ದೋಷಪೂರಿತ ವೆಂಟಿಲೇಟರ್ ; ಅಮ್ಲಜನಕ-ಲಸಿಕೆ ವಿತರಣೆಯಲ್ಲಿ ಲೋಪ!!

 ತುಮಕೂರು :  

      ದೇಶದ ವಿವಿಧ ನ್ಯಾಯಾಲಯಗಳು ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿವೆ. ಕೊರೊನಾ ಎರಡನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸಲಾಗದ ರೀತಿ ನೀತಿಗಳ ವಿರುದ್ಧ ಹೈಕೋರ್ಟ್‍ಗಳು ಕೆಂಡಕಾರುತ್ತಿವೆ. ಜನಸಾಮಾನ್ಯರು ಬೀದಿಬೀದಿಯಲ್ಲಿ ಸಾಯುತ್ತಿರುವುದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಬೇಕೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಕರ್ನಾಟಕ ಹೈಕೋರ್ಟ್‍ನಿಂದ ಹಿಡಿದು ದೇಶದ ವಿವಿಧ ಉಚ್ಛ ನ್ಯಾಯಾಲಯಗಳು, ಸರ್ವೋಚ್ಛ ನ್ಯಾಯಾಲಯವೂ ಕೇಂದ್ರ ಸರ್ಕಾರದ ಕಿವಿ ಹಿಂಡುತ್ತಿವೆ.

      ಮುಖ್ಯವಾಗಿ ನ್ಯಾಯಾಲಯಗಳು ಸರ್ಕಾರದ ವಿರುದ್ಧ ಸಿಡಿದೇಳಲು ಆಮ್ಲಜನಕ ಪೂರೈಕೆಯಲ್ಲಿ ತಾರತಮ್ಯ, ಲಸಿಕಾ ನೀತಿಯ ಅಸಮರ್ಪಕತೆ-ಅಭಿಯಾನದ ಹೆಸರಿನಲ್ಲಿ ಪೊಳ್ಳು ಪ್ರಚಾರ, ಜೀವ ರಕ್ಷಕಗಳ ವಿಷಯದಲ್ಲಿ ಸುಳ್ಳು ಮಾಹಿತಿ, ಪಿ.ಎಂ.ಕೇರ್ಸ್ ನಿಧಿ ಅಡಿಯಲ್ಲಿ ಪೂರೈಸಿರುವ ವೆಂಟಿಲೇಟರ್‍ಗಳು ಉಪಯೋಗಕ್ಕೆ ಬಾರದೆ ಇರುವುದು, ಆರೋಗ್ಯ ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ಸುಸೂತ್ರವಾಗಿ ನಿಭಾಯಿಸಲು ಸಾಧ್ಯವಾಗದ ಸ್ಥಿತಿ… ಇತ್ಯಾದಿ… ಇತ್ಯಾದಿ ವಿಷಯಗಳು ಕೋರ್ಟ್‍ಗಳ ಕೆಂಗಣ್ಣಿಗೆ ಗುರಿಯಾಗಿವೆ. ಮಾಹಿತಿ ಪಡೆದುಕೊಂಡ ನ್ಯಾಯಾಲಯಗಳು ವಸ್ತುಸ್ಥಿತಿ ಮರೆಮಾಚುತ್ತಿರುವ ನಿರ್ಧಾರಗಳು ಮತ್ತು ಹೇಳಿಕೆಗಳ ವಿರುದ್ಧ ಕಟುವಾಗಿಯೇ ಚಾಟಿ ಬೀಸುತ್ತಿವೆ.
ಬಹುಶಃ ಕೇಂದ್ರವೂ ಸೇರಿದಂತೆ ರಾಜ್ಯ ಸರ್ಕಾರಗಳು ನ್ಯಾಯಾಲಯಗಳ ಈ ಪರಿಯ ಟೀಕೆಯನ್ನು ನಿರೀಕ್ಷಿಸಿರಲಾರವು. ಅಷ್ಟರ ಮಟ್ಟಿಗೆ ನ್ಯಾಯಾಲಯಗಳು ಕ್ರಿಯಾಶೀಲವಾದಂತೆ ಕಾಣುತ್ತಿವೆ. ಕಾರ್ಯಾಂಗದ ಕರ್ತವ್ಯಲೋಪವಾದಾಗ ಅದನ್ನು ಕ್ರಿಯಾಶೀಲಗೊಳಿಸುವುದು ನ್ಯಾಯಾಂಗದ ಹೊಣೆಗಾರಿಕೆ. ಆ ಕೆಲಸವನ್ನು ನ್ಯಾಯಾಂಗ ಈಗ ನಿರ್ವಹಿಸುತ್ತಿರುವಂತೆ ಕಾಣುತ್ತಿದೆ.

ದೇಶಾದ್ಯಂತ ವಕ್ಕರಿಸಿರುವ ಕೊರೊನಾ ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ವೆಂಟಿಲೇಟರ್‍ಗಳನ್ನು ರಾಜ್ಯಗಳಿಗೆ ಪೂರೈಸುತ್ತಿದೆ. ಪಿ.ಎಂ.ಕೇರ್ಸ್ ಯೋಜನೆಯಡಿ ಒದಗಿಸುತ್ತಿರುವ ವೆಂಟಿಲೇಟರ್‍ಗಳು ಕಳಪೆ ಗುಣಮಟ್ಟದ್ದಾಗಿದ್ದು, ಇಂತಹ ಕಳಪೆ ಸಾಧನಗಳನ್ನು ವಿತಿರುಸುತ್ತಿರುವುದೇಕೆ ಎಂದು ನ್ಯಾಯಾಲಯಗಳು ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿವೆ.
ಪಿ.ಎಂ.ಕೇರ್ಸ್ ಅಡಿ ರಾಜ್ಯಕ್ಕೆ ಒದಗಿಸಿರುವ 2913 ವೆಂಟಿಲೇಟರ್‍ಗಳ ಪೈಕಿ ಅರ್ಧದಷ್ಟು ಅಳವಡಿಕೆಯೇ ಆಗದೆ ಆಸ್ಪತ್ರೆಗಳ ಗೋಡೌನ್‍ನಲ್ಲಿ ಧೂಳು ಹಿಡಿಯುತ್ತಿವೆ. ಅಳವಡಿಸಿರುವ ವೆಂಟಿಲೇಟರ್‍ಗಳಲ್ಲೂ ಹೆಚ್ಚಿನವು ಬಳಕೆಯಾಗದ ಸ್ಥಿತಿಯಲ್ಲಿವೆ. ಕಳಪೆ ಗುಣಮಟ್ಟದ ಜೊತೆಗೆ ತಾಂತ್ರಿಕ ಸಮಸ್ಯೆಗಳೂ ಇವೆ. ಆದರೆ ಇವೆಲ್ಲವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲ. ಕೇಂದ್ರ ಸರ್ಕಾರವನ್ನು ಮೆಚ್ಚಿಸಲಿಕ್ಕೋ ಅಥವಾ ಹುಳುಕು ಬಯಲಾಗಬಹುದೆಂಬ ಆತಂಕವೋ? ಜನರಲ್ಲಿ ತಪ್ಪು ಭಾವನೆ ಉಂಟಾಗದಿರಲೆಂಬ ಮನೋಭಾವವೋ…! ಅಂತೂ ಎಲ್ಲವೂ ಸರಿ ಇದೆ ಎನ್ನುವ ಹೇಳಿಕೆ ಸರ್ಕಾರದ್ದಾಗಿದೆ.

      ಕೊರೊನಾ ಮೊದಲನೆ ಅಲೆಯ ವೇಳೆ 2025, ಎರಡನೆ ಅಲೆಗೂ ಮುನ್ನ 888 ವೆಂಟಿಲೇಟರ್‍ಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಒದಗಿಸಿದೆ. ಇವುಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ಹಂಚಿಕೆ ಮಾಡಿದೆ. ಆದರೆ ಬಹಳಷ್ಟು ವೆಂಟಿಲೇಟರ್‍ಗಳು ಅಳವಡಿಕೆಯೇ ಆಗಿಲ್ಲ. ಧೂಳು ಹಿಡಿಯುತ್ತಿವೆ. ಇನ್ನು ಕೆಲವು ಬಳಕೆಯಾಗದ ಪರಿಸ್ಥಿತಿಯಲ್ಲಿವೆ.
ಪಿ.ಎಂ.ಕೇರ್ಸ್ ಎನ್ನುವುದು ದೇಶದ ಜನರೆ ನೀಡಿರುವ ಹಣ. ಸಂಕಷ್ಟ ಕಾಲಕ್ಕೆ ಎಂಬಂತೆ ರೂಪಿತವಾಗಿರುವ ನಿಧಿ ಇದು. ಆದರೆ ಈ ನಿಧಿಯನ್ನು ಕೇಂದ್ರ ಸರ್ಕಾರ ಅತ್ಯಂತ ನಿರ್ಲಕ್ಷ್ಯದಿಂದ ಗುತ್ತಿಗೆ ನೀಡಿ ಕಳಪೆ ಗುಣಮಟ್ಟದ ವೆಂಟಿಲೇಟರ್‍ಗಳನ್ನು ಪೂರೈಸಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಸಾರ್ವಜನಿಕರ ಹಣವನ್ನು ಹೀಗೆ ಪೋಲು ಮಾಡುವುದು ಸರಿಯೇ..? ಇದು ವಿರೋಧ ಪಕ್ಷಗಳ ಟೀಕೆಯಲ್ಲ, ಸ್ವಯಂ ಪ್ರೇರಿತವಾಗಿ ನ್ಯಾಯಾಲಯಗಳೇ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳಿವು.

