ತುಮಕೂರು :
ನಗರದಲ್ಲಿ ಮಹಾನಗರಪಾಲಿಕೆ, ಜಿಲ್ಲಾಡಳಿತ ಕೈಗೊಂಡ ಕ್ರಮಗಳಿಂದ ಸೋಂಕಿನ ಪಾಸಿಟಿವಿಟಿ ಪ್ರಮಾಣವೇನೋ ತಗ್ಗಿದೆ. ಆದರೆ ನಗರದ ಖಾಲಿ ಜಾಗಗಳಲ್ಲಿ ಕೋವಿಡ್ ಸೋಂಕಿತರು, ಸೋಂಕಿನಿಂದ ಸತ್ತವರು ಬಳಕೆ ಮಾಡಿದ ವಸ್ತುಗಳನ್ನು ಕಸದ ವಾಹನಗಳಿಗೆ ಹಾಕದೆ ಖಾಲಿ ನಿವೇಶನ, ಮೈದಾನ, ಕೆರೆ ಕುಂಟೆಗಳ ಬಳಿ ಎಸೆಯುತ್ತಿರುವುದು ಸೋಂಕು ವಿಸ್ತರಿಸುವ ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ ಸೋಂಕು ವಿಸ್ತರಣೆ ತಡೆಗೆ ಎಲ್ಲರೂ ಮಾಸ್ಕ್ ಧರಿಸುವುದು ಸದ್ಯ ಕಡ್ಡಾಯವಾಗಿದೆ. ಅನೇಕರು ಪುನರ್‍ಬಳಸಬಹುದಾದ ಮಾಸ್ಕ್ ಅನ್ನು ಬಳಸುತ್ತಿರುವರಾದರೂ ಬಹುತೇಕರು ಐದು-ಹತ್ತು ರೂ.ಗಳ ಸರ್ಜಿಕಲ್ ಮಾಸ್ಕ್ ಅನ್ನು ಬಳಸಿ ಕಸ ಸಂಗ್ರಹಣ ವಾಹನಗಳಿಗೆ ಹಾಕದೇ ರಸ್ತೆ, ಖಾಲಿನಿವೇಶನಗಳಿಗೆ ಬಿಸಾಡುತ್ತಿರುವುದು ಕಂಡುಬಂದಿದ್ದು, ಬಳಸಿ ಬಿಸಾಡಿದ ಹಗುರದ ಸರ್ಜಿಕಲ್ ಮಾಸ್ಕ್‍ಗಳು ಗಾಳಿಗೆ ಮನೆಯಂಗಳಕ್ಕೆ ರಸ್ತೆ ಮಧ್ಯಕ್ಕೆ ತೂರಿಬರುತ್ತಿವೆಯಲ್ಲದೆ, ನಾಯಿ, ಹಂದಿಗಳನ್ನು ಅವನ್ನು ಮೂಸಿ ಬಾಯಲ್ಲಿ ಕಚ್ಚಿ ಎಳೆದಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಬಡ್ಡಿಹಳ್ಳಿ ಕೆರೆ ಬಳಿ ಬಿದ್ದಿದೆ ಹಾಸಿಗೆ, ಬಟ್ಟೆ :
ಇನ್ನೂ ಕೋವಿಡ್ ಪಾಸಿಟಿವ್ ಆದವರು ಹಾಗೂ ಸೋಂಕಿನಿಂದ ಸತ್ತವರು ಬಳಸುತ್ತಿದ್ದ ಹಾಸಿಗೆ ದಿಂಬು, ಬೆಡ್‍ಶೀಟ್, ಟ್ಯಾಬ್ಲೆಟ್ ಸ್ಯಾಚೆಟ್, ಇಂಜೆಕ್ಷನ್ ವೇಲ್‍ಗಳನ್ನು ಯಾರಿಗೂ ಕಾಣದಂತೆ ಹೆದ್ದಾರಿ ಬದಿ, ಕೆರೆ ಬದಿ, ಖಾಲಿ ಮೈದಾನ, ನಿವೇಶನಗಳಿಗೆ ರಾತ್ರಿವೇಳೆ ಹೋಗಿ ಕಾಣದಂತೆ ಹಾಕುತ್ತಿರುವುದು ಹೆಚ್ಚಾಗಿದ್ದು, ನಗರದ ಬಡ್ಡಿಹಳ್ಳಿ ಕೆರೆಗೆ ಹೊಂದಿಕೊಂಡಿರುವ ಜನರು ವಾಯುವಿಹಾರಕ್ಕೆ ಬಳಸುವ ವಿಶಾಲ ಖಾಲಿ ಜಾಗದಲ್ಲಿ ಎಸೆದಿರುವುದೇ ಇದಕ್ಕೆ ನಿದರ್ಶನವೆನಿಸಿದೆ. ಇದನ್ನು ಹಂದಿ, ನಾಯಿಗಳು ಸಹ ಎಳೆದಾಡುತ್ತಿದ್ದು, ಪ್ರಾಣಿಗಳಿಗೆ ಆರೋಗ್ಯ ತೊಂದರೆ ಕಾಣಿಸಿಕೊಂಡರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ.
ಸೋಂಕಿತರೆಂದು ಗುರುತಿಸಿದರೆ …!:
ಜನರು ವಾಕಿಂಗ್ ಮಾಡುವ ಮೈದಾನಗಳು, ಸಂಚಾರಕ್ಕೆ ಬಳಸುವ ರಸ್ತೆಗಳಲ್ಲಿ ಸೋಂಕಿತರು ಬಳಸಲ್ಪಡುತ್ತಿದ್ದ ಪರಿಕರುಗಳು, ಬಟ್ಟೆಯನ್ನು ಗಂಟುಕಟ್ಟಿ ಎಸೆಯುತ್ತಿರುವುದರಿಂದ ಜನತೆ ಮೈದಾನ, ರಸ್ತೆಯಲ್ಲಿ ಓಡಾಡಲು ಹಿಂಜರಿಕೆ ಪಡುವಂತಾಗಿದ್ದು, ಕಸ ಸಂಗ್ರಹಣ ವಾಹನಕ್ಕೆ ಹಾಕಿದರೆ ಎಲ್ಲಿ ತಮ್ಮ ನೆರೆ ಹೊರೆಯವರಿಗೆ ಸೋಂಕಿತರೆಂದು ಗೊತ್ತಾಗುಬಿಡುತ್ತದೆ ಎನ್ನುವ ಜನರಲ್ಲಿನ ಕೀಳರಿಮೆ ಭಾವನೆ ಇಂತಹ ಕೃತ್ಯಗಳಿಗೆ ಕಾರಣವಾಗಿದೆ. ಇನ್ನೂ ಕಸ ತುಂಬಿದ ವಾಹನಗಳಲ್ಲೂ ಗಾಳಿಗೆ ತೂರುಬರುತ್ತಿರುವ ಸರ್ಜಿಕಲ್ ಮಾಸ್ಕ್‍ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗುತ್ತಿದೆ.
