ಶಿವರಾಮ ಕಾರಂತ ಬಡಾವಣೆ ಸೈಟು ಹಂಚಿಕೆ : ರೈತರಿಗೆ ಮೊದಲ ಆಧ್ಯತೆ

ಬೆಂಗಳೂರು: 

    “ಇದೇ ತಿಂಗಳು 25 ರಿಂದ ಶಿವರಾಮ ಕಾರಂತ ಬಡಾವಣೆಯ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುವುದು. ಮೊದಲ ಆದ್ಯತೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.

     ಇಂದು ಬಿಡಿಎ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, ಶಿವರಾಮ ಕಾರಂತ ಬಡಾವಣೆ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿಗಳ ಪರಿಶೀಲನೆ ಮಾಡಿದ್ದೇವೆ. ಶಿವರಾಮ್ ಕಾರಂತ ಬಡಾವಣೆ ನಿವೇಶನಕ್ಕೆ ಆನ್ ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುವುದು. ಉಳಿದಂತೆ ಬೆಂಗಳೂರಿನ ವಿವಿಧ ಬಿಡಿಎ ಕಚೇರಿಗಳಲ್ಲಿ ಆಫ್ ಲೈನ್ ಮೂಲಕ ಅರ್ಜಿಗಳ ಸ್ವೀಕಾರ ಮಾಡಲಾಗುವುದು.

     ಅರ್ಜಿ ಹಾಕಿದ ನಂತರ ಅರ್ಜಿದಾರರು ಒಂದು ತಿಂಗಳಲ್ಲಿ ನಿವೇಶನದ ಒಟ್ಟು ಮೊತ್ತದ 12.5 %  ರಷ್ಟು ಆರಂಭಿಕ ಠೇವಣಿ ಕಟ್ಟಬೇಕು. ಪರಿಶಿಷ್ಟರು 5 % ರಷ್ಟು ಠೇವಣಿ ಕಟ್ಟಬೇಕು. ಬಹಳ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗುವುದು. ಯಾರು ಬೇಕಾದರೂ ಮಾಹಿತಿ ಪಡೆಯಲು ಹಾಗೂ ನೋಡಲು ಅವಕಾಶ ಕಲ್ಪಿಸಲಾಗುವುದು. ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

    ಶಿವರಾಮ ಕಾರಂತ ಬಡಾವಣೆಯಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣಕ್ಕೆ 45 ಅಡಿ ರಸ್ತೆ ಇರುವ ಕಡೆ 25-30 ಎಕರೆ ಜಾಗ ಗುರುತಿಸಲಾಗಿದೆ. ಕಂಠೀರವ ಕ್ರೀಡಾಂಗಣ ಮಾದರಿಯಲ್ಲಿ ಬೆಂಗಳೂರು ಉತ್ತರ ಭಾಗದಲ್ಲಿ ಮತ್ತೊಂದು ಕ್ರೀಡಾಂಗಣ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ. ಸಿಎ ನಿವೇಶನ, ಪಾರ್ಕ್ ಎಲ್ಲವೂ ಇದೆ. ಇಲ್ಲಿ ಶೇ.42 ರಷ್ಟು ಜಾಗದಲ್ಲಿ ನಿವೇಶನ ಮಾಡಲಾಗಿದ್ದು, ಉಳಿದ ಜಾಗವನ್ನು ಅಗಲವಾದ ರಸ್ತೆ ಹಾಗೂ ಇತರೆ ಸೌಕರ್ಯಕ್ಕೆ ಬಳಸಲಾಗಿದೆ.