      ಕರ್ನಾಟಕ ಸರ್ಕಾರಕ್ಕೆ ಪಿ.ಎಂ.ಕೇರ್ಸ್ ಅಡಿಯಲ್ಲಿ ನಾಲ್ಕು ಕಂಪನಿಗಳ ವೆಂಟಿಲೇಟರ್‍ಗಳು ಪೂರೈಕೆಯಾಗಿವೆ. ಇವುಗಳನ್ನು ಕೆಲವು ಆಸ್ಪತ್ರೆಗಳು ಅಳವಡಿಸಿಕೊಂಡರೂ ಪ್ರಯೋಜನಕ್ಕೆ ಬರದಂತಾಗಿವೆ. ಇನ್ನು ಕೆಲವು ಕಡೆ ಗೋಡೌನ್‍ನಲ್ಲಿ ಎಸೆಯಲಾಗಿದೆ. ಗುಣಮಟ್ಟವೂ ಸರಿಯಿಲ್ಲ, ಅದರ ನಿರ್ವಹಣೆಯೂ ಕಷ್ಟಸಾಧ್ಯ ಎಂಬದನ್ನರಿತು ಯಾರೂ ಅತ್ತ ತಲೆಕೆಡಿಸಿಕೊಳ್ಳುತ್ತಿಲ್ಲ.

ಪಿ.ಎಂ.ಕೇರ್ಸ್ ಅಡಿ ರಾಜ್ಯಕ್ಕೆ 2800 ವೆಂಟಿಲೇಟರ್‍ಗಳನ್ನು ಕೇಂದ್ರ ನೀಡಿತ್ತು. ನಾಲ್ಕು ಕಂಪನಿಗಳು ಉಪಕರಣಗಳನ್ನು ಪೂರೈಸಿರುವುದರಿಂದ ಪ್ರತಿಯೊಂದರ ತಂತ್ರಜ್ಞಾನವೂ ಬೇರೆ ಬೇರೆ ರೀತಿ ಇದೆ. ವೆಂಟಿಲೇಟರ್ ತಯಾರಿಕಾ ಕಂಪನಿಗಳೇ ಸಿಬ್ಬಂದಿಗಳಿಗೆ ನಿರ್ವಹಣೆಯ ತರಬೇತಿ ನೀಡಬೇಕು. ಆದರೆ ಆ ಕೆಲಸವೇ ಆಗಿಲ್ಲ. ಇನ್ನೊಂದೆಡೆ ವೆಂಟಿಲೇಟರ್‍ಗಳಲ್ಲೂ ಮಾಸ್ಕ್ ವ್ಯತ್ಯಾಸವಿದ್ದು, ಅವುಗಳನ್ನು ಬಳಸಲಾಗುತ್ತಿಲ್ಲ. ಇನ್ನು ಆಸ್ಪತ್ರೆಗಳಲ್ಲಂತೂ ಅದನ್ನು ನಿರ್ವಹಣೆ ಮಾಡಬೇಕಾದ ತಜ್ಞರು ಮತ್ತು ಸಿಬ್ಬಂದಿಗಳ ಕೊರತೆಯಿಂದಾಗಿ ಇದ್ದರೂ ಬಳಕೆ ಮಾಡಲಾಗದಂತಹ ಪರಿಸ್ಥಿತಿ ಇದೆ.