ಪ್ರತ್ಯೇಕ ವಿಂಗಡಣೆ ಮಾಡದೆ ಕಸ :
ಪ್ರತ್ಯೇಕ ಪಾಲಿಕೆಯಿಂದ ಕಸ ಸಂಗ್ರಹಣೆ ವಾಹನ ನಗರದ ಬೀದಿ-ಬೀದಿಗೆ ದಿನ ಬಿಟ್ಟು ದಿನಕ್ಕೊಮ್ಮೆಯಂತೆ ಬರುತ್ತಿದ್ದು ಹಸಿಕಸ, ಒಣಕಸ, ಮನೆಯಲ್ಲಿ ಬಳಸುವ ಸ್ಯಾನಿಟರಿ, ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಹಾಕಲು ವ್ಯವಸ್ಥೆ ಮಾಡಲಾಗಿದೆ. ಹಸಿಕಸವನ್ನು ಹಾಗೆಯೇ ವಾಹನಕ್ಕೆ ಸುರಿಸಿಕೊಂಡರೆ, ಒಣಕಸ, ಪ್ಯಾಸ್ಟಿಕ್, ಮೆಡಿಕಲ್ ತ್ಯಾಜಕ್ಕಾಗಿಯೇ ಪ್ರತ್ಯೇಕ ಚೀಲಗಳಿಗೆ ಸುರಿಯಲು ಕೆಂಪು, ಹಳದಿ ಹೀಗೆ ಬೇರೆ ಬೇರೆ ಬಣ್ಣದ ಚೀಲುಗಳನ್ನು ಪಾಲಿಕೆ ನಿಗದಿ ಮಾಡಿದೆ. ಜೊತೆಗೆ ಪೌರಕಾರ್ಮಿಕರಿಗೆ ತಾವೂ ಕೈಯ್ಯಿಂದ ಕಸ ಸ್ವೀಕರಿಸದೆ ಜನರಿಂದಲೇ ಪ್ರತ್ಯೇಕ ಚೀಲಗಳಿಗೆ ಸಂಬಂಧಿಸಿದ ತ್ಯಾಜ್ಯ ಸುರಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಅನೇಕರು ಪ್ರತ್ಯೇಕಗೊಳಿಸದೆ ಒಣಕಸಕ್ಕೆ ಸ್ಯಾನಿಟರಿ, ಮೆಡಿಕಲ್ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಇನ್ನೂ ಸ್ಯಾನಿಟರಿ ಪ್ಯಾಡ್‍ಗಳು, ಮಾಸ್ಕ್‍ಗಳನ್ನು ಯಾರಿಗೂ ಕಾಣದಂತೆ ಚರಂಡಿ, ಯುಜಿಡಿ, ರಸ್ತೆ ಬದಿಗಳಿಗೆ ಎಸೆಯಲ್ಪಡುತ್ತಿದ್ದು, ಇದನ್ನು ಕಸದ ವಾಹನಕ್ಕೆ ಹಾಕಲು ಮಹಿಳೆಯರು ಪಡುತ್ತಿರುವ ಮುಜುಗರ, ಹಿಂಜರಿಕೆ ಸಮಾಜದ ಸ್ವಾಸ್ಥ್ಯದ ಮೇಲೆ ಪ್ರತಿಕೂಲಪರಿಣಾಮ ಬೀರುತ್ತಿದೆ.
ಡ್ರೈನ್‍ಗೆ ಸ್ಯಾನಿಟರಿ ತ್ಯಾಜ್ಯ, ಪಾಲಿಕೆಯಿಂದ ದಂಡ:
