ತುಮಕೂರು :

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿ ಕೆಲಸ ಮಾಡಲು ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅವಕಾಶಗಳಿದ್ದು, ಗ್ರಾಮೀಣ ಭಾಗದ ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿದ್ಯಾಕುಮಾರಿ ಕರೆ ನೀಡಿದರು.
ಜಿಲ್ಲೆಯ ಕೊರಟಗೆರೆ ತಾಲ್ಲೂಕು ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೇನಹಳ್ಳಿ ಗ್ರಾಮದ ಮಾದೇನಹಳ್ಳಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಅವರು, ಕೆರೆಯಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳೊಂದಿಗೆ ಕೆಲ ಕಾಲ ಚರ್ಚೆ ನಡೆಸಿ ಅವರು ಮಾತನಾಡಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯು ಅತ್ಯಂತ ಉತ್ತಮ ಯೋಜನೆಯಾಗಿದ್ದು, ಗ್ರಾಮೀಣ ಭಾಗದ ಜನರಿಗೆ ವರ್ಷದಲ್ಲಿ ಕನಿಷ್ಟ 100 ದಿನಗಳ ಉದ್ಯೋಗವನ್ನು ನೀಡುವ ಮಹತ್ವದ ಕಾಯಿದೆ ಇದಾಗಿದೆ. ಈ ಯೋಜನೆಯಡಿ ಗಂಡು-ಹೆಣ್ಣಿಗೆ ಯಾವುದೇ ತಾರತಮ್ಯವಿಲ್ಲದೆ ಸಮಾನ ಕೂಲಿ ದಿನವೊಂದಕ್ಕೆ 289/- ರೂಪಾಯಿ ಹಾಗೂ ಕೂಲಿ ಕಾರ್ಮಿಕರೇ ಕೆಲಸಕ್ಕೆ ಸಲಕರಣೆಗಳನ್ನು ತಂದರೆ ಅದಕ್ಕೆ ದಿನವೊಂದಕ್ಕೆ ಸಲಕರಣೆಗಳ ವೆಚ್ಚ 10/- ರೂಪಾಯಿ ಸೇರಿ ಒಬ್ಬರಿಗೆ ದಿನವೊಂದಕ್ಕೆ 299/- ರೂಪಾಯಿ ಹಣವನ್ನು ನೀಡಲಾಗುವುದು. ಗ್ರಾಮದ ಪ್ರತಿಯೊಂದು ಕುಟುಂಬವೂ ವರ್ಷದಲ್ಲಿ ಕನಿಷ್ಟ 100 ದಿನಗಳ ಕೆಲಸ ಮಾಡಿದರೆ ಅವರ ಕುಟುಂಬಕ್ಕೆ 29,900/- ರೂಪಾಯಿ ಹಣ ದೊರೆಯಲಿದೆ. ಸ್ಥಳೀಯವಾಗಿಯೇ ವರ್ಷದಲ್ಲಿ 100 ದಿನ ಕೆಲಸ ಮಾಡಿ ಹಣ ಸಂಪಾದನೆ ಮಾಡುವುದರಿಂದ ವಲಸೆ ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
ಮಹಿಳೆಯರು ನರೇಗಾ ಯೋಜನೆಯಡಿ ಮಾಡಬಹುದಾದ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸುವಂತೆ ಸಲಹೆ ನೀಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವಂತಹ ನರೇಗಾ ಕಾಮಗಾರಿಗಳಲ್ಲಿ ಉದ್ಯೋಗಚೀಟಿ ಹೊಂದಿರುವ ಪ್ರತೀ ಕುಟುಂಬದ ಸದಸ್ಯರೂ ಭಾಗವಹಿಸುವ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ಡಾ. ವಿದ್ಯಾಕುಮಾರಿರವರು ತಿಳಿಸಿದರು.
ಇದೇ ವೇಳೆ ಕಾಮಗಾರಿ ಸ್ಥಳದಲ್ಲಿಯೇ ಆಯೋಜಿಸಿದ್ದ ರೋಜ್ಗಾರ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಮಹಿಳೆಯರು ಗುಂಪು ಗುಂಪಾಗಿ ಸಂಘಗಳ ಮೂಲಕ ನರೇಗಾ ಕಾಮಗಾರಿಗಳಲ್ಲಿ ಭಾಗವಹಿಸುವುದರಿಂದ ಕಾಮಗಾರಿಯು ಹೆಚ್ಚು ಗುಣಮಟ್ಟದಿಂದ ಕೂಡಿರುತ್ತದೆ ಎಂದು ಕೆಲಸಕ್ಕೆ ಹೊಸದಾಗಿ ಬೇಡಿಕೆ ಸಲ್ಲಿಸಲು ಆಗಮಿಸಿದ್ದ ಅರಸಾಪುರ ಗ್ರಾಮದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಾಮಾಜಿಕ ಪರಿಶೋಧಕ ಚಂದ್ರಣ್ಣ, ಗಜೇಂದ್ರ, ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ(ಗ್ರಾ.ಉ.) ಬಿ.ಎಸ್.ಕುಮಾರಸ್ವಾಮಿ, ತಾಲ್ಲೂಕು ಐ.ಇ.ಸಿ. ಸಂಯೋಜಕ ಟಿ.ಕೆ.ವಿನುತ್, ತಾಲ್ಲೂಕು ತಾಂತ್ರಿಕ ಸಂಯೋಜಕ ಹರಿಪ್ರಸಾದ್, ತಾಲ್ಲೂಕು ಸಾಮಾಜಿಕ ಪರಿಶೋಧಕ ಲೋಕೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪವಿತ್ರ, ಬಿಎಫ್‍ಟಿ ಸುರೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








