ತುಮಕೂರು : ಕ್ಯಾಂಟರ್-ಟಿಪ್ಪರ್ ನಡುವೆ ಡಿಕ್ಕಿ : ಓರ್ವ ಮೃತ!

 ತುಮಕೂರು :

      ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಗೆ ಪೂಜೆ ಸಲ್ಲಿಸಿ ಊರಿನತ್ತ ವಾಪಸ್ಸಾಗುತ್ತಿದ್ದವರು ಪ್ರಯಾಣಿಸುತ್ತಿದ್ದ ಕ್ಯಾಂಟರ್ ವಾಹನಕ್ಕೆ ಎದುರಿನಿಂದ ಬಂದ ಟಿಪ್ಪರ್ ಅಪ್ಪಳಿಸಿದ ಪರಿಣಾಮ ಸಿರಾ ಮೂಲದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, 23 ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು-ಹರ್ತಿಕೋಟೆ ಮಧ್ಯೆ ಬಾಲೇನಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ 7.30ರಲ್ಲಿ ನಡೆದಿದೆ.

      ಸಿರಾ ತಾಲ್ಲೂಕಿನ ದ್ವಾರನಕುಂಟೆಯ ರತ್ನಮ್ಮ(60) ಎಂಬುವರು ಅಪಘಾತದಲ್ಲಿ ಮೃತಪಟ್ಟರೆ, ಐಷರ್ ವಾಹನ ಚಾಲಕ ಸೇರಿ ಕ್ಯಾಂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಭಾರತಿ(52), ಮಹದೇವಮ್ಮ(50), ಸಾವಿತ್ರಮ್ಮ(50), ಸೀತಾರಾಮಯ್ಯ(55), ಮಾನಸ(25) ಹಾಗೂ ನಾಗಭೂಷಣ್(55) ಮತ್ತಿತರರಿಗೆ ಗಂಭೀರ ಪೆಟ್ಟಾಗಿ ಕೈ ಕಾಲು, ಭುಜ. ಸೊಂಟ ಮುರಿದಿದ್ದು,ತುಮಕೂರಿನ ಹೇಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಹಿನ್ನೆಲೆ :

      ಒಂದೇ ಕುಟುಂಬಕ್ಕೆ ಸೇರಿದ ಸಿರಾ ತಾಲೂಕಿನ ಕಾಮಗೊಂಡನಹಳ್ಳಿ, ದ್ವಾರನಕುಂಟೆ, ವೀರನಾಗನಹಳ್ಳಿ, ಕಾಳಿದಾಸ ನಗರದಲ್ಲಿ ನೆಲೆಸಿರುವ 30ಕ್ಕೂ ಅಧಿಕ ಸಂಬಂಧಿಗಳು ನಾಯಕನಹಟ್ಟಿ ಕ್ಷೇತ್ರಕ್ಕೆ ಹರಿಕೆ ತೀರಿಸಲೆಂದು ಐಷರ್ ವಾಹನದಲ್ಲಿ ಬುಧವಾರ ಬೆಳಿಗ್ಗೆಯೇ ಪ್ರಯಾಣ ಬೆಳೆಸಿದ್ದರು. ದರ್ಶನ ಮುಗಿಸಿ ಸಂಜೆ ಊರಿಗೆ ಚಳ್ಳಕರೆ -ಹಿರಿಯೂರು ಮಾರ್ಗವಾಗಿ ಬರುತ್ತಿದ್ದಾಗ ಬಾಲೇನಹಳ್ಳಿ ಬಳಿ ಎದುರಿನಿಂದ ಬರುತ್ತಿದ್ದ ಜಲ್ಲಿ ಟಿಪ್ಪರ್ ಅಪ್ಪಳಿಸಿ ದುರ್ಘಟನೆ ನಡೆದಿದ್ದು, ಐಷರ್ ಒಳಗಿದ್ದವರಿಗೆ ಏನಾಯಿತು ಎಂದು ತಿಳಿಯುವಷ್ಟರಲ್ಲೇ 20ಕ್ಕೂ ಅಧಿಕ ಮಂದಿಯ ಕೈಕಾಲು, ಭುಜ, ಸೊಂಟಕ್ಕೆ ಪೆಟ್ಟುಗಳಾಗಿದ್ದವು. ಹರ್ತಿಕೋಟೆ ಗ್ರಾಮಸ್ಥರು ಹಾಗೂ ಹಿರಿಯೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಂಬುಲೆನ್ಸ್ ಮೂಲಕ ತುಮಕೂರು, ಬೆಂಗಳೂರಿಗೆ ರವಾನಿಸಲಾಯಿತು.

      ಅಪಘಾತದ ದುರ್ಘಟನೆಯಲ್ಲಿ ಮಹಿಳೆಯರು, ಶಿಕ್ಷಕರು ಉದ್ಯೋಗಸ್ಥ ಪುರುಷರಿಗೆ ಕೈ ಕಾಲು ಮುರಿದು ಪೆಟ್ಟುಗಳಾಗಿದ್ದು, ಮುಂದಿನ ಜೀವನದ ಬಗ್ಗೆ ಚಿಂತಾಕ್ರಾಂತರಾಗಿದ್ದರು. ಮನೆ ನಡೆಸುತ್ತಿದ್ದ ಮಹಿಳೆಯರೇ ಕೈ ಕಾಲು ಮುರಿದುಕೊಂಡಿದ್ದು, ಶಸ್ತ್ರಚಿಕಿತ್ಸೆಗೊಳಪಟ್ಟರೂ ಅಂಗಾಂಗಗಳು ಮೊದಲಿನಂತೆ ಸುಸ್ಥಿತಿಗೆ ಮರಳುತ್ತದೆ ಎಂಬುದು ಅನುಮಾನ ಎಂದು ದುಃಖಿತರಾಗಿ ಗಾಯಾಳುಗಳ ಸಂಬಂಧಿ ತಿಪ್ಪೇಸ್ವಾಮಿ ಅಳಲು ತೋಡಿಕೊಂಡರು. ಸದ್ಯ ಗಾಯಾಳುಗಳಲ್ಲಿ ಅಗತ್ಯವಿರುವವರಿಗೆ ಶಸ್ತ್ರಚಿಕಿತ್ಸೆಗೊಳಪಡಿಸುತ್ತಿದ್ದು, ಇನ್ನೊಂದು ವಾರಗಳ ಕಾಲ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯ ಡಾ.ಪ್ರಸಾದ್ ಮುರಗಪ್ಪಗೌಡ ಪ್ರಜಾಪ್ರಗತಿಗೆ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link