತಿ. ಇದು ಹುಳಿಯಾರು ಹೋಬಳಿ ಹೊಯ್ಸಲಕಟ್ಟೆ ಗ್ರಾಮ ಪಂಚಾಯ್ತಿಯ ನೀರಿನ ಸಮಸ್ಯೆ ಎದುರಿಸುತ್ತಿರುವ ಐದಾರು ಹಳ್ಳಿಗಳ ನಿವಾಸಿಗಳ ಮನವಿಯಾಗಿದೆ.

      ಹೊಯ್ಸಲಕಟ್ಟೆ ಗ್ರಾಮ ಪಂಚಾಯ್ತಿಯ ಕಲ್ಲೇನಹಳ್ಳಿಯಲ್ಲಿ ಮೊದಲು ನೀರಿನ ಸಮಸ್ಯೆ ಆರಂಭವಾಯಿತು. ಸರಿಸುಮಾರು 300 ಮನೆಗಳ ಒಂದೂವರೆ ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಇಲ್ಲಿಗೆ ನೀರು ಪೂರೈಸುತ್ತಿದ್ದ 2 ಕೊಳವೆಬಾವಿಗಳ ಅಂತರ್ಜಲವು ಕಳೆದ 3 ತಿಂಗಳ ಹಿಂದೆ ಬರಿದಾಯಿತು. ಅಂದು ಪಂಚಾಯ್ತಿ ತಕ್ಷಣ ಸ್ಪಂಧಿಸಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಮುಂದಾಯಿತು. ಸತತ ಮೂರು-ನಾಲ್ಕು ತಿಂಗಳು ಟ್ಯಾಂಕರ್‍ನಲ್ಲಿ ನೀರು ಹೊಡೆದ ಪರಿಣಾಮ ಆ ಕೊಳವೆಬಾವಿಯಲ್ಲೂ ಈಗ ಅಂತರ್ಜಲ ಕಡಿಮೆಯಾಗಿದೆ. ದುರಾದೃಷ್ಠವಶ ಅಂತರ್ಜಲ ಎಲ್ಲಾವು ಬರಿದಾಗಿದೆ ಮುಂದೇನು ಗತಿ ಎನ್ನುವ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.

     ಇದೇ ಪಂಚಾಯ್ತಿಯ 250 ಮನೆಯ ಗ್ರಾಮವಾದಯಲೂ ಕಳೆದ 1 ತಿಂಗಳಿಂದ ನೀರಿನ ಹಾಹಾಕಾರ ಶುರುವಾಗಿದೆ. ಮೊದಲು ಇಲ್ಲಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಯಿತು. ಆಗ ಕೊಳವೆಬಾವಿಗೆ ಹೆಚ್ಚುವರಿ ಲೆಂತ್ ಬಿಟ್ಟ ಪರಿಣಾಮ ಒಂದಷ್ಟು ದಿನಗಳ ಕಾಲ ಅಷ್ಟೋಇಷ್ಟೋ ನೀರು ಬಂತು. ಈಗ ಸಂಪೂರ್ಣ ಅಂತರ್ಜಲ ಬರಿದಾಗಿ ಹನಿನೀರು ಬರದಂತ್ತಾಗಿದೆ. ಹಾಗಾಗಿ ಪಂಚಾಯ್ತಿಯಿಂದ ಟ್ಯಾಂಕರ್ ಮೂಲಕ ಇಲ್ಲಿಗೂ ನೀರು ಸರಬರಾಜು ಮಾಡಲಾಗುತ್ತಿದ್ದು. ಆದರೆ ಪಂಚಾಯ್ತಿಯಲ್ಲಿನ ಹಣದ ಸಮಸ್ಯೆಯಿಂದಾಗಿ ವಾರಕ್ಕೊಮ್ಮೆ ಮಾತ್ರ ಟ್ಯಾಂಕರ್ ನೀರು ಕೊಡುತ್ತಿದ್ದು ಈ ನೀರು ಏನಕ್ಕೂ ಸಾಲದಾಗಿದೆ.