 
    ಶಿವರಾಮ ಕಾರಂತ ಲೇಔಟ್ ಸಂಬಂಧ ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ 3069 ಎಕರೆಯನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಲಾಗಿದೆ. 17 ಗ್ರಾಮದಲ್ಲಿ ಒಟ್ಟು 18 ಸಾವಿರ ಮಂದಿ ಭೂಮಿ ಕಳೆದುಕೊಂಡಿದ್ದು, ಅವರಿಗೆ ಮೊದಲ ಆದ್ಯತೆಯಲ್ಲಿ ಶೇ. 40 ರಷ್ಟು ನಿವೇಶನಗಳನ್ನು ನೀಡಲಾಗುವುದು. ಅವರದೇ ಜಮೀನಿನಲ್ಲಿ ನಿವೇಶನ ನೀಡಲಾಗುವುದು. ಸಾಧ್ಯವಾಗದಿದ್ದರೆ ಅವರದೇ ಊರಿನಲ್ಲಿ ಸೈಟ್ ನೀಡಲಾಗುವುದು. ಭೂ ಸಂತ್ರಸ್ತರು ಎಲ್ಲಾ ದಿಕ್ಕಿನ ನಿವೇಶನಗಳನ್ನು ಪಡೆಯಲು ಸಿದ್ಧರಿರಬೇಕು. ನಮಗೆ ನಿರ್ದಿಷ್ಟ ದಿಕ್ಕಿನ ನಿವೇಶನ ಬೇಕು ಎಂದು ಪಟ್ಟು ಹಿಡಿಯುವಂತಿಲ್ಲ ಎಂದರು.
     ಈ ಬಡವಾಣೆಯಲ್ಲಿ 9500 ನಿವೇಶನಗಳನ್ನು ಭೂಮಿ ಕಳೆದುಕೊಂಡವರಿಗೆ ನೀಡಬೇಕಾಗಿದೆ. 4750 ಕ್ಕೂ ಹೆಚ್ಚು ಕಾರ್ನರ್ ನಿವೇಶನಗಳನ್ನು ಕಾನೂನಿನ ಪ್ರಕಾರದಂತೆ ಇ-ಹರಾಜು ಹಾಕಲಾಗುವುದು. ಉಳಿದ 10 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಜನರಿಗೆ ಹಂಚಿಕೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಗೆ 9 ಬ್ಯಾಂಕುಗಳನ್ನು ಗುರುತಿಸಿದ್ದೇವೆ ಎಂದರು.
 
    ಬೆಂಗಳೂರಿನ ಉತ್ತರದಲ್ಲಿ ಫೆರಿಫೆರಲ್ ರಿಂಗ್ ರಸ್ತೆ ಮಾಡಲು ತೀರ್ಮಾನಿಸಿದ್ದು, ಬಹಳ ಒತ್ತಡವಿದ್ದರೂ ಇದರ ಡಿನೋಟಿಫಿಕೇಶನ್ ಮಾಡುವುದಿಲ್ಲ. ಇದಕ್ಕೆ ಈಗ ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC)ಎಂದು ನಾಮಕರಣ ಮಾಡಿದ್ದೇವೆ. ಮುಂದಿನ ಒಂದು ವಾರದಲ್ಲಿ ಈ ರಸ್ತೆಯ ಗ್ಲೋಬಲ್ ಟೆಂಡರ್ ಕರೆಯಲಾಗುವುದು. ಯಾರು ಬೇಕಾದರೂ ಭಾಗವಹಿಸಬಹುದು. ಭೂಮಿ ಕಳೆದುಕೊಳ್ಳುವ ರೈತರಿಗೆ ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಸೂಕ್ತ ಪರಿಹಾರ ನೀಡುತ್ತೇವೆ ಎಂದರು.
    ಬಿಬಿಸಿ ಸೇರಿದಂತೆ ಯಾವುದೇ ಯೋಜನೆಗೆ ಒಮ್ಮೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ ನಂತರ ಅದನ್ನು ಡಿನೋಟಿಫಿಕೇಶನ್ ಮಾಡುವುದಿಲ್ಲ ಎಂಬ ತೀರ್ಮಾನ ಮಾಡಲಾಗಿದೆ ಎಂದು ಶಿವಕುಮಾರ್ ಅವರು ತಿಳಿಸಿದರು.
    ಕೆಂಪೇಗೌಡ ಬಡಾವಣೆಯ ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ. ಹೆಬ್ಬಾಳ ಜಂಕ್ಷನ್ ನಲ್ಲಿ ಹೊಸ ಲೂಪ್ ರಸ್ತೆ ಸೇರಿಸಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ. 3278 ವಸತಿ ಮನೆಗಳನ್ನು ಆದಷ್ಟು ಬೇಗ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap