ಕೊರಟಗೆರೆ :
ಸೂರು ಇಲ್ಲದ ಜನರಿಗೆ ಸೂರು ಕಲ್ಪಿಸುವ ರಾಜ್ಯ ಸರ್ಕಾರದ ಯೋಜನೆ ಬಡವರಿಗೆ ಹಾಗೂ ನಿರ್ಗತಿಕರಿಗೆ ಮರೀಚಿಕೆಯಾಗಿದೆ. ಕೆಲವು ಅಧಿಕಾರಿಗಳು ಸ್ಥಳೀಯ ರಾಜಕಾರಣಿಗಳ ಮಾತಿಗೆ ಕಿವಿಗೊಟ್ಟು, ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ನಿವೇಶನಗಳನ್ನು ಉಳ್ಳವರ ಪಾಲಾಗಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ತಾಲ್ಲೂಕು ಬೈಚಾಪುರ ಗ್ರಾಪಂ ವ್ಯಾಪ್ತಿಯ ಗೊಡ್ರಹಳ್ಳಿ ಗ್ರಾಮದಲ್ಲಿ ಈ ಆರೋಪ ಕೇಳಿ ಬಮದಿದೆ. ಇಲ್ಲಿನ ಗ್ರಾಪಂ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು, ಪ್ರಭಾವಿಗಳ ಕೃಪೆಗೆ ಹಾಗೂ ಉಳ್ಳವರ ಪಾಲಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೈಚಾಪುರ ಗ್ರಾಪಂಗೆ ಸೇರಿದ ಗೊಡ್ರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಗ್ರಾಪಂ ವತಿಯಿಂದ ನಿವೇಶನ ರಹಿತ ನಿರ್ಗತಿಕರಿಗೆ ಸೂರು ಕಲ್ಪ್ಪಿಸುವ ದೃಷ್ಟಿಯಿಂದ, ಊರಿಗೆ ಹೊಂದಿಕೊಂಡಂತಿದ್ದ ಕಟ್ಟೆಕೆರೆ ಎಂಬ ಚಿಕ್ಕಕಟ್ಟೆ ಬಳಿ, 10-15 ಕುಂಟೆಯಷ್ಟು ಸರ್ಕಾರಿ ಕರಾಬು ಜಮೀನಿನಲ್ಲಿ 10 ನಿವೇಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ಈಗಾಗಲೆ ಮೂರು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಒಬ್ಬರನ್ನು ಹೊರತು ಪಡಿಸಿ ಉಳಿದ ಉಳ್ಳವರಿಗೇ ಇಬ್ಬರಿಗೆ ಹಂಚಿಕೆ ಮಾಡಲಾಗಿದೆ ಎಂದು ಗ್ರಾಪಂ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೊಡ್ರಹಳ್ಳಿ ಗ್ರಾಮದಲ್ಲಿ ಬಹಳಷ್ಟು ಜನ ವಸತಿ ರಹಿತರಿದ್ದು, 10 ಜನರಿಗೆ ಈಗ ತ್ವರಿತವಾಗಿ ನಿವೇಶನ ನೀಡಲು ಬೈಚಾಪುರ ಗ್ರಾಪಂ ಯೋಜನೆ ರೂಪಿಸಿದೆ. ಇದರಲ್ಲಿ ಈಗಾಗಲೆ 10 ಮಂದಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಪುಟ್ಟಬಸಯ್ಯ, ನರಸಿಂಹಮೂರ್ತಿ, ಪಾಂಡುರಂಗಯ್ಯ ಎಂಬುವರಿಗೆ ಗ್ರಾಪಂ ವತಿಯಿಂದ ನಿವೇಶನ ಹಂಚಿಕೆಯಾಗಿದೆ. ಇದರಲ್ಲಿ ನರಸಿಂಹಮೂರ್ತಿ ಮಾತ್ರ ಅರ್ಹ ಫಲಾನುಭವಿಯಾಗಿದ್ದು, ಉಳಿದಂತೆ ಪುಟ್ಟಬಸಯ್ಯನಿಗೆ ಪ್ರಸಕ್ತವಾಗಿ 2-3 ಸೈಟ್ ಗಳಾಗುವಷ್ಟು ಜಾಗವಿದೆ. ಬಸ್‍ಸ್ಟ್ಯಾಂಡ್‍ನಲ್ಲಿ ಹೋಲ್‍ಸೇಲ್ ಅಂಗಡಿ, ಜೊತೆಗೆ ದೊಡ್ಡ ಗೋಡಾನ್, ಕಾರು, ಟೆಂಪೋ, ಟಾಟಾ ಎಸಿ, ದ್ವಿಚಕ್ರ ವಾಹನಗಳಿವೆ. ಮತ್ತೆ ಪಾಂಡುರಂಗಯ್ಯನಿಗೆ ಆಟೋ, ಫ್ಲೋರ್‍ಮಿಲ್, 2 ಮನೆ ಸೇರಿದಂತೆ 2 ದ್ವಿಚಕ್ರ ವಾಹನಗಳಿವೆ. ಇಂತಹವರಿಗೆ ಬೈಚಾಪುರ ಗ್ರಾಪಂ ನಿವೇಶನ ನೀಡಿರುವುದು ನೋಡಿದರೆ, ಉಳ್ಳವರ ಹಣ ಕೆಲಸ ಮಾಡಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಇದರಿಂದ ನಿವೇಶನ ರಹಿತರಿಗೆ ಅನ್ಯಾಯವಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವೀರಶೈವರ ರುದ್ರ ಭೂಮಿ ಒತ್ತುವರಿ :
ಬೈಚಾಪುರ ಗ್ರಾಪಂ ಕಳೆದ 2005-2006 ರಲ್ಲಿ 2.5 ಗುಂಟೆ ಜಮೀನನ್ನು ಜೆಜೆಎಂ ನಕ್ಷೆ ಮೂಲಕ ಜೆಜೆಎಂ ಯೋಜನೆಯಡಿ ಗುರ್ತಿಸಿ ಮೀಸಲಿಡಲಾಗಿತ್ತು. ಆದರೆ ಈಗ ದಾಖಲಾತಿಯಿದ್ದರೆ ತನ್ನಿ ಎಂದು ಉಡಾಫೆ ಉತ್ತರ ನೀಡುತ್ತಾ ಗ್ರಾಪಂ ಒತ್ತುವರಿ ಮಾಡಿಕೊಂಡಿದೆ ಎಂದು ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದಾರೆ.
ಹಣಕ್ಕಾಗಿ ಡೀಲ್ :
ನಿವೇಶನ ಹಂಚಿಕೆ ವಿಚಾರದಲ್ಲಿ ಗ್ರಾಪಂನಲ್ಲಿ ಹಣಕ್ಕಾಗಿ ಡೀಲ್ ನಡೆದಿದೆ. ಒಂದು ನಿವೇಶನಕ್ಕೆ 8-10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಠೇವಣಿ ರೂಪದಲ್ಲಿ ಕಟ್ಟಬೇಕು ಎಂದು ಗ್ರಾಪಂನಲ್ಲಿ ನಿರ್ಧರಿಸಲಾಗಿದೆ. ಆದರೂ ಸಹ ಇಲ್ಲಿನ ಅಧಿಕಾರಿ ವರ್ಗ ಹಾಗೂ ಕೆಲವು ಚುನಾಯಿತ ಪ್ರತಿನಿಧಿಗಳು ಶಾಮೀಲಾಗಿ 30-35 ಸಾವಿರ ಹಣ ಪೀಕಿಕೊಂಡು ಉಳ್ಳವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಶಾಲಾ ಮಕ್ಕಳ ಆಟದ ಮೈದಾನ ಒತ್ತುವರಿ : ಗ್ರಾಪಂಯಿಂದ ಹಂಚಿಕೆ ಮಾಡಲು ಉದ್ದೇಶಿಸಿರುವ ಜಾಗ ಶಾಲಾ ಮೈದಾನಕ್ಕೆ ಮೀಸಲಿದೆ. ಅದನ್ನು ಒತ್ತುವರಿ ಮಾಡಿ ಉಳ್ಳವರಿಗೆ ನಿವೇಶನ ಹಂಚಿಕೆ ಮಾಡಿರುವುದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ. ಶಾಲಾ ಮಕ್ಕಳಿಗೆ ಆಟದ ಮೈದಾನದ ಕೊರತೆ ಇದೆ ಎಂದು ಆಟದ ಮೈದಾನಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ಈಗ ಕೋವಿಡ್ ಸಂಕಷ್ಟ ಕಾಲದಲ್ಲಿ ಶಾಲೆ ಮುಚ್ಚಿರುವ ಸಂದರ್ಭದಲ್ಲಿ ಗ್ರಾಪಂನಿಂದ ತರಾತುರಿಯಲ್ಲಿ ನಿವೇಶನ ಹಂಚಿಕೆ ಕಾರ್ಯ ಮಾಡಿರುವುದು ಸಹ ಹಲವು ಸ್ಥಳೀಯರ ಆಕ್ರೋಶಕೆ ಕಾರಣವಾಗಿದೆ.
ಸ್ಥಳೀಯ ಗ್ರಾಮಸ್ಥರುಗಳಾದ ಮೋಹನ್, ಮಂಜೇಶ್, ಲಕ್ಷ್ಮೀಪತಿ, ಶಶಿಕುಮಾರ್, ತಿಮ್ಮರಾಜು ಸೇರಿದಂತೆ ಹಲವು ಗ್ರಾಮಸ್ಥರು ಗ್ರಾಪಂಯ ಈ ನಡವಳಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