     ಇನ್ನು ಈ ಪಂಚಾಯ್ತಿಯ ಬೆಂಚಿಹಟ್ಟಿ ಗ್ರಾಮದಲ್ಲೂ ನೀರಿನ ಸಮಸ್ಯೆಯಿದ್ದು ಒಂದೂವರೆ ಕಿ.ಮೀ ದೂರದಿಂದ ನೀರನ್ನು ಹೊತ್ತು ತರುವ ಅನಿವಾರ್ಯತೆ ಸೃಷ್ಠಿಯಾಗಿದೆ. ಅಲ್ಲದೆ ತಿಮ್ಮಪ್ಪನಹಟ್ಟಿ ಹಾಗೂ ಜಯಚಂದ್ರ ನಗರದಲ್ಲೂ ನೀರಿನ ಅಭಾವವಿದ್ದು ಈ ಗ್ರಾಮಗಳಿಗೆ ಏಳೆಂಟು ನೂರು ಮೀಟರ್ ದೂರದ ಕೊಳವೆಬಾವಿಯಿಂದ ಪೈಪ್ ಲೈನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಈ ಕೊಳವೆಬಾವಿಯಲ್ಲಿ ಅಂತರ್ಜಲ ಕಡಿಮೆಯಾಗಿದ್ದು ಟ್ಯಾಂಕರ್ ಮೂಲಕ ನೀರು ಪೂರೈಕೆ ಅನಿವಾರ್ಯವಾಗಿದೆ. ಆದರೆ ಪಂಚಾಯ್ತಿಯ ಹಣದ ಸಮಸ್ಯೆಯಿಂದ ಟ್ಯಾಂಕರ್ ಸಪ್ಲೈಯ್ ಆರಂಭವಾಗದೆ ಇಲ್ಲಿನ ಜನ ನೀರಿಗೆ ಪರದಾಡುವಂತ್ತಾಗಿದೆ.

      ನೀರಿನ ಸಮಸ್ಯೆಗಳಿರುವ ಗ್ರಾಮದ ನಿವಾಸಿಗಳು ರೈತರು ಮತ್ತು ಕೂಲಿ ಕಾರ್ಮಿಕರಾಗಿದ್ದಾರೆ. ಟ್ರ್ಯಾಂಕರ್ ಮೂಲಕ ನೀರು ಸರಬರಾಜು ಸ್ಥಗಿತವಾದರೆ ಅಕ್ಕಪಕ್ಕದ ಜಮೀನುಗಳ ಮಾಲೀಕರಿಂದ ಕಾಡಿಬೇಡಿ ನೀರು ತರಬೇಕಿದೆ. ಹಗಲಿನ ವೇಳೆ ನೀರು ತರಲೋದರೆ ಕೂಲಿ ಇಲ್ಲ, ಕೂಲಿಗೋದರೆ ನೀರಿಲ್ಲ ಎನ್ನುವ ಪರಿಸ್ಥಿತಿ ಎದುರಿಸಬೇಕಿದೆ. ಇನ್ನು ತ್ರಿಫೇಸ್ ಕರೆಂಟ್ ಮಧ್ಯರಾತ್ರಿ ಇದ್ದಾಗ ವಿಷಜಂತುಗಳ, ಕಾಡುಪ್ರಾಣಿಗಳ ಭಯದಲ್ಲೂ ನೀರು ತರುವ ಅನಿವಾರ್ಯತೆ ಇದೆ. ಅಲ್ಲದೆ ಈ ಹಳ್ಳಿಗಳಲ್ಲಿ ಕುರಿ, ಮೇಕೆ, ಹಸು, ಇವೆಲ್ಲಕ್ಕೂ ನೀರು ಪೂರೈಸುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಬೇಸಿಗೆಯ ಆರಂಭದ ದಿನಗಳಲ್ಲೇ ಸಮಸ್ಯೆ ಮಿತಿಮೀರಿದ್ದು ಮುಂದಿನ ದಿನಗಳನ್ನು ಹೇಗೆ ಎದರಿಸುವುದು ಎನ್ನುವ ಆತಂಕ ಇಲ್ಲಿನ ನಿವಾಸಿಗಳ ಸವಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link