ಸ್ಯಾನಿಟರಿ ಪ್ಯಾಡ್‍ಗಳು, ಮಕ್ಕಳಿಗೆ ಹಾಕುವ ಪ್ಯಾಂಪರ್ಸ್ ಪ್ಯಾಡ್‍ಗಳನ್ನು ಸಹ ಕಾಣದಂತೆ ಚರಂಡಿ, ರಾಜಗಾಲುವೆಗಳಿಗೆ ತಂದು ಹಾಕುತ್ತಿರುವುದು ಕಂಡುಬಂದಿದ್ದು, ಮೇ 31 ಸೋಮವಾರ ಸಹ ತುಮಕೂರಿನ ಬಿ.ಎಚ್.ರಸ್ತೆಗೆ ಹೊಂದಿಕೊಂಡಿರುವ ತೋಟಗಾರಿಕಾ ಇಲಾಖೆ ಕಾಂಪೌಂಡ್‍ಗೆ ಲಗತ್ತಾದ ಡ್ರೈನ್‍ನಲ್ಲಿ ಪ್ಯಾಕೆಟ್‍ಗಟ್ಟಲೇ ಸ್ಯಾನಿಟರಿ, ಊಟಕ್ಕೆ ಬಳಸಿದ ತಟ್ಟೆ, ಇತರೆ ಅನುಪಯುಕ್ತ ವಸ್ತುಗಳನ್ನು ಎಸೆಯಲಾಗಿದ್ದು, ಜಾಲತಾಣಗಳಲ್ಲಿ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್ ಪೋಸ್ಟ್ ಹಾಕುತ್ತಿದ್ದಂತೆ ಪಾಲಿಕೆ ಎಚ್ಚೆತ್ತಿದೆ. ಸಂಬಂಧಿಸಿದವರನ್ನು ಪತ್ತೆ ಮಾಡಿ ಪಾಲಿಕೆಯಿಂದ 10,000 ದಂಡ ವಿಧಿಸಿರುವುದಾಗಿ ಆರೋಗ್ಯಾಧಿಕಾರಿ ಡಾ.ರಕ್ಷಿತ್‍ಕುಮಾರ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಹೆಚ್ಚಳ, ಮೆಡಿಕಲ್ ತ್ಯಾಜ್ಯವೇ 1 ಟನ್:
ಸದ್ಯ ಲಾಕ್‍ಡೌನ್‍ನಿಂದಾಗಿ ಇಕಾಮರ್ಸ್ ಆನ್‍ಲೈನ್ ವಹಿವಾಟುಗಳು ಹೆಚ್ಚಿದ್ದು, ಮನೆಗೆ ಬೇಕಾದ ಅಗತ್ಯ ಪರಿಕರಗಳನ್ನು ಆನ್‍ಲೈನ್ ಸಂಸೈಗಳಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಪ್ಲಾಸ್ಟಿಕ್ ಕವರಿಂಗ್ ಅಧಿಕವಾಗಿದ್ದು, ಹೊಟೇಲ್, ರೆಸ್ಟೊರೆಂಟ್‍ಗಳು ಮಾಡುತ್ತಿರುವ ಪಾರ್ಸೆಲ್‍ಗಳಲ್ಲೂ ಪ್ಲಾಸ್ಟಿಕ್ ಕವರ್‍ಗಳು ಹೆಚ್ಚಾಗಿ ಬಳಸಲ್ಪಡುತ್ತಿವೆ. ದಿನವೊಂದಕ್ಕೆ ಸಂಗ್ರಹವಾಗುತ್ತಿರುವ 140 ಟನ್‍ಗಳಲ್ಲಿ ನಾಲ್ಕೈದು ಟನ್ ಪ್ಲಾಸ್ಟಿಕ್ ಸಿಗುತ್ತಿದ್ದು, ಆಸ್ಪತ್ರೆ ಹೊರತಾದ ಮನೆಯಲ್ಲಿ ಉಳಿದು ಬಿಸಾಡುವ ಟ್ಯಾಬ್ಲೆಟ್, ಖಾಲಿಯಾದ ಟಾನಿಕ್ ಬಾಟೆಲ್‍ಗಳು, ಮಧುಮೇಹಕ್ಕೆ ಪಡೆಯುವ ಇನ್ಸುಲಿನ್, ಮಾಸ್ಕ್ ಮೊದಲಾದ ಗೃಹ ಬಳಕೆ ಮೆಡಿಕಲ್ ತ್ಯಾಜ್ಯವೇ 1 ಟನ್ ಸಿಗುತ್ತಿದೆ ಎಂದು ಪಾಲಿಕೆ ಪರಿಸರ ಅಭಿಯಂತರ ಕೃಷ್ಣಮೂರ್ತಿ ಅವರು ಪ್ರತಿಕ್ರಿಯಿಸಿದ್ದಾರೆ.