ಪಿ.ಎಂ.ಕೇರ್ಸ್ ಅಡಿ ಪೂರೈಸಿರುವ ವೆಂಟಿಲೇಟರ್‍ಗಳ ಗುಣಮಟ್ಟವನ್ನು ಮೊದಲು ಪ್ರಶ್ನಿಸಿದ್ದು ಮಹಾರಾಷ್ಟ್ರ ಸರ್ಕಾರ. ಕೇಂದ್ರ ಸರ್ಕಾರವು ತನ್ನ ತಪ್ಪನ್ನು ಒಪ್ಪಿಕೊಂಡು ಬದಲಿಸಿಕೊಡುವುದಾಗಿ ಹೇಳಿದೆ. ಇದೇ ರೀತಿ ದೇಶದ ವಿವಿಧ ಕಡೆಗಳಲ್ಲಿ ವೆಂಟಿಲೇಟರ್‍ಗಳ ಬಗ್ಗೆ ಅಸಮಾಧಾನದ ನುಡಿಗಳು ಭುಗಿಲೆದ್ದಿವೆ. ದೋಷಯುಕ್ತ ವೆಂಟಿಲೇಟರ್‍ಗಳಿಂದಾಗಿ ರೋಗಿಗಳು ಸಾವಾದರೆ ಅದಕ್ಕೆ ಕೇಂದ್ರವೇ ಹೊಣೆಯಾಗಲಿದೆ ಎಂದು ಬಾಂಬೆ ಹೈಕೋರ್ಟ್ ಕೇಂದ್ರಕ್ಕೆ ಎಚ್ಚರಿಸಿದೆ.

      ವೆಂಟಿಲೇಟರ್‍ಗಳ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಇಂತಹ ಪ್ರಮಾದ ಹಾಗೂ ಇದರಿಂದಾಗುವ ಹಣಕಾಸಿನ ಆರೋಗ್ಯದ ಹಾನಿಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದೆ.

ಒಂದೇ ಸರ್ಕಾರವಿದ್ದರೂ ಸಮಸ್ಯೆ :

      ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಆಡಳಿತ ಸುಗಮ ಎಂದು ಹೇಳಲಾಗುತ್ತದೆ. ಚುನಾವಣಾ ಸಮಯದಲ್ಲಿ ಬಿಜೆಪಿ ಇದನ್ನೇ ಹೇಳುತ್ತಿತ್ತು. ಈಗ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ ಕೇಂದ್ರ ಸರ್ಕಾರ ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಗುಜರಾತ್ ಮತ್ತಿತರ ರಾಜ್ಯಗಳಿಗೆ ನೀಡಿದಷ್ಟು ಆದ್ಯತೆಯನ್ನು ಇಲ್ಲಿ ನೀಡುತ್ತಿಲ್ಲ. ಇದು ಬಿಜೆಪಿಯೊಳಗಿರುವವರೆಗೂ ಗೊತ್ತು. ಆದರೆ ಮಾತನಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ.

ಕೋರ್ಟ್ ಎಚ್ಚರಿಕೆಯಿಂದ ಬಂತು ಜೀವರಕ್ಷಕ :

      ಕರ್ನಾಟಕ ಸರ್ಕಾರಕ್ಕೆ ಕೇಂದ್ರದಿಂದ ಪೂರೈಕೆಯಾಗುತ್ತಿದ್ದ ಆಮ್ಲಜನಕ ಕಡಿಮೆ ಪ್ರಮಾಣದಲ್ಲಿತ್ತು. 850 ಟನ್‍ಗಳಷ್ಟು ಮಾತ್ರ ಪೂರೈಸುತ್ತಿದ್ದ ಕೇಂದ್ರಕ್ಕೆ ರಾಜ್ಯ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡು ರಾಜ್ಯದ ಪಾಲಿನ ಆಮ್ಲಜನಕವನ್ನು ಕೂಡಲೇ ಪೂರೈಸುವಂತೆ ತಾಕೀತು ಮಾಡಿತು. ರಾಜ್ಯ ಹೈಕೋರ್ಟ್‍ನ ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಪ್ರಯೋಜನವಾಗಲಿಲ್ಲ. ಅನಿವಾರ್ಯವಾಗಿ ರಾಜ್ಯಕ್ಕೆ 1200 ಟನ್ ಆಮ್ಲಜನಕವನ್ನು ಪೂರೈಕೆ ಮಾಡಬೇಕಾಗಿ ಬಂತು. ಒಂದು ವೇಳೆ ಹೈಕೋರ್ಟ್ ಈ ಆದೇಶ ನೀಡದೆ ಹೋಗಿದ್ದರೆ ರಾಜ್ಯಕ್ಕೆ ಕಡಿಮೆ ಪ್ರಮಾಣದ ಆಮ್ಲಜನಕ ಪೂರೈಕೆಯಾಗಿ ಜೀವರಕ್ಷಕ ವಿಷಯಗಳಲ್ಲಿ ಭಾರೀ ಪ್ರಮಾದ ಉಂಟಾಗುತ್ತಿತ್ತು.