ಎಲ್ಲೆಂದರಲ್ಲಿ ಬಿಸಾಡದೆ ಸೋಂಕಿತರ ಪರಿಕರಗಳನ್ನು ಈ ರೀತಿ ವಿಲೇ ಮಾಡಿ :
ಸೋಂಕಿತರು ಬಳಸಿದ ಪರಿಕರಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ವೈಜ್ಞಾನಿಕವಾಗಿ ಸೂಕ್ತ ವಿಲೇವಾರಿ ಅಗತ್ಯ. ಬಳಸಿದ ವಸ್ತು ಬಟ್ಟೆ ಬರೆಗಳನ್ನು ಮೊದಲು ಸೋಡಿಯಂ ಹೈಪ್ರೊಕ್ಲೋರೈಡ್ ದ್ರಾವಣ ಸಿಂಪಡಿಸಿ ಡಿಸ್ ಇಂಫೆಕ್ಟ್ ಮಾಡಬೇಕು. . ದ್ರಾವಣ ಬಳಸುವಾಗ 4: 1 ಅನುಪಾತವಿರಲಿ.(4 ಲೀಟರ್‍ನೀರಿಗೆ 1 ಲೀಟರ್ ದ್ರಾವಣ ಸೇರಿಸಬೇಕು.) ನಂತರ ಸೂಕ್ತರೀತಿಯಲ್ಲೇ ಸುಡುವುದೋ, ಯಾರು ಮಟ್ಟಲು ಅವಕಾಶವಾಗದ ಬಯಲು ಸ್ಥಳದಲ್ಲಿ 4 ದಿನ ಇಟ್ಟು ತ್ಯಾಜ್ಯ ವಾಹನಕ್ಕೆ ಹಾಕುವುದು ಮಾಡಬೇಕು. ಸೋಂಕಿತರ ಬಟ್ಟೆಗಳನ್ನು, ಬೆಡ್‍ಶೀಟ್‍ಗಳನ್ನು ಒಗೆಯುವಾಗಲೂ ಸೋಡಿಯಂಹೈಪ್ರೊಕ್ಲೋರೈಡ್ ದ್ರಾವಣ ಹಾಕಿ 30 ನಿಮಿಷ ನೆನೆಸಿ ನಂತರ ಒಗೆಯಬೇಕು. ಈ ಪ್ರಕ್ರಿಯೆಯಲ್ಲಿ ಹ್ಯಾಂಡ್‍ಗ್ಲ್ಯಾಸ್ ಮಾಸ್ಕ್ ಧರಿಸಿರಬೇಕು. ರಸ್ತೆ, ಮೈದಾನದಲ್ಲಿ ಎಸೆದು ಪ್ರಾಣಿಗಲೂ ಮೂಸಿ ಅವುಗಳ ಆರೋಗ್ಯ, ಓಡಾಡುವ ಜನರ ಆರೋಗ್ಯಕ್ಕೆ ಧಕ್ಕೆ ತರಬಾರದು ಎಂದು ಪೃಥ್ವಿನಿನಾದ್ ಆಸ್ಪತ್ರೆಯ ಮೈಕ್ರೊ ಬಯಾಲಿಜಿಸ್ಟ್ ಡಾ.ಪ್ರಶಾಂತ್ ಪರಿಹಾರ ಸೂಚಿಸಿದ್ದಾರೆ.
ಯಾರೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ವೈದ್ಯಕೀಯ ತ್ಯಾಜ್ಯ, ಮಾಸ್ಕ್ ಸೋಂಕಿತರ ಉಪಯೋಗಿಸಿದ ವಸ್ತುಗಳನ್ನು ಎಸೆಯಬಾರದು. ಪೌರಕಾರ್ಮಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ ಕಸಸಂಗ್ರಹಣ ವಾಹನಕ್ಕೆ ಹಾಕಿ. ಈರೀತಿ ಹಾಕಿದ್ದು ಮುಂದುವರಿದಲ್ಲಿ ಕ್ರಮ ಜರುಗಿಸಲಾಗುವುದು.
-ರೇಣುಕಾ, ಮಹಾನಗರಪಾಲಿಕೆ ಆಯುಕ್ತರು.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