ಸಾವಿಗೆ ಹೊಣೆ ಎಂದಿದ್ದೇಕೆ..? 

     ಗುಜರಾತ್ ಕಂಪನಿಯೊಂದು ಪಿ.ಎಂ.ಕೇರ್ಸ್ ಫಂಡ್ ಮೂಲಕ ಸರಬರಾಜು ಮಾಡಿದ ವೆಂಟಿಲೇಟರ್‍ಗಳು ದೋಷಪೂರಿತವಾಗಿವೆ ಎಂಬುದನ್ನು ಮನಗಂಡ ಬಾಂಬೆ ಹೈಕೋರ್ಟ್ ಕೇಂದ್ರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇಂತಹ ದೋಷಯುಕ್ತ ವೆಂಟಿಲೇಟರ್‍ಗಳ ಪೂರೈಕೆಯಿಂದಾಗಿ ಕೋವಿಡ್ ರೋಗಿಗಳು ಸಾವಿಗೀಡಾದರೆ ಅದಕ್ಕೆ ಕೇಂದ್ರವೇ ಹೊಣೆ ಎಂದು ಕಟುವಾದ ಶಬ್ದಗಳಲ್ಲಿ ಟೀಕಿಸಿದೆ. ಚಿಕಿತ್ಸೆ ನೀಡುವ ಸಂದರ್ಭದಲ್ಲೇ ವೆಂಟಿಲೇಟರ್‍ಗಳು ಉಪಯೋಗಕ್ಕೆ ಬಾರದೆ ಹೋದರೆ ಇದಕ್ಕೆ ಆಗುವ ನಷ್ಟಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದೆ.

ಕಳಪೆ ಉಪಕರಣ ಪೂರೈಕೆಯಾದರೂ ಕ್ರಮವಿಲ್ಲ :

      ಖಾಸಗಿ ವಲಯದ ಕಾರ್ಪೋರೇಟ್ ಕಂಪನಿಗಳು, ಉದ್ಯಮಿಗಳು, ದಾನಿಗಳು, ಸಾರ್ವಜನಿಕ ಸಂಘಟನೆಗಳು ಸೇರಿದಂತೆ ಹಲವರು ಅಪಾರ ಪ್ರಮಾಣದಲ್ಲಿ ಪಿ.ಎಂ.ಕೇರ್ಸ್‍ಗೆ ಹಣ ಸಂದಾಯ ಮಾಡಿವೆ. ಈ ಹಣದಲ್ಲಿ ಅಗತ್ಯ ಉಪಕರಣಗಳನ್ನು ಖರೀದಿಸಲಾಗಿದೆ. ಕಳಪೆ ಉಪಕರಣಗಳನ್ನು ಪ್ಯಾಕ್ ಮಾಡಿ ರಾಜ್ಯಗಳಿಗೆ ರವಾನಿಸಲಾಗಿದೆ. ಇದಕ್ಕೂ ಮುನ್ನ ಗುಣಮಟ್ಟ ಸರಿಯಾಗಿ ಪ್ರಮಾಣೀಕರಿಸಿಲ್ಲ. ಆದರೆ ಈವರೆಗೂ ಕಳಪೆ ಗುಣಮಟ್ಟದಿಂದ ಕೂಡಿರುವ ವೆಂಟಿಲೇಟರ್‍ಗಳನ್ನು ಪೂರೈಸಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿರುವ ಉದಾಹರಣೆಗಳು ಕಂಡುಬಂದಿಲ್ಲ. ಇಂತಹ ಕಂಪನಿಗಳ ವಿರುದ್ಧ ಕ್ರಮ ಜರುಗಿಸುವಂತೆ ವೈದ್ಯಕೀಯ ವಲಯ ಒತ್ತಾಯಿಸುತ್ತಲೇ ಇದೆ. ಏಕೆಂದರೆ ಹೊಣೆಗಾರಿಕೆ ಮತ್ತು ಕೆಟ್ಟ ಹೆಸರು ಹೊರಬೇಕಾದವರು ಅಂತಿಮವಾಗಿ ಆಸ್ಪತ್ರೆಗಳಲ್ಲಿರುವ ವೈದ್ಯರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